
ಛತ್ತೀಸ್‌ಗಢದಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.
ಛತ್ತೀಸ್‌ಗಢದಲ್ಲಿ ಹಕ್ಕಿ ಜ್ವರದ ಅಬ್ಬರ: 4,400 ಕೋಳಿಗಳ ಸಾವು
ಬಿಲಾಸ್‌ಪುರದಲ್ಲಿ ಹಕ್ಕಿ ಜ್ವರದ ಅಬ್ಬರ: 4,400ಕ್ಕೂ ಹೆಚ್ಚು ಕೋಳಿಗಳ ಸಾವು. 10 ಕಿ.ಮೀ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.
ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಕಳೆದ ಕೆಲವೇ ದಿನಗಳಲ್ಲಿ ಸುಮಾರು 4,400 ಕೋಳಿಗಳು ಸಾವನ್ನಪ್ಪಿವೆ. ಕೋನಿ ಪ್ರದೇಶದಲ್ಲಿರುವ ಈ ಸರ್ಕಾರಿ ಫಾರಂನಲ್ಲಿ ಮಾರ್ಚ್ 19 ರಿಂದ 24 ರ ಅವಧಿಯಲ್ಲಿ ಈ ಸಾವುಗಳು ಸಂಭವಿಸಿವೆ.
ಈ ಬಗ್ಗೆ ಅಲ್ಲಿನ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿ.ಎಸ್. ತನ್ವರ್ ಖಚಿತಪಡಿಸಿದ್ದಾರೆ. ಈ ಫಾರಂನಲ್ಲಿ ಒಟ್ಟು 5,037 ಕೋಳಿಗಳಿದ್ದವು ಎಂದು ತಿಳಿದುಬಂದಿದೆ.
ಸಾವನ್ನಪ್ಪಿದ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ ಮತ್ತು ಪುಣೆಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದೀಗ ಭೋಪಾಲ್ ಪ್ರಯೋಗಾಲಯದ ವರದಿಯು ಹಕ್ಕಿ ಜ್ವರ ಇರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ್ ಅಗರ್ವಾಲ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸೋಂಕು ಹರಡದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶಿಸಿದ್ದಾರೆ. ರೋಗ ನಿಯಂತ್ರಣದ ಭಾಗವಾಗಿ ಫಾರಂನ ಸುತ್ತಲಿನ ಒಂದು ಕಿಲೋಮೀಟರ್ ಪ್ರದೇಶವನ್ನು 'ಸೋಂಕಿತ ವಲಯ' ಎಂದು ಮತ್ತು 10 ಕಿಲೋಮೀಟರ್ ವ್ಯಾಪ್ತಿಯನ್ನು 'ನಿಗಾ ವಲಯ' ಎಂದು ಘೋಷಿಸಲಾಗಿದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ, ಸೋಂಕಿತ ವಲಯದಲ್ಲಿರುವ ಎಲ್ಲಾ ಕೋಳಿಗಳು, ಅವುಗಳ ಆಹಾರ ಮತ್ತು ಮೊಟ್ಟೆಗಳನ್ನು ನಾಶಪಡಿಸಲಾಗುತ್ತದೆ. ಈ ಪ್ರದೇಶದಲ್ಲಿ ಕೋಳಿಗಳ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಷ್ಟ ಅನುಭವಿಸುವ ಮಾಲೀಕರಿಗೆ ಪಶುಸಂಗೋಪನಾ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಸೋಂಕಿತ ಪಕ್ಷಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮತ್ತು ಪರಿಸರವನ್ನು ಸ್ಯಾನಿಟೈಸ್ ಮಾಡಲು ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿ ಫಾರಂ ಕೆಲಸಗಾರರ ಆರೋಗ್ಯದ ಮೇಲೆಯೂ ನಿಗಾ ಇಡಲಾಗುತ್ತಿದ್ದು, ಯಾರಿಗಾದರೂ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಮನುಷ್ಯರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಜಾಗರೂಕತೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

