ಆಕಾಶದಲ್ಲಿ ವಿಸ್ಮಯ! ಇಂದು ಪ್ಲಾನೆಟ್ ಪರೇಡ್; ಒಂದೇ ಸಾಲಿನಲ್ಲಿ ಕಾಣಿಸಲಿವೆ 6 ಗ್ರಹಗಳು
x
ಖಗೋಳದಲ್ಲಿ ಇಂದು ಪ್ಲಾನೆಟ್ ಪರೇಡ್

ಆಕಾಶದಲ್ಲಿ ವಿಸ್ಮಯ! ಇಂದು 'ಪ್ಲಾನೆಟ್ ಪರೇಡ್'; ಒಂದೇ ಸಾಲಿನಲ್ಲಿ ಕಾಣಿಸಲಿವೆ 6 ಗ್ರಹಗಳು

Planet Parade|ಇಂದು ಆಗಸದಲ್ಲಿ ಬುಧ, ಶುಕ್ರ, ಶನಿ ಸೇರಿದಂತೆ 6 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುವ 'ಪ್ಲಾನೆಟ್ ಪರೇಡ್' ಸಂಭವಿಸಲಿದೆ.


ಖಗೋಳ ಆಸಕ್ತರಿಗೆ ಇದು ಸಂಭ್ರಮದ ಸಮಯ. ಸೂರ್ಯಗ್ರಹಣದ ಬೆನ್ನಲ್ಲೇ ಈಗ ಬಾಹ್ಯಾಕಾಶದಲ್ಲಿ ಮತ್ತೊಂದು ಅಪರೂಪದ ವಿದ್ಯಮಾನ ಜರುಗಲಿದೆ. ಬುಧ, ಶುಕ್ರ, ಮಂಗಳ ಸೇರಿದಂತೆ ಒಟ್ಟು ಆರು ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲಲಿವೆ. ಈ ಅಪರೂಪದ ವಿದ್ಯಮಾನವನ್ನು 'ಪ್ಲಾನೆಟ್ ಪರೇಡ್' ಅಥವಾ 'ಗ್ರಹಗಳ ಪಥ ಸಂಚಲನ' ಎಂದು ಕರೆಯಲಾಗುತ್ತದೆ. ಅಚ್ಚರಿ ಎಂದರೆ ಈ ಅಭೂತಪೂರ್ವ ದೃಶ್ಯವನ್ನು ಬರಿಗಣ್ಣಿನಲ್ಲೇ ನೋಡಬಹುದಾಗಿದೆ.

ಏನಿದು ಗ್ರಹಗಳ ಪಥ ಸಂಚಲನ?

ನಾಸಾ (NASA) ನೀಡಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 28ರಂದು ಬುಧ, ಶುಕ್ರ, ನೆಪ್ಚೂನ್, ಶನಿ, ಯುರೇನಸ್ ಮತ್ತು ಗುರು ಗ್ರಹಗಳು ಆಕಾಶದಲ್ಲಿ ಪಥ ಸಂಚಲನ ನಡೆಸಲಿವೆ. ವಾಸ್ತವದಲ್ಲಿ ಈ ಗ್ರಹಗಳು ಪರಸ್ಪರ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿದ್ದರೂ, ಭೂಮಿಯಿಂದ ನೋಡುವಾಗ ಅವು ಒಂದೇ ಸರಳ ರೇಖೆಯಲ್ಲಿರುವಂತೆ ಗೋಚರಿಸುತ್ತವೆ. ಸಾಮಾನ್ಯವಾಗಿ 3 ಅಥವಾ 4 ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಸಾಮಾನ್ಯ, ಆದರೆ 6 ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ.

ವೀಕ್ಷಣೆ ಮಾಡುವುದು ಹೇಗೆ?

ಫೆಬ್ರವರಿ 28ರಂದು ಸೂರ್ಯಾಸ್ತದ ನಂತರ ಸುಮಾರು 30 ನಿಮಿಷಗಳ ಕಾಲ ಈ ದೃಶ್ಯ ಬಹಳ ಸ್ಪಷ್ಟವಾಗಿ ಕಾಣಿಸಲಿದೆ. ಪಶ್ಚಿಮ ದಿಕ್ಕಿನ ಕ್ಷಿತಿಜದಲ್ಲಿ (Horizon) ಈ ಗ್ರಹಗಳ ಸಮೂಹವನ್ನು ಕಾಣಬಹುದು.

ಬರಿಗಣ್ಣಿಗೆ ಕಾಣುವ ಗ್ರಹಗಳು

ಈ ಆರು ಗ್ರಹಗಳಲ್ಲಿ ಬುಧ, ಶುಕ್ರ, ಶನಿ ಮತ್ತು ಗುರು ಗ್ರಹಗಳನ್ನು ನಾವು ಬರಿಗಣ್ಣಿನಿಂದ ನೋಡಬಹುದು. ಆದರೆ, ಯುರೇನಸ್ ಮತ್ತು ನೆಪ್ಚೂನ್ ವೀಕ್ಷಿಸಲು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ ಅಗತ್ಯವಿದೆ.

ಎಲ್ಲಿ ಚೆನ್ನಾಗಿ ಕಾಣಿಸುತ್ತದೆ?

ವಿಸ್ತಾರವಾದ ಪ್ರದೇಶ, ಅಂದರೆ ಎತ್ತರದ ಕಟ್ಟಡಗಳು ಅಥವಾ ಮರಗಳ ಅಡೆತಡೆ ಇಲ್ಲದ ಜಾಗದಲ್ಲಿ ಈ ವಿದ್ಯಮಾನ ಚೆನ್ನಾಗಿ ಕಾಣಿಸುತ್ತದೆ. ಶುಕ್ರ ಮತ್ತು ಬುಧ ಗ್ರಹಗಳು ಕ್ಷಿತಿಜಕ್ಕೆ ಹತ್ತಿರದಲ್ಲಿದ್ದರೆ, ಶನಿ ಮತ್ತು ನೆಪ್ಚೂನ್ ಅದರ ಮೇಲ್ಭಾಗದಲ್ಲಿ ಹಾಗೂ ಯುರೇನಸ್ ಮತ್ತು ಗುರು ಗ್ರಹಗಳು ಆಕಾಶದ ಎತ್ತರದಲ್ಲಿ ಕಾಣಿಸಿಕೊಳ್ಳಲಿವೆ.

ಮುಂದಿನ ಪಥ ಸಂಚಲನ ಯಾವಾಗ?

ವಿಜ್ಞಾನಿಗಳ ಪ್ರಕಾರ, ಇಂತಹ ಬೃಹತ್ ಮಟ್ಟದ ಗ್ರಹಗಳ ಜೋಡಣೆ (7 ಗ್ರಹಗಳ ಸಾಲು) ಇನ್ನು ಮುಂದೆ 2047ರಲ್ಲಿ ಮಾತ್ರ ಸಂಭವಿಸಲಿದೆ. ಅಲ್ಲಿಯವರೆಗೆ ಕೇವಲ 2 ರಿಂದ 5 ಗ್ರಹಗಳ ಸಣ್ಣಪುಟ್ಟ ಜೋಡಣೆಗಳು ಮಾತ್ರ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಮಾನವು ಬಾಹ್ಯಾಕಾಶ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಹವ್ಯಾಸಿ ಖಗೋಳ ವಿಜ್ಞಾನಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ.

Read More
Next Story