ಅಸ್ಸಾಂನಲ್ಲಿ ಮಾರ್ಚ್ 10ರಂದು 40 ಲಕ್ಷ ಮಹಿಳೆಯರ ಖಾತೆಗೆ 3,600 ಕೋಟಿ ರೂ. ಜಮೆ
x

ಅಸ್ಸಾಂನಲ್ಲಿ ಮಾರ್ಚ್ 10ರಂದು 40 ಲಕ್ಷ ಮಹಿಳೆಯರ ಖಾತೆಗೆ 3,600 ಕೋಟಿ ರೂ. ಜಮೆ

ಫೇಸ್‌ಬುಕ್ ಲೈವ್ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಹಿಮಂತ​ ಬಿಸ್ವಾ ಶರ್ಮಾ ಬರುವ ಮಂಗಳವಾರ ಬೆಳಗ್ಗೆ 10.30ಕ್ಕೆ 40 ಲಕ್ಷ ಕುಟುಂಬಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.


Click the Play button to hear this message in audio format

ಅಸ್ಸಾಂನ ಅಭಿವೃದ್ಧಿಯಲ್ಲಿ ಮಹಿಳಾ ಸಬಲೀಕರಣವು ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಂಪರ್ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ರಾಜ್ಯದ ಪ್ರತಿಷ್ಠಿತ 'ಒರುನೊದೊಯ್' (Orunodoi) ಯೋಜನೆಯಡಿ ಸುಮಾರು 40 ಲಕ್ಷ ಫಲಾನುಭವಿಗಳಿಗೆ ತಲಾ 9,000 ರೂಪಾಯಿಗಳಂತೆ ಒಟ್ಟು 3,600 ಕೋಟಿ ರೂಪಾಯಿಗಳನ್ನು ಮಾರ್ಚ್ 10 ರಂದು ಒಂದೇ ದಿನದಲ್ಲಿ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಇದು ರಾಜ್ಯ ಸರ್ಕಾರದ ಅತಿ ದೊಡ್ಡ ಆರ್ಥಿಕ ನೆರವಿನ ಯೋಜನೆಯಾಗಿದೆ.

ಬೋಹಾಗ್ ಬಿಹು ಹಬ್ಬಕ್ಕೆ ಭರ್ಜರಿ ಉಡುಗೊರೆ

ಫೇಸ್‌ಬುಕ್ ಲೈವ್ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬರುವ ಮಂಗಳವಾರ ಬೆಳಗ್ಗೆ 10.30ಕ್ಕೆ 40 ಲಕ್ಷ ಕುಟುಂಬಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಬಡತನ ನಿರ್ಮೂಲನೆಯ ಗುರಿ ಹೊಂದಿರುವ ಒರುನೊದೊಯ್ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ 1,250 ರೂ. ನೀಡಲಾಗುತ್ತಿದೆ. ಈ ವರ್ಷದ ಜನವರಿಯಿಂದ ಬಾಕಿ ಉಳಿದಿರುವ ನಾಲ್ಕು ತಿಂಗಳ ಹಣ ಹಾಗೂ ಏಪ್ರಿಲ್ ಮಧ್ಯದಲ್ಲಿ ಆಚರಿಸಲಾಗುವ ಅಸ್ಸಾಮಿ ಹೊಸ ವರ್ಷ 'ಬೋಹಾಗ್ ಬಿಹು' ಹಬ್ಬದ ಹೆಚ್ಚುವರಿ ಮೊತ್ತವನ್ನು ಸೇರಿಸಿ, ಒಟ್ಟಾರೆಯಾಗಿ ಪ್ರತಿ ಫಲಾನುಭವಿಗೆ 9,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಒಂದೇ ದಿನದಲ್ಲಿ ಸರ್ಕಾರಿ ಯೋಜನೆಯೊಂದರ ಅಡಿಯಲ್ಲಿ 3,600 ಕೋಟಿ ರೂಪಾಯಿಗಳನ್ನು ವಿತರಿಸುತ್ತಿರುವುದು ಇದೇ ಮೊದಲು ಹಾಗೂ ಇದೊಂದು ದಾಖಲೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ನಾರಿ ಶಕ್ತಿಗೆ ಸರ್ಕಾರದ ಬೆಂಬಲ

ಮಹಿಳೆಯರ ಆರ್ಥಿಕ ಭದ್ರತೆ, ಶಿಕ್ಷಣ, ಆರೋಗ್ಯ ಮತ್ತು ಉದ್ಯಮಶೀಲತೆಗೆ ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶರ್ಮಾ ಅವರು 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಮಹಿಳೆಯರು ಇಂದು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯಿಂದ ಮುನ್ನಡೆಯುತ್ತಿದ್ದು, ನಾರಿ ಶಕ್ತಿಯ ಉತ್ಸಾಹವನ್ನು ಸರ್ಕಾರ ಸಂಭ್ರಮಿಸುತ್ತಿದೆ ಎಂದಿದ್ದಾರೆ. ಇದರ ಜೊತೆಗೆ, ರಾಜ್ಯದಾದ್ಯಂತ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಫಲಾನುಭವಿ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದಾರೆ. ಜನರ ಬೆಂಬಲವೇ ಸರ್ಕಾರದ ಅತಿದೊಡ್ಡ ಶಕ್ತಿ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಸಾಧನೆಗಳ ಅನಾವರಣ

ಅಸ್ಸಾಂನಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ವೇಳೆ ಮತದಾರರ ಬೆಂಬಲ ಕೋರಿದ ಮುಖ್ಯಮಂತ್ರಿಗಳು, ಮಹಿಳಾ ಸಬಲೀಕರಣಕ್ಕೆ ಬಿಜೆಪಿ ನಿರಂತರ ಆದ್ಯತೆ ನೀಡಿದೆ ಎಂದು ಪ್ರತಿಪಾದಿಸಿದರು. ಇದಲ್ಲದೆ, ಮುಖ್ಯಮಂತ್ರಿಗಳ ಕಾರ್ಯಾಲಯವು (CMO) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅಡಿ, ರಾಜ್ಯದಲ್ಲಿ 59 ಲಕ್ಷಕ್ಕೂ ಹೆಚ್ಚು ನಲ್ಲಿ ನೀರು ಸಂಪರ್ಕ ಹಾಗೂ ಹೊಗೆ ಮುಕ್ತ ಅಡುಗೆಮನೆಗಾಗಿ 51 ಲಕ್ಷ ಉಜ್ವಲ ಗ್ಯಾಸ್ ಸಂಪರ್ಕಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ 5.5 ಲಕ್ಷ 'ಲಕ್ಷಾಧಿಪತಿ ದೀದಿ'ಗಳನ್ನು ಸೃಷ್ಟಿಸಲಾಗಿದ್ದು, 900ಕ್ಕೂ ಹೆಚ್ಚು ಮಹಿಳಾ ನೇತೃತ್ವದ ನವೋದ್ಯಮಗಳು (ಸ್ಟಾರ್ಟ್-ಅಪ್) ಆರಂಭವಾಗಿವೆ ಮತ್ತು 56,000 ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ ಎಂದು ಸರ್ಕಾರ ತನ್ನ ಸಾಧನೆಗಳನ್ನು ವಿವರಿಸಿದೆ.

Read More
Next Story