Amaravati| ಆಂಧ್ರಪ್ರದೇಶಕ್ಕೆ ಅಮರಾವತಿಯೇ ಶಾಶ್ವತ ರಾಜಧಾನಿ !
x

ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ

Amaravati| ಆಂಧ್ರಪ್ರದೇಶಕ್ಕೆ 'ಅಮರಾವತಿ'ಯೇ ಶಾಶ್ವತ ರಾಜಧಾನಿ !

ಅಮರಾವತಿಯನ್ನು ಆಂಧ್ರಪ್ರದೇಶದ ಏಕೈಕ ರಾಜಧಾನಿ ಘೋಷಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಬಂದರೂ ರಾಜಧಾನಿ ಬದಲಾಯಿಸದಂತೆ ತಡೆಯಲು ಲೋಕಸಭೆಯಲ್ಲಿ ಮಸೂದೆ ಅಂಗೀಕರಿಸಲಾಗಿದೆ.


Click the Play button to hear this message in audio format

ಆಂಧ್ರಪ್ರದೇಶದ ರಾಜಧಾನಿ ಕುರಿತ ಗೊಂದಲಕ್ಕೆ ಕೊನೆಗೂ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಲೋಕಸಭೆಯಲ್ಲಿ ಬುಧವಾರ 'ಆಂಧ್ರಪ್ರದೇಶ ಪುನರ್‌ರಚನೆ ತಿದ್ದುಪಡಿ ಮಸೂದೆ-2026' ಅಂಗೀಕರಿಸುವ ಮೂಲಕ ಅಮರಾವತಿಯೇ ಆಂಧ್ರಪ್ರದೇಶದ ಶಾಶ್ವತ ಹಾಗೂ ಏಕೈಕ ರಾಜಧಾನಿ ಎಂಬ ಅಂತಿಮ ಮುದ್ರೆಯೊತ್ತಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಹುದಿನಗಳ ಹೋರಾಟಕ್ಕೆ ಈ ಮಸೂದೆಯು ದೊಡ್ಡ ಜಯ ತಂದುಕೊಟ್ಟಿದೆ. ಕೇಂದ್ರದ ಎನ್‌ಡಿಎ ಮೈತ್ರಿಕೂಟದಲ್ಲಿ ಪಾಲುದಾರರಾಗಿರುವ ಟಿಡಿಪಿ (TDP) ಒತ್ತಾಸೆಯಂತೆ, 2014ರ ಪುನರ್‌ರಚನೆ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಗಿದೆ. ವಿಶೇಷವೆಂದರೆ, ಈ ಕಾಯ್ದೆಯು ಜೂನ್ 2, 2024ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಶಾಶ್ವತ ಸ್ಥಾನಮಾನ

ಅಮರಾವತಿಯನ್ನು ರಾಜ್ಯದ ಏಕೈಕ ರಾಜಧಾನಿಯೆಂದು ಘೋಷಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಬಂದರೂ ರಾಜಧಾನಿಯನ್ನು ಬದಲಾಯಿಸದಂತೆ ಈ ಮಸೂದೆ ತಡೆಯಲಿದೆ. 2014ರ ವಿಭಜನೆಯ ನಂತರ ಹೈದರಾಬಾದ್ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿತ್ತು. ತಿದ್ದುಪಡಿ ಮಸೂದೆ ಅಂಗೀಕಾರದೊಂದಿಗೆ ಹೈದರಾಬಾದ್‌ ಜತೆಗಿನ ಸಂಬಂಧ ಕಡಿದುಕೊಂಡಂತಾಗಿದ್ದು, ಆಂಧ್ರಕ್ಕೆ ಸ್ವತಂತ್ರ ರಾಜಧಾನಿ ಲಭಿಸಿದೆ.

ಧ್ವನಿಮತದ ಮೂಲಕ ಅಂಗೀಕಾರ

ಲೋಕಸಭೆಯಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಮಂಡಿಸಿದ ಈ ಮಸೂದೆಗೆ ಹೆಚ್ಚಿನ ಸದಸ್ಯರು ಬೆಂಬಲ ಸೂಚಿಸಿದರು. "ಸ್ವತಂತ್ರ ಭಾರತದ ಇತಿಹಾಸದಲ್ಲಿ ನಿರ್ದಿಷ್ಟ ಸ್ಥಳವೊಂದನ್ನು ರಾಜ್ಯದ ರಾಜಧಾನಿ ಎಂದು ಘೋಷಿಸಲು ಸಂಸತ್ತಿನಲ್ಲಿ ಮಸೂದೆ ತಂದಿರುವುದು ಇದೇ ಮೊದಲು." ಎಂದು ಬಿಜೆಪಿ ಸಂಸದ ಸಿ.ಎಂ. ರಮೇಶ್ ತಿಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲ, ವೈಎಸ್‌ಆರ್‌ ವಿರೋಧ

ಲೋಕಸಭೆಯ ಕಾಂಗ್ರೆಸ್ ಉಪ ಮುಖ್ಯ ಸಚೇತಕ ಮಾಣಿಕ್ಕಂ ಟ್ಯಾಗೋರ್ ಮಸೂದೆಯನ್ನು ಬೆಂಬಲಿಸುತ್ತಲೇ, ಆಂಧ್ರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು. ಅಮರಾವತಿಯು ಬೆಂಗಳೂರು ಅಥವಾ ಚೆನ್ನೈನಂತೆ ಬೆಳೆಯಲಿ ಎಂದು ಆಶಿಸಿದರು.

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಈ ಮಸೂದೆಯನ್ನು ವಿರೋಧಿಸಿತು. "ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗುವವರೆಗೂ ಇದಕ್ಕೆ ಅರ್ಥವಿಲ್ಲ" ಎಂದು ಮಿಥುನ್ ರೆಡ್ಡಿ ವಾದಿಸಿದರು.

Read More
Next Story