
ಆಂಧ್ರಪ್ರದೇಶದ ಏಕೈಕ ಮತ್ತು ಶಾಶ್ವತ ರಾಜಧಾನಿಯಾಗಿ 'ಅಮರಾವತಿ' : 12 ವರ್ಷಗಳ ಗೊಂದಲಕ್ಕೆ ತೆರೆ
ಆಂಧ್ರಪ್ರದೇಶದ ರಾಜಧಾನಿ ಆಯ್ಕೆಗೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಹಾಗೂ ಗೊಂದಲಗಳಿಗೆ ಕೊನೆಗೂ ಅಧಿಕೃತವಾಗಿ ತೆರೆಬಿದ್ದಿದೆ. ಆಂಧ್ರಪ್ರದೇಶದ ಏಕೈಕ ಹಾಗೂ ಶಾಶ್ವತ ರಾಜಧಾನಿಯಾಗಿ 'ಅಮರಾವತಿ' (Amaravati) ಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಇತ್ತೀಚೆಗಷ್ಟೇ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಅನುಮೋದನೆ ಪಡೆದಿದ್ದ 'ಆಂಧ್ರಪ್ರದೇಶ ಪುನರ್‌ರಚನೆ (ತಿದ್ದುಪಡಿ) ಮಸೂದೆ-2026'ಕ್ಕೆ ಏಪ್ರಿಲ್ 6ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್ ಅಧಿಸೂಚನೆಯನ್ನು (Gazette Notification) ಹೊರಡಿಸಿದ್ದು, ಅಮರಾವತಿಗೆ ಸಂಪೂರ್ಣ ಕಾನೂನಾತ್ಮಕ ಮಾನ್ಯತೆ ಸಿಕ್ಕಿದೆ.
ಪೂರ್ವಾನ್ವಯ ಜಾರಿ ಏಕೆ?
2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ರಚನೆಯಾದಾಗ, ಹೈದರಾಬಾದ್ ಅನ್ನು 10 ವರ್ಷಗಳ ಕಾಲ ಉಭಯ ರಾಜ್ಯಗಳ ಜಂಟಿ ರಾಜಧಾನಿಯಾಗಿ ಮಾಡಲಾಗಿತ್ತು. 2024ರ ಜೂನ್ 2ಕ್ಕೆ ಆ 10 ವರ್ಷಗಳ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ, ಹೊಸ ತಿದ್ದುಪಡಿ ಮಸೂದೆಯ ಅನ್ವಯ 2024ರ ಜೂನ್ 2ರಿಂದಲೇ ಪೂರ್ವಾನ್ವಯವಾಗುವಂತೆ ಅಮರಾವತಿ ನಗರವನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಪರಿಗಣಿಸಲಾಗುತ್ತದೆ. ಇನ್ನು ಮುಂದೆ ರಾಜ್ಯದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಏಕೈಕ ಕೇಂದ್ರಬಿಂದುವಾಗಿ ಅಮರಾವತಿ ಕಾರ್ಯನಿರ್ವಹಿಸಲಿದೆ.
ಮೂರು ರಾಜಧಾನಿ ಪ್ರಸ್ತಾವನೆ ಇತಿಹಾಸದ ಪುಟಕ್ಕೆ
ಈ ಹಿಂದಿನ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಸಾರ್ ಕಾಂಗ್ರೆಸ್ ಸರ್ಕಾರವು, ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು (ವಿಶಾಖಪಟ್ಟಣಂ, ವಿಜಯವಾಡ ಮತ್ತು ಕರ್ನೂಲ್) ಮಾಡುವ ವಿವಾದಾತ್ಮಕ ಪ್ರಸ್ತಾವನೆಯನ್ನು ಇಟ್ಟಿತ್ತು. ಇದು ಭಾರೀ ಕಾನೂನು ಹೋರಾಟ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗಿನ ಹೊಸ ಮಸೂದೆಯು ಕೇವಲ ಅಮರಾವತಿಯನ್ನು ಮಾತ್ರ ಅಧಿಕೃತ ರಾಜಧಾನಿ ಎಂದು ಗುರುತಿಸಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಯಾವುದೇ ಸರ್ಕಾರ ಬಂದರೂ ರಾಜಧಾನಿಯನ್ನು ಬದಲಾಯಿಸುವ ಅಥವಾ ವಿಭಜಿಸುವ ಯಾವುದೇ ಪ್ರಯತ್ನವನ್ನು ತಡೆಯುವ ಕಟ್ಟುನಿಟ್ಟಿನ ಅವಕಾಶಗಳನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ.
ಸಂಸತ್ತಿನಲ್ಲಿ ಇದೇ ಮೊದಲು!
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ನಿರ್ದಿಷ್ಟ ನಗರವೊಂದನ್ನು ಒಂದು ರಾಜ್ಯದ ಏಕೈಕ ರಾಜಧಾನಿ ಎಂದು ಘೋಷಿಸಲು ಸಂಸತ್ತಿನಲ್ಲಿ ವಿಶೇಷ ಮಸೂದೆ ತಂದಿರುವುದು ಇದೇ ಮೊದಲು ಎಂಬುದು ವಿಶೇಷ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಒತ್ತಾಸೆಯಂತೆ, ಕೇಂದ್ರದ ಎನ್‌ಡಿಎ ಸರ್ಕಾರವು 2014ರ ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಗೆ ಈ ಮಹತ್ವದ ತಿದ್ದುಪಡಿ ತಂದಿದೆ.
ರೈತರಿಗೆ ಸಿಕ್ಕ ಜಯ
ಅಮರಾವತಿಯನ್ನು ಭವಿಷ್ಯದ ಸ್ಮಾರ್ಟ್ ಸಿಟಿಯಾಗಿ ಕಟ್ಟಲು ಅಂದಿನ ಸರ್ಕಾರದ ಕರೆಗೆ ಓಗೊಟ್ಟು, ತಮ್ಮ 33 ಸಾವಿರಕ್ಕೂ ಹೆಚ್ಚು ಎಕರೆ ಫಲವತ್ತಾದ ಭೂಮಿಯನ್ನು ತ್ಯಾಗ ಮಾಡಿದ ಗುಂಟೂರು ಭಾಗದ ರೈತರಿಗೆ ಸಿಕ್ಕ ದೊಡ್ಡ ಜಯವಿದು ಎಂದು ವಿಶ್ಲೇಷಿಸಲಾಗಿದೆ. ಮುಖ್ಯಮಂತ್ರಿ ನಾಯ್ಡು ಅವರು ಈ ಗೆಲುವನ್ನು ರೈತರಿಗೆ ಹಾಗೂ ರಾಜ್ಯದ ಜನತೆಗೆ ಅರ್ಪಿಸಿದ್ದು, ಆಂಧ್ರಪ್ರದೇಶವನ್ನು 2047ರ ವೇಳೆಗೆ (Swarna Andhra 2047) ದೇಶದ ಅತ್ಯುತ್ತಮ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಇದು ಭದ್ರ ಬುನಾದಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

