ಚಂಡಮಾರುತ ಆರ್ನಬ್‌ ಅಬ್ಬರದ ಆತಂಕ: ಒಡಿಶಾದಲ್ಲಿ ಕಟ್ಟೆಚ್ಚರ
x

ಆರ್ನಬ್‌ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆ ಒಡಿಶಾ ಸರ್ಕಾರ ಸಜ್ಜಾಗಿದೆ. ಮೂರು ಹಂತಗಳಲ್ಲಿ 60 ಒಡ್ರಾಫ್ ತಂಡಗಳ ನಿಯೋಜನೆಗೆ ಸಿದ್ಧತೆ ನಡೆಸಲಾಗಿದೆ.

ಚಂಡಮಾರುತ ಆರ್ನಬ್‌ ಅಬ್ಬರದ ಆತಂಕ: ಒಡಿಶಾದಲ್ಲಿ ಕಟ್ಟೆಚ್ಚರ

ಪುರಿ, ಜಗತ್‌ಸಿಂಗ್‌ಪುರ, ಕಟಕ್ ಮತ್ತು ಖುರ್ದಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.


Click the Play button to hear this message in audio format

ಒಡಿಶಾ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿರುವ ತೀವ್ರ ಚಂಡಮಾರುತ ಅರ್ಣಬ್‌ (Cyclone Arnab) ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಿರುವ ಅಧಿಕಾರಿಗಳು, ವಿಪತ್ತು ನಿರ್ವಹಣೆಗೆ ಮೂರು ಹಂತಗಳಲ್ಲಿ ಒಟ್ಟು 60 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ತಂಡಗಳನ್ನು ನಿಯೋಜಿಸಲು ಯೋಜನೆ ರೂಪಿಸಿದ್ದಾರೆ. ಅಕ್ಟೋಬರ್ 27 ಅಥವಾ 28ರಂದು ಆಂಧ್ರಪ್ರದೇಶ–ಒಡಿಶಾ ಕರಾವಳಿಯ ಸಮೀಪ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.

ಚಂಡಮಾರುತದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ ಎಂದು ಒಡಿಶಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಆಡಳಿತಗಳು, ಪೊಲೀಸ್ ಇಲಾಖೆ ಹಾಗೂ ವಿಶೇಷ ವಿಪತ್ತು ನಿರ್ವಹಣಾ ಪಡೆಗಳು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ 20 ಒಡ್ರಾಫ್ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿದ್ದು, ನೆಲಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮೂರು ಹಂತಗಳಲ್ಲಿ ಒಟ್ಟು 60 ತಂಡಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಹೆಚ್ಚುವರಿಯಾಗಿ ತರಬೇತಿ ಪಡೆದ ಸಿಬ್ಬಂದಿಯ ನೆರವು ಪಡೆಯಲಾಗುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಜತೆಗೂ ಸಮನ್ವಯ ಸಾಧಿಸಲಾಗಿದೆ.

ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬಂಗಾಳ ಕೊಲ್ಲಿಯ ಮಧ್ಯ ಮತ್ತು ಪಶ್ಚಿಮ ಮಧ್ಯ ಭಾಗಗಳಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ಚಂಡಮಾರುತ ಅರ್ಣಬ್ ಆಗಿ ಬಲಗೊಂಡಿದೆ. ಅಕ್ಟೋಬರ್ 26ರ ಮಧ್ಯರಾತ್ರಿಯ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಹಾಗೂ ಅಕ್ಟೋಬರ್ 27ರಂದು ಅತ್ಯಂತ ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಚಂಡಮಾರುತದ ಹಿನ್ನೆಲೆಯಲ್ಲಿ ಪುರಿ, ಜಗತ್‌ಸಿಂಗ್‌ಪುರ, ಕಟಕ್ ಮತ್ತು ಖುರ್ದಾ ಜಿಲ್ಲೆಗಳಲ್ಲಿ ತಲಾ ನಾಲ್ಕು ಒಡ್ರಾಫ್ ತಂಡಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ತಂಡಗಳು ಕಾರ್ಯಪ್ರವೃತ್ತವಾಗಿವೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ ಸತ್ಯಜಿತ್ ನಾಯಕ್ ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಲಾಗಿದ್ದು, ಅಪಾಯದ ಸಾಧ್ಯತೆಯಿರುವ ಜಿಲ್ಲೆಗಳಲ್ಲಿ 225 ರಕ್ಷಣಾ ತಂಡಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಜಿಲ್ಲೆಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭದಲ್ಲಿ ಜನರು ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read More
Next Story