Honor Killing : ಪ್ರೇಮ ವಿವಾಹವಾದ ಮಗಳನ್ನೇ ಕೊಂದ ಪೋಷಕರು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪೊಲೀಸ್ ಸಸ್ಪೆಂಡ್!
x
ಪೋಷಕರಿಂದಲೇ ಹತ್ಯೆಯಾ ಚೌಡೇಶ್ವರಿ.

Honor Killing : ಪ್ರೇಮ ವಿವಾಹವಾದ ಮಗಳನ್ನೇ ಕೊಂದ ಪೋಷಕರು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪೊಲೀಸ್ ಸಸ್ಪೆಂಡ್!

ಈ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಂದ ಲಂಚ ಪಡೆದು, ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹಾಗೂ ಸಾಕ್ಷ್ಯ ನಾಶಪಡಿಸಲು ಸರ್ಕಲ್ ಇನ್‌ಸ್ಪೆಕ್ಟರ್ ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.


Click the Play button to hear this message in audio format

ಪ್ರೀತಿಸಿದ ಯುವಕನ ಕೈಹಿಡಿದಿದ್ದೇ ಆಕೆ ಮಾಡಿದ ದೊಡ್ಡ ತಪ್ಪು. ಅದಕ್ಕಾಗಿ ಹೆತ್ತವರೇ ಆಕೆಯ ಪಾಲಿಗೆ ಯಮಸ್ವರೂಪಿಗಳಾಗಿ ಉಸಿರುಗಟ್ಟಿಸಿ ಕೊಂದಿರುವ ಭೀಕರ 'ಮರ್ಯಾದಾ ಹತ್ಯೆ' (Honor Killing) ಆಂಧ್ರಪ್ರದೇಶದ ಮಾಚೆರ್ಲ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 22 ವರ್ಷದ ಚೌಡೇಶ್ವರಿ ಕೊಲೆಯಾದ ದುರ್ದೈವಿ. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಹಾಗೂ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಚೌಡೇಶ್ವರಿ ತಾನು ಪ್ರೀತಿಸುತ್ತಿದ್ದ ಯುವಕನನ್ನು ಮನೆಯವರ ತೀವ್ರ ವಿರೋಧದ ನಡುವೆಯೂ ಕಳೆದ ಮಾರ್ಚ್ 4ರಂದು ವಿವಾಹವಾಗಿದ್ದಳು. ಮಗಳ ನಡೆಯಿಂದ ತೀವ್ರ ಆಕ್ರೋಶಗೊಂಡಿದ್ದ ಪೋಷಕರು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡಿದ್ದ ಸರ್ಕಲ್ ಇನ್‌ಸ್ಪೆಕ್ಟರ್ (CI) ಮಾರ್ಚ್ 15ರಂದು ನವಜೋಡಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಯಸ್ಕ ಯುವತಿಗೆ ರಕ್ಷಣೆ ನೀಡಬೇಕಿದ್ದ ಅದೇ ಪೊಲೀಸ್ ಅಧಿಕಾರಿ, ಚೌಡೇಶ್ವರಿಯನ್ನು ಬೆದರಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಪೋಷಕರ ವಶಕ್ಕೆ ಒಪ್ಪಿಸಿದ್ದರು ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ತಿಳಿದುಬಂದಿದೆ.

3 ದಿನದಲ್ಲೇ ಕೊಲೆ, ಆತ್ಮಹತ್ಯೆ ನಾಟಕ

ಪೋಷಕರ ಮನೆಗೆ ತೆರಳಿದ ಕೇವಲ ಮೂರೇ ದಿನಗಳಲ್ಲಿ ಚೌಡೇಶ್ವರಿ ಶವವಾಗಿ ಪತ್ತೆಯಾಗಿದ್ದಳು. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಕಥೆ ಕಟ್ಟಿದ್ದರು. ಆದರೆ, ಪೊಲೀಸರು ಶವಪರೀಕ್ಷೆ (Post-mortem) ನಡೆಸಿದಾಗ ಸತ್ಯ ಬಯಲಾಗಿದೆ. ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ. ಪ್ರೇಮ ವಿವಾಹವಾಗಿದ್ದೇ ಈ ಭೀಕರ ಹತ್ಯೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದ್ದು, ಯುವತಿಯ ತಂದೆ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಿಐ ಅಮಾನತು

ಈ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಂದ ಲಂಚ ಪಡೆದು, ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹಾಗೂ ಸಾಕ್ಷ್ಯ ನಾಶಪಡಿಸಲು ಸರ್ಕಲ್ ಇನ್‌ಸ್ಪೆಕ್ಟರ್ ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಅವರನ್ನು ಅಮಾನತು ಮಾಡಿದ್ದಾರೆ. ಪ್ರಸ್ತುತ ಆರೋಪಿಗಳ ಹಾಗೂ ಪೊಲೀಸ್ ಅಧಿಕಾರಿಯ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಅಮಾನತುಗೊಂಡಿರುವ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story