
8ನೇ ವೇತನ ಆಯೋಗ: ನೌಕರರು ಮತ್ತು ಪಿಂಚಣಿದಾರರಿಂದ ಸಲಹೆ ಆಹ್ವಾನ; ಅಪ್ಲೈ ಮಾಡುವುದು ಹೇಗೆ?
8thPay Commission|8ನೇ ವೇತನ ಆಯೋಗದಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಅವಕಾಶ ಸಿಕ್ಕಿದೆ. ಸಲಹೆಗಳನ್ನು ಸಲ್ಲಿಸಲು ಏಪ್ರಿಲ್ 30ರವರೆಗೆ ಅವಕಾಶವಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹುದಿನದ ನಿರೀಕ್ಷೆಯಾಗಿದ್ದ 8ನೇ ಕೇಂದ್ರ ವೇತನ ಆಯೋಗ ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಆಯೋಗವು ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ವಿವಿಧ ನೌಕರರ ಸಂಘಟನೆಗಳಿಂದ ಅಧಿಕೃತವಾಗಿ ಸಲಹೆ ಹಾಗೂ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಸಲಹೆ ಸಲ್ಲಿಸಲು ಕಾಲಾವಕಾಶ ಎಷ್ಟು?
ವೇತನ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು. ಮಾ.5ರಿಂದ ಅರ್ಜಿ ಸಲ್ಲಿಕೆ ಪ್ರಾರಂಭಗೊಳ್ಳಲಿದ್ದು, ಏ.30 ಕೊನೆಯ ದಿನಾಂಕ.
ಸಲಹೆ ನೀಡಲು ಯಾರಿಗೆಲ್ಲ ಅರ್ಹತೆ ಇದೆ?
8ನೇ ವೇತನ ಆಯೋಗವು ವ್ಯಾಪಕ ಶ್ರೇಣಿಯ ವರ್ಗಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ನೌಕರರು, ಐಎಎಸ್ (IAS), ಐಪಿಎಸ್ (IPS) ಸೇರಿದಂತೆ ಆಲ್ ಇಂಡಿಯಾ ಸರ್ವಿಸ್ ಸಿಬ್ಬಂದಿ, ಸೇನಾ ಪಡೆಗಳ ಸಿಬ್ಬಂದಿ ಮತ್ತು ಯುಟಿ (UT) ನೌಕರರು, ಸುಪ್ರೀಂ ಕೋರ್ಟ್, ಹೈಕೋರ್ಟ್ ಸಿಬ್ಬಂದಿ, ಇಂಡಿಯನ್ ಆಡಿಟ್, ಅಕೌಂಟ್ಸ್ ಇಲಾಖೆಯ ನೌಕರರು ಮತ್ತು ಪಿಂಚಣಿದಾರರಿಂದ ಸಲಹೆ ಆಹ್ವಾನಿಸಲಾಗಿದೆ.
1 ಕೋಟಿಗೂ ಹೆಚ್ಚು ಜನರಿಗೆ ಲಾಭ
ಈ ವೇತನ ಆಯೋಗದ ಶಿಫಾರಸುಗಳು ದೇಶದ ಸುಮಾರು 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರಲಿವೆ. ಇದು ಅವರ ವೇತನ, ನಿವೃತ್ತಿ ಭದ್ರತೆ ಮತ್ತು ಜೀವನಮಟ್ಟವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನ್ಯಾಷನಲ್ ಪೋಸ್ಟಲ್ ಆರ್ಗನೈಸೇಶನ್ ಫೆಡರೇಶನ್ (FNPO) ಪ್ರಧಾನ ಕಾರ್ಯದರ್ಶಿ ಶಿವಾಜಿ ವಾಸಿರೆಡ್ಡಿ ಅವರು ಮಾತನಾಡಿ, "ನಾವು ಸುಮಾರು 300 ಪುಟಗಳ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದೇವೆ ಮತ್ತು ಆಯೋಗವು ಸಭೆಗೆ ಕರೆದಾಗ ಅದನ್ನು ಸಲ್ಲಿಸಲಿದ್ದೇವೆ" ಎಂದು ತಿಳಿಸಿದ್ದಾರೆ.

