ದೆಹಲಿ ಮದ್ಯ ನೀತಿ ಹಗರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ, ಕಣ್ಣೀರು ಹಾಕಿದ ಮಾಜಿ ಸಿಎಂ
x

ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿಯ ನ್ಯಾಯಾಲಯವು ದೋಷಮುಕ್ತಗೊಳಿಸಿದೆ

ದೆಹಲಿ ಮದ್ಯ ನೀತಿ ಹಗರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ, ಕಣ್ಣೀರು ಹಾಕಿದ ಮಾಜಿ ಸಿಎಂ

ಸಿಬಿಐ ಸಲ್ಲಿಸಿದ್ದ ಬೃಹತ್ ಆರೋಪಪಟ್ಟಿಯಲ್ಲಿ ಅನೇಕ ನ್ಯೂನತೆಗಳಿದ್ದು, ಅವುಗಳಿಗೆ ಯಾವುದೇ ಸಾಕ್ಷಿದಾರರ ಹೇಳಿಕೆಗಳಾಗಲಿ ಅಥವಾ ಪೂರಕ ಸಾಕ್ಷ್ಯಾಧಾರಗಳಾಗಲಿ ಲಭ್ಯವಿಲ್ಲ ಎಂಬುದನ್ನು ನ್ಯಾಯಾಲಯ ಬೊಟ್ಟು ಮಾಡಿದೆ.


Click the Play button to hear this message in audio format

ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿಯ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಇವರ ಜೊತೆಗೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ 21 ಮಂದಿಯನ್ನೂ ಕೋರ್ಟ್ ಖುಲಾಸೆಗೊಳಿಸಿದೆ.

2021-22ನೇ ಸಾಲಿನ ಈ ಮದ್ಯ ನೀತಿ ಜಾರಿಯಲ್ಲಿ ಯಾವುದೇ ರೀತಿಯ ಬೃಹತ್ ಒಳಸಂಚು ಅಥವಾ ಅಪರಾಧದ ಉದ್ದೇಶ ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಇದು ಆಮ್ ಆದ್ಮಿ ಪಕ್ಷಕ್ಕೆ ಬಹುದೊಡ್ಡ ಕಾನೂನು ಮತ್ತು ರಾಜಕೀಯ ಜಯವನ್ನು ತಂದುಕೊಟ್ಟಿದೆ.

ಸಿಬಿಐ ತನಿಖಾ ವೈಖರಿಗೆ ನ್ಯಾಯಾಲಯದ ಅಸಮಾಧಾನ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖಾ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರಾಸಿಕ್ಯೂಷನ್ ಮಂಡಿಸಿದ ವಾದವು ನ್ಯಾಯಾಂಗದ ಪರಿಶೀಲನೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಹಾಗೂ ಕೇವಲ ಊಹೆಗಳ ಆಧಾರದ ಮೇಲೆ ಸಿಬಿಐ ಕಥೆಯೊಂದನ್ನು ಕಟ್ಟಲು ಪ್ರಯತ್ನಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿಯೊಬ್ಬನಿಗೆ ಕ್ಷಮಾದಾನ ನೀಡಿ ಆತನನ್ನು ಸರ್ಕಾರಿ ಸಾಕ್ಷಿಯನ್ನಾಗಿ (ಅಪ್ರೂವರ್) ಪರಿವರ್ತಿಸುವುದು ಮತ್ತು ಆತನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ತನಿಖೆಯ ಲೋಪಗಳನ್ನು ಮುಚ್ಚಿಹಾಕಿ ಹೊಸ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡುವ ಪ್ರವೃತ್ತಿ ಸಂವಿಧಾನದ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶರು ಕಟುವಾಗಿ ಟೀಕಿಸಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಸಿಬಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಸಾಕ್ಷ್ಯಾಧಾರಗಳಿಲ್ಲದ ಆರೋಪಪಟ್ಟಿ ಎಂದ ಕೋರ್ಟ್

