
ಬಿಜೆಪಿ ಸೇರ್ಪಡೆಯಾಗಿರುವ ಈ ಮೂವರೂ ಶಾಸಕರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಅತ್ಯಂತ ಆಪ್ತರು ಎಂದು ಹೇಳಲಾಗಿದೆ.
ಅಸ್ಸಾಂ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್ ಶಾಕ್: ಆಡಳಿತರೂಢ ಬಿಜೆಪಿ ಸೇರಿದ ಮೂವರು ಶಾಸಕರು
ಕಾಂಗ್ರೆಸ್ ಶಾಸಕರಾದ ಕಮಲಾಖ್ಯ ಡೇ ಪುರಕಾಯಸ್ಥ (ಕರೀಂಗಂಜ್ ಉತ್ತರ ಕ್ಷೇತ್ರ), ಶಶಿಕಾಂತ್ ದಾಸ್ (ರಾಹಾ ಕ್ಷೇತ್ರ) ಮತ್ತು ಬಸಂತ ದಾಸ್ (ಮಂಗಳದೋಯ್- ಎಸ್‌ಸಿ ಮೀಸಲು ಕ್ಷೇತ್ರ) ಅಧಿಕೃತವಾಗಿ ಕೇಸರಿ ಪಡೆ ಸೇರಿದ್ದಾರೆ.
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನವೇ ಪ್ರಮುಖ ರಾಜಕೀಯ ಪಲ್ಲಟಗಳು ಆರಂಭವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಗುರುವಾರ ಮೂವರು ಪ್ರಭಾವಿ ಕಾಂಗ್ರೆಸ್ ಶಾಸಕರು ಸೇರಿದಂತೆ ಐವರು ಪ್ರಮುಖ ನಾಯಕರು ಆಡಳಿತರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಈ ದಿಢೀರ್ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಶಾಸಕರಾದ ಕಮಲಾಖ್ಯ ಡೇ ಪುರಕಾಯಸ್ಥ (ಕರೀಂಗಂಜ್ ಉತ್ತರ ಕ್ಷೇತ್ರ), ಶಶಿಕಾಂತ್ ದಾಸ್ (ರಾಹಾ ಕ್ಷೇತ್ರ) ಮತ್ತು ಬಸಂತ ದಾಸ್ (ಮಂಗಳದೋಯ್- ಎಸ್‌ಸಿ ಮೀಸಲು ಕ್ಷೇತ್ರ) ಅಧಿಕೃತವಾಗಿ ಕೇಸರಿ ಪಡೆ ಸೇರಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್‌ನ ಮಾಜಿ ಜಂಟಿ ಕಾರ್ಯದರ್ಶಿ ಪರ್ಬಾ ಬಾಬ್ ಕಲಿತಾ ಮತ್ತು ತೃಣಮೂಲ ಕಾಂಗ್ರೆಸ್ (TMC) ಮಾಜಿ ಪ್ರಧಾನ ಕಾರ್ಯದರ್ಶಿ ಕಂಕಣ್ ನಾಥ್ ಕೂಡ ಕಮಲದ ಕೈ ಹಿಡಿದಿದ್ದಾರೆ. ಗುವಾಹಟಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಸೈಕಿಯಾ ಹಾಗೂ ಕೇಂದ್ರ ಸಚಿವ ಪವಿತ್ರ ಮಾರ್ಗರಿಟಾ ಅವರು ಈ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಪ್ತರು
ಬಿಜೆಪಿ ಸೇರ್ಪಡೆಯಾಗಿರುವ ಈ ಮೂವರೂ ಶಾಸಕರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಅತ್ಯಂತ ಆಪ್ತರು ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ನಾಯಕರು ಬಹಿರಂಗವಾಗಿಯೇ ಬಿಜೆಪಿ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತಾ ಬಂದಿದ್ದರು. ಅದರಲ್ಲೂ ವಿಶೇಷವಾಗಿ ಶಾಸಕ ಶಶಿಕಾಂತ್ ದಾಸ್ ಅವರು 2021ರಲ್ಲೇ ಆಡಳಿತ ಪಕ್ಷದ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು ಎನ್ನುವುದು ಗಮನಾರ್ಹ.
ಸತತ ಮುಖಭಂಗ ಅನುಭವಿಸುತ್ತಿರುವ ಕಾಂಗ್ರೆಸ್
ಚುನಾವಣೆ ಹೊಸ್ತಿಲಲ್ಲಿರುವ ಅಸ್ಸಾಂನಲ್ಲಿ ಕಾಂಗ್ರೆಸ್ ಸತತವಾಗಿ ತನ್ನ ನಾಯಕರನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ (ಫೆಬ್ರವರಿ 22) ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರು ಬಿಜೆಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ, ಕಳೆದ ತಿಂಗಳು ಮೂರು ಬಾರಿಯ ಶಾಸಕರಾದ ಅಬ್ದುಲ್ ರಶೀದ್ ಮಂಡಲ್ (ಗೋಲ್ಪಾರಾ ಪಶ್ಚಿಮ) ಮತ್ತು ಶೆರ್ಮನ್ ಅಲಿ ಅಹ್ಮದ್ (ಬಾಘ್ಬರ್) ಅವರು ಕಾಂಗ್ರೆಸ್ ತೊರೆದು 'ರೈಜೋರ್ ದಳ' (Raijor Dal) ಸೇರ್ಪಡೆಯಾಗಿದ್ದರು. ಇದೀಗ ಮತ್ತೊಮ್ಮೆ ಮೂವರು ಹಾಲಿ ಶಾಸಕರು ಕೈಕೊಟ್ಟಿರುವುದು ಪಕ್ಷಕ್ಕೆ ಬಹುದೊಡ್ಡ ಪೆಟ್ಟು ನೀಡಿದೆ.

