
2006ರ ಎಂಜಿನಿಯರ್ ಆತ್ಮಹತ್ಯೆ ಪ್ರಕರಣ: ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆ
ಮಲೇಷ್ಯಾದ ಎಂಜಿನಿಯರ್ ಲೀ ಸೀ ಬೀನ್ ಆತ್ಮಹತ್ಯೆ ವೇಳೆ ಬರೆದಿಟ್ಟಿದ್ದ ಡೆತ್ ನೋಟ್‌ನಲ್ಲಿ ಜ್ಞಾನೇಶ್ ಕುಮಾರ್ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ತನಿಖೆಗೆ ಆದೇಶಿಸಿದೆ.
ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಭಾರಿ ಆರೋಪವೊಂದು ಕೇಳಿಬಂದಿದೆ. 2006ರಲ್ಲಿ ಕೇರಳ ಸರ್ಕಾರದ ಸಾರ್ವಜನಿಕ ನಿರ್ಮಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಮತ್ತು ಮಲೇಷ್ಯಾದ ಎಂಜಿನಿಯರ್ ಒಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಆದೇಶಿಸಿದ್ದಾರೆ.
ಈ ತನಿಖೆಯು ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದೆ. ಲೀ ಸೀ ಬೀನ್ ಅವರು ಕೇರಳ ರಾಜ್ಯ ಸಾರಿಗೆ ಯೋಜನೆಯ ಅಡಿಯಲ್ಲಿ ಎಂಸಿ ರಸ್ತೆಯ ಉನ್ನತೀಕರಣದ ಕಾಮಗಾರಿ ನಿರ್ವಹಿಸುತ್ತಿದ್ದ 'PATI-BEL' ಎಂಬ ಕನ್ಸೋರ್ಷಿಯಂನೊಂದಿಗೆ ಗುರುತಿಸಿಕೊಂಡಿದ್ದರು. 2006ರಲ್ಲಿ ಜ್ಞಾನೇಶ್ ಕುಮಾರ್ ಅವರು ಪಿಡಬ್ಲ್ಯುಡಿ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿಯೇ ಈ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಿಗಳ ಪ್ರಕಾರ, ಮೃತ ಎಂಜಿನಿಯರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್‌ನಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರು ಉಲ್ಲೇಖವಾಗಿತ್ತು. ಆ ಸಮಯದಲ್ಲಿ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆದಿತ್ತಾದರೂ, ಬಾಹ್ಯ ಒತ್ತಡಗಳಿಂದಾಗಿ ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ ಎಂಬ ಗಂಭೀರ ಆರೋಪಗಳು ಈಗ ಕೇಳಿಬಂದಿವೆ. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ರಮೇಶ್ ಚೆನ್ನಿತ್ತಲ, 2006ರ ಆ ತನಿಖೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಮರುಪರಿಶೀಲಿಸುವಂತೆ ವಿಜಿಲೆನ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ರಾಜಕೀಯ ವಿವಾದ - ಆರೋಪಗಳು
ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಹೊತ್ತಿನಲ್ಲೇ ಈ ಹಳೆಯ ಪ್ರಕರಣವನ್ನು ಕೆದಕಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಸ್ತುತ, ಜ್ಞಾನೇಶ್ ಕುಮಾರ್ ಅವರ ನಾಯಕತ್ವದಲ್ಲಿನ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಇದಕ್ಕೂ ಮುನ್ನ, ಭಾರತೀಯ ಚುನಾವಣಾ ಆಯೋಗದ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಸ್ ಅವರು ಕಳೆದ 10 ತಿಂಗಳಲ್ಲಿ ಎಲೆಕ್ಟೋರಲ್ ರೋಲ್, ಮತದಾರರ ನೋಂದಣಿ ಮತ್ತು ತಾಂತ್ರಿಕ ವ್ಯವಸ್ಥೆಗಳಿಗೆ ಸಂಬಂಧಿಸಿದ ಕನಿಷ್ಠ 14 ನಿರ್ಧಾರಗಳ ಬಗ್ಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿತ್ತು. ಆದರೆ, ಈ ವರದಿಯನ್ನು ಚುನಾವಣಾ ಆಯೋಗವು ಸಾರಾಸಗಟಾಗಿ ತಳ್ಳಿಹಾಕಿದೆ.
ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ತನ್ನ ಪ್ರಚಾರವನ್ನು ತೀವ್ರಗೊಳಿಸಿದೆ. ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಈ ಹೊಸ ವಿಜಿಲೆನ್ಸ್ ತನಿಖೆಯು ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ. ಪ್ರತಿಪಕ್ಷಗಳು ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿದ್ದು, ಅ.6ರಂದು ದೇಶವ್ಯಾಪಿ ಪ್ರದರ್ಶನಗಳು ಮತ್ತು ನ.1ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲು ಸಿದ್ಧತೆ ನಡೆಸಿವೆ. ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆಪಾದಿಸುತ್ತಿರುವ ವಿಪಕ್ಷಗಳು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಆಗ್ರಹಿಸುತ್ತಿವೆ.
ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು, ಈ ಆರೋಪಗಳು ತುಂಬಾ ಗಂಭೀರವಾಗಿದ್ದು, ಹೊರಗಿನ ಪ್ರಭಾವ ಅಥವಾ ಬಾಹ್ಯ ಹಸ್ತಕ್ಷೇಪ ನಡೆದಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. "2006ರಲ್ಲಿ ನಡೆದಿದ್ದೇನು ಎಂಬುದು ಸತ್ಯಾಸತ್ಯತೆ ಹೊರಬರಬೇಕಿದೆ. ಒಂದು ವೇಳೆ ತನಿಖೆಯಲ್ಲಿ ಯಾವುದೇ ಲೋಪ ಅಥವಾ ಒತ್ತಡ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯು ಜ್ಞಾನೇಶ್ ಕುಮಾರ್ ಅವರ ಮುಂದಿನ ದಿನಗಳ ರಾಜಕೀಯ ಮತ್ತು ವೃತ್ತಿಪರ ಭವಿಷ್ಯದ ಮೇಲೆ ಭಾರಿ ಪ್ರಭಾವ ಬೀರಲಿದೆ. ಮಲೇಷ್ಯಾದ ಇಂಜಿನಿಯರ್ ಆತ್ಮಹತ್ಯೆಯ ಹಳೆಯ ಕಡತಗಳು ಯಾವ ಸತ್ಯಗಳನ್ನು ತೆರೆದಿಡಲಿವೆ ಎಂಬುದನ್ನು ಕಾದು ನೋಡಬೇಕಿದೆ.