ಸಿಬಿಐ ಸಲ್ಲಿಸಿದ್ದ ಬೃಹತ್ ಆರೋಪಪಟ್ಟಿಯಲ್ಲಿ ಅನೇಕ ನ್ಯೂನತೆಗಳಿದ್ದು, ಅವುಗಳಿಗೆ ಯಾವುದೇ ಸಾಕ್ಷಿದಾರರ ಹೇಳಿಕೆಗಳಾಗಲಿ ಅಥವಾ ಪೂರಕ ಸಾಕ್ಷ್ಯಾಧಾರಗಳಾಗಲಿ ಲಭ್ಯವಿಲ್ಲ ಎಂಬುದನ್ನು ನ್ಯಾಯಾಲಯ ಬೊಟ್ಟು ಮಾಡಿದೆ. ಅಬಕಾರಿ ನೀತಿಯ ರಚನೆ ಮತ್ತು ಜಾರಿಯ ರೂವಾರಿ ಎಂದು ಬಿಂಬಿಸಲಾಗಿದ್ದ ಮನೀಶ್ ಸಿಸೋಡಿಯಾ ಅವರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ದಾಖಲಾಗುವಂತಹ ಸಾಕ್ಷ್ಯಗಳಿಲ್ಲ, ಜೊತೆಗೆ ಅವರಿಂದ ಯಾವುದೇ ಹಣ ಅಥವಾ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಕೋರ್ಟ್ ತಿಳಿಸಿದೆ. ಅದೇ ರೀತಿ, ಸಾಂವಿಧಾನಿಕ ಹುದ್ದೆಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಯಾವುದೇ ಬಲವಾದ ಆಧಾರಗಳಿಲ್ಲದೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾದ ಕುಲದೀಪ್ ಸಿಂಗ್ ವಿರುದ್ಧವೂ ಯಾವುದೇ ಪುರಾವೆಗಳಿಲ್ಲದಿರುವುದು ಅಚ್ಚರಿ ಮೂಡಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಪಟ್ಟಿಯಲ್ಲಿನ ಆಂತರಿಕ ವಿರೋಧಾಭಾಸಗಳು ತನಿಖೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿವೆ ಎಂದು ಕೋರ್ಟ್ ಹೇಳಿದೆ.

ಇದೊಂದು ಅತಿದೊಡ್ಡ ರಾಜಕೀಯ ಷಡ್ಯಂತ್ರ ಎಂದ ಕೇಜ್ರಿವಾಲ್

ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾವುಕರಾಗಿ ಕಣ್ಣೀರು ಹಾಕಿದರು. ತಮ್ಮ ಹಾಗೂ ತಮ್ಮ ನಾಯಕರ ವಿರುದ್ಧದ ಈ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಾಜಕೀಯ ಷಡ್ಯಂತ್ರವಾಗಿದೆ ಎಂದು ಅವರು ಬಣ್ಣಿಸಿದರು. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷವು ಕಟ್ಟರ್ ಇಮಾನ್ದಾರ್ (ಪರಮ ಪ್ರಾಮಾಣಿಕರು) ಎಂಬುದನ್ನು ನ್ಯಾಯಾಲಯ ಸಾಬೀತುಪಡಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಆಮ್ ಆದ್ಮಿ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ದುರುದ್ದೇಶದಿಂದಲೇ ಈ ನಕಲಿ ಪ್ರಕರಣವನ್ನು ಸೃಷ್ಟಿಸಲಾಗಿತ್ತು ಮತ್ತು ಈ ಷಡ್ಯಂತ್ರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದರು.

ಏನಿದು ದೆಹಲಿ ಮದ್ಯ ನೀತಿ ಪ್ರಕರಣ?

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರವು 2021-22ನೇ ಸಾಲಿನಲ್ಲಿ ನೂತನ ಅಬಕಾರಿ ನೀತಿಯೊಂದನ್ನು ಜಾರಿಗೆ ತಂದಿತ್ತು. ಹಳೆಯ ವ್ಯವಸ್ಥೆಗಿಂತ ಹೆಚ್ಚಿನ ಆದಾಯವನ್ನು ಸರ್ಕಾರಕ್ಕೆ ತಂದುಕೊಡುವ ಉದ್ದೇಶದಿಂದ ಈ ನೀತಿಯನ್ನು ರೂಪಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ, ಈ ನೀತಿಯ ಜಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ, ಖಾಸಗಿ ಮದ್ಯದ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿಗಳ ಲಾಭ ಮಾಡಿಕೊಡಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ತನಿಖೆಗೆ ಆದೇಶಿಸಿದ್ದರು. ತೀವ್ರ ವಿವಾದದ ನಂತರ ದೆಹಲಿ ಸರ್ಕಾರವು ಆ ನೂತನ ಅಬಕಾರಿ ನೀತಿಯನ್ನು ಹಿಂಪಡೆದಿತ್ತು. ಇದೇ ಪ್ರಕರಣವು ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಜೈಲುವಾಸಕ್ಕೂ ಕಾರಣವಾಗಿತ್ತು.

Read More
Next Story