50 ಲಕ್ಷ ಮಳೆನೀರು ಕೊಯ್ಲು, 70,000 ಕೆರೆಗಳ ಅಭಿವೃದ್ಧಿ: ಮೋದಿ ಹರ್ಷ
x

ಪ್ರಧಾನಿ ಮೋದಿ 

50 ಲಕ್ಷ ಮಳೆನೀರು ಕೊಯ್ಲು, 70,000 ಕೆರೆಗಳ ಅಭಿವೃದ್ಧಿ: ಮೋದಿ ಹರ್ಷ

ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 'ಜಲ ಸಂಚಯ ಅಭಿಯಾನ'ವು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಬಹುದೊಡ್ಡ ಯಶಸ್ಸು ಸಾಧಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.


Click the Play button to hear this message in audio format

ದೇಶದಾದ್ಯಂತ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜಲ ಸಂರಕ್ಷಣೆಯು ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಭಾನುವಾರ ಪ್ರಸಾರವಾದ ತಮ್ಮ ಜನಪ್ರಿಯ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಅವರು, ಕಳೆದೆರಡು ದಶಕಗಳಲ್ಲಿ ದೇಶವು ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನು ಕೊಂಡಾಡಿದ್ದಾರೆ.

ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 'ಜಲ ಸಂಚಯ ಅಭಿಯಾನ'ವು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಬಹುದೊಡ್ಡ ಯಶಸ್ಸು ಸಾಧಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಕೃತಕ ಮಳೆನೀರು ಕೊಯ್ಲು ರಚನೆಗಳನ್ನು (ರೈನ್‌ವಾಟರ್ ಹಾರ್ವೆಸ್ಟಿಂಗ್ ಸ್ಟ್ರಕ್ಚರ್ಸ್) ನಿರ್ಮಿಸಲಾಗಿದೆ. ಇದರ ಜೊತೆಗೆ 'ಅಮೃತ ಸರೋವರ ಅಭಿಯಾನ'ದ ಮೂಲಕ ದೇಶದ ಮೂಲೆ ಮೂಲೆಗಳಲ್ಲಿರುವ 70,000 ಕೆರೆಗಳನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂಬ ಮಹತ್ವದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಗ್ರಾಮ ಮಟ್ಟದಲ್ಲಿ ಸಮುದಾಯಗಳ ಒಗ್ಗಟ್ಟಿನ ಪ್ರಯತ್ನ

ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೇವಲ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗದೆ, ಪ್ರತಿಯೊಂದು ಹಳ್ಳಿಗಳಲ್ಲೂ ಸಮುದಾಯ ಮಟ್ಟದಲ್ಲಿ ಸಾರ್ವಜನಿಕರು ಒಗ್ಗೂಡಿ ಶ್ರಮಿಸುತ್ತಿರುವುದನ್ನು ಕಂಡು ತಮಗೆ ಅತೀವ ಸಂತೋಷವಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ. ಅನೇಕ ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುವ ಮುನ್ನವೇ ಹಳೆಯ ಕೆರೆಗಳ ಹೂಳೆತ್ತುವ ಮತ್ತು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸಾರ್ವಜನಿಕರ ಈ ಸಹಭಾಗಿತ್ವದಿಂದ ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಛತ್ತೀಸ್‌ಗಢ ಮತ್ತು ತೆಲಂಗಾಣದ ಸ್ಫೂರ್ತಿದಾಯಕ ಉದಾಹರಣೆಗಳು

ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆಯ ಕೆಲವು ಸ್ಫೂರ್ತಿದಾಯಕ ಯಶೋಗಾಥೆಗಳನ್ನು ಪ್ರಧಾನಿಯವರು ದೇಶದ ಜನತೆಯ ಮುಂದಿಟ್ಟರು. ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಸಣ್ಣ ಸಣ್ಣ ಮರುಪೂರಣ ಗುಂಡಿಗಳು ಹಾಗೂ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಳೆನೀರನ್ನು ಹೊಲದಲ್ಲೇ ಇಂಗುವಂತೆ ಮಾಡಿದ್ದಾರೆ. ಈ ಸರಳ ಹಾಗೂ ಪರಿಣಾಮಕಾರಿ ವಿಧಾನವನ್ನು 1,200ಕ್ಕೂ ಹೆಚ್ಚು ರೈತರು ಅಳವಡಿಸಿಕೊಂಡಿದ್ದು, ಆ ಪ್ರದೇಶದ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿದೆ.

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮುಧಿಗುಂಟ ಎಂಬ ಗ್ರಾಮದಲ್ಲಿ ಬರೋಬ್ಬರಿ 400 ಕುಟುಂಬಗಳು ಒಗ್ಗೂಡಿ ತಮ್ಮ ಮನೆಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಸಾಮೂಹಿಕ ಆಂದೋಲನದಿಂದ ಕೇವಲ ಅಂತರ್ಜಲ ಮಟ್ಟ ಸುಧಾರಿಸಿದ್ದು ಮಾತ್ರವಲ್ಲದೆ, ಕಲುಷಿತ ನೀರಿನಿಂದ ಹರಡುತ್ತಿದ್ದ ರೋಗ-ರುಜಿನಗಳ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More
Next Story