
ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
Andhra Fire accident| ಬೆಂಕಿಗಾಹುತಿಯಾದ ಬಸ್ - 14 ಪ್ರಯಾಣಿಕರು ಸಜೀವ ದಹನ
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಮಂಡಲದ ರಾಯವರಂ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 14 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಚಿತ್ರದುರ್ಗದಲ್ಲಿ ಇತ್ತೀಚೆಗೆ ಸಂಭವಿಸಿದ ಖಾಸಗಿ ಬಸ್ ದುರಂತ ಮಾಸುವ ಮುನ್ನವೇ ಭೀಕರ ಘಟೆನಯೊಂದು ಆಂಧ್ರ ಪ್ರದೇಶದಲ್ಲಿ ಸಂಭವಿಸಿದೆ. ಖಾಸಗಿ ಟ್ರಾವೆಲ್ಸ್ ಬಸ್ ಮತ್ತು ಗ್ರಾವೆಲ್ ಲೋಡ್ ಮಾಡಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಠ 14 ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ಪ್ರಕಾಶಂ ಜಿಲ್ಲೆಯ ಮಾರ್ಕಾಪುರ ಮಂಡಲದ ರಾಯವರಂ ಬಳಿ ಗುರುವಾರ ಮುಂಜಾನೆ ನಡೆದಿದೆ.
ತೆಲಂಗಾಣದ ನಿರ್ಮಲ್‌ನಿಂದ ಆಂಧ್ರದ ನೆಲ್ಲೂರು ಕಡೆಗೆ ಸಾಗುತ್ತಿದ್ದ ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಬಸ್, ಬೆಳಿಗ್ಗೆ ಸುಮಾರು 6 ರಿಂದ 6.30ರ ಸುಮಾರಿಗೆ ರಾಯವರಂ ಬಳಿಯ ತಿರುವಿನಲ್ಲಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತಕ್ಷಣವೇ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಜ್ವಾಲೆಗೆ ಆಹುತಿಯಾಗಿದೆ. ಬಸ್ಸಿನ ಹಿಂಭಾಗದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಹೊರಬರಲಾಗದೆ ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮಾರ್ಕಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ, ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮಾರ್ಕಾಪುರ ಡಿಎಸ್‌ಪಿ ನಾಗರಾಜು ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಸಿಎಂ ಸಂತಾಪ
ಈ ದಾರುಣ ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಅವರು, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಅಪಘಾತದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಕಳೆದ ವರ್ಷವೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಒಟ್ಟು 20 ಜನರು ಸಜೀವ ದಹನಗೊಂಡಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಖಾಸಗಿ ಎಸಿ ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ 42 ಮಂದಿ ಪ್ರಯಾಣಿಕರಿದ್ದರು. ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಯ ಕಿಡಿ ಸೋಕಿ ಅವಘಡ ಸಂಭವಿಸಿತ್ತು.
ಚಿತ್ರದುರ್ಗ ದುರಂತ
ಡಿಸೆಂಬರ್‌ನಲ್ಲಿ ಚಿತ್ರದುರ್ಗದ ಹಿರಿಯೂರು ಸಮೀಪದ ಗೋರ್ಲತ್ತು ಕ್ರಾಸ್ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಸ್ಲೀಪರ್ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಸಜೀವ ದಹನವಾಗಿದ್ದು, 7ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ವೇಗವಾಗಿ ಬಂದ ಲಾರಿ ಡಿವೈಡರ್ ದಾಟಿ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ ಹೊತ್ತಿ ಉರಿದಿತ್ತು.

