ಗಾಯಕ ಅಂಕಿತ್ ಬಲ್ಯಾನ್ ಹತ್ಯೆ|ಇಬ್ಬರು ಶೂಟರ್‌ಗಳ ಎನ್‌ಕೌಂಟರ್‌
x

ಹರಿಯಾಣವಿ ಗಾಯಕ ಅಂಕಿತ್ ಬಲ್ಯಾನ್ ಹತ್ಯೆ ಪ್ರಕರಣದಲ್ಲಿ ಶಾಮ್ಲಿ ಪೊಲೀಸರು ಇಬ್ಬರು ಶಂಕಿತ ಶೂಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಗಾಯಕ ಅಂಕಿತ್ ಬಲ್ಯಾನ್ ಹತ್ಯೆ|ಇಬ್ಬರು ಶೂಟರ್‌ಗಳ ಎನ್‌ಕೌಂಟರ್‌

ಆಗಸ್ಟ್ 26ರಂದು ಜಿಮ್‌ನಿಂದ ಹೊರ ಬರುತ್ತಿದ್ದ ಅಂಕಿತ್ ಬಲ್ಯಾನ್ ಮೇಲೆ ನಾಲ್ವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದಿದ್ದರು.


Click the Play button to hear this message in audio format

ಹರಿಯಾಣವಿ ಗಾಯಕ ಹಾಗೂ ಯೂಟ್ಯೂಬರ್ ಅಂಕಿತ್ ಬಲ್ಯಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಶೂಟರ್‌ಗಳು ಬಲಿಯಾಗಿದ್ದಾರೆ. ಶಾಮ್ಲಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಸುಮಿತ್ ಮತ್ತು ಮೋಹಿತ್ ಎಂಬ ಆರೋಪಿಗಳು ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಶಂಕಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆಗಸ್ಟ್ 26ರಂದು ಶಾಮ್ಲಿಯಲ್ಲಿರುವ ಜಿಮ್‌ನಿಂದ ಹೊರಬಂದು ಕಾರಿನತ್ತ ತೆರಳುತ್ತಿದ್ದ ಅಂಕಿತ್ ಬಲ್ಯಾನ್ ಮೇಲೆ ನಾಲ್ವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಬಲ್ಯಾನ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ದಾಳಿಯ ದೃಶ್ಯಗಳು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವಿಡಿಯೋದಲ್ಲಿ ಜಿಮ್‌ನಿಂದ ಹೊರಬಂದ ಬಲ್ಯಾನ್ ಅವರತ್ತ ಶೂಟರ್‌ಗಳು ಧಾವಿಸಿ ಗುಂಡು ಹಾರಿಸಿರುವುದು ಕಂಡುಬಂದಿತ್ತು. ಆರೋಪಿಗಳು ಕನಿಷ್ಠ 16 ಸುತ್ತು ಗುಂಡು ಹಾರಿಸಿದ್ದರು ಎಂದು ವರದಿಯಾಗಿದೆ.

ಹತ್ಯೆಯ ಕೆಲವೇ ಗಂಟೆಗಳ ಬಳಿಕ ಹರಿಯಾಣದ ಸೋನಿಪತ್‌ನ ಭೋಲು ಶಹಪುರಿ ಎಂಬಾತ ಗೋಗಿ ಗ್ಯಾಂಗ್‌ ಅಂಕಿತ್ ಬಲ್ಯಾನ್ ಹತ್ಯೆಯ ಹೊಣೆ ಹೊತ್ತಿದೆ ಎಂದು ಹೇಳಿಕೊಂಡಿದ್ದ. ಈ ಹೇಳಿಕೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಲ್ಯಾನ್ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರ ಪತ್ನಿ ಒತ್ತಾಯಿಸಿದ್ದರು. ಹಂತಕರನ್ನು ಬಂಧಿಸದಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಬಲ್ಯಾನ್ ಕುಟುಂಬವನ್ನು ಭೇಟಿ ಮಾಡಿದ್ದರು.

ಈ ಹತ್ಯೆ ಪ್ರಕರಣವು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ರಾಜಕೀಯ ಚರ್ಚೆಗೂ ಕಾರಣವಾಗಿತ್ತು. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವಿಚಾರವಾಗಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದವು.

ಹತ್ಯೆಗೂ ಮುನ್ನ ‘ಮರ್ಡರ್’ ಹಾಡು

ಅಂಕಿತ್ ಬಲ್ಯಾನ್ ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ತಮ್ಮ ‘ಬೇಬಿ ಬದ್ಮಾಶ್’ ಹಾಡಿನ ಕೆಲವು ಸಾಲುಗಳನ್ನು ಹಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಹಾಡಿನಲ್ಲಿ ಕೊಲೆ ಕುರಿತ ಸಾಲುಗಳೂ ಇದ್ದವು. ಕಳೆದ ತಿಂಗಳು ಬಿಡುಗಡೆಯಾಗಿದ್ದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿತ್ತು.

ಶಾಮ್ಲಿ ನಿವಾಸಿಯಾಗಿದ್ದ ಬಲ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಐದು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳು ಹಾಗೂ ಯೂಟ್ಯೂಬ್‌ನಲ್ಲಿ ಮೂರು ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್‌ಗಳಿದ್ದರು. ‘ಭಾರಿ ಕೋರ್ಟ್ ಮೇಂ ಗೋಲಿ ಮಾರೇಂಗೆ’, ‘ಬಾಡಿ ಬಿಲ್ಡರ್’, ‘ಪಿಟಿಐ’ ಮತ್ತು ‘ಏಕ್ ಖಟೋಲಾ ಜೈಲ್ ಕೆ ಭಿತರ್’ ಅವರ ಜನಪ್ರಿಯ ಹಾಡುಗಳಾಗಿವೆ.

ಬಲ್ಯಾನ್ ಅವರ ಹಾಡುಗಳಲ್ಲಿ ಬಂದೂಕು, ಹೊಡೆದಾಟ, ಎಸ್‌ಯುವಿ, ವೈಷಮ್ಯ ಮತ್ತು ಹಿಂಸೆಯಂತಹ ವಿಷಯಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದವು. ಸುಮಾರು 2022ರಿಂದ ಹರಿಯಾಣವಿ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಗಾಯಕ, ಗೀತರಚನೆಕಾರ ಮತ್ತು ಸಂಗೀತ ಸಂಯೋಜಕರಾಗಿ 50ಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದ್ದರು.

ಸಂಗೀತ ಕ್ಷೇತ್ರಕ್ಕೆ ಬರುವ ಮೊದಲು ಅಂಕಿತ್ ಬಲ್ಯಾನ್ ರಾಜ್ಯಮಟ್ಟದ ಕಬಡ್ಡಿ ಆಟಗಾರರಾಗಿದ್ದರು. 2013-14ರವರೆಗೆ ಕಬಡ್ಡಿ ಆಡಿದ್ದ ಅವರು ದೆಹಲಿ, ಭೋಪಾಲ್ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾಲಿಗೆ ಗಾಯವಾಗಿ ಮೂಳೆ ಮುರಿದ ಬಳಿಕ ಕಬಡ್ಡಿ ತೊರೆದು ಜಿಮ್‌ಗೆ ಸೇರಿದ್ದರು. ಬಳಿಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದರು.

Read More
Next Story