
ಇಂದೋರ್‌ನಲ್ಲಿ ಬ್ರಿಕ್ಸ್ ಕೃಷಿ ಸಮ್ಮೇಳನ: ಜಾಗತಿಕ ಆಹಾರ ಭದ್ರತೆಗೆ ಹೊಸ ಮಂತ್ರ
ಜಗತ್ತಿನ ಒಟ್ಟು 21 ರಾಷ್ಟ್ರಗಳ ಕೃಷಿ ಸಚಿವರು, ಕೃಷಿ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಜಾಗತಿಕ ಸಹಕಾರವನ್ನು ಬಲಪಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಮಧ್ಯಪ್ರದೇಶದ ವಾಣಿಜ್ಯ ನಗರಿ ಇಂದೋರ್‌ನಲ್ಲಿ ಬ್ರಿಕ್ಸ್ ಕೃಷಿ ಸಮ್ಮೇಳನ ಅದ್ಧೂರಿಯಾಗಿ ಆರಂಭಗೊಂಡಿದೆ. ಜಾಗತಿಕ ಕೃಷಿ ವಲಯದಲ್ಲಿ ಎದುರಾಗಿರುವ ಸವಾಲುಗಳು, ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಚರ್ಚಿಸಲು ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಒಂದೆಡೆ ಸೇರಿದ್ದಾರೆ.
ಈ ಬಾರಿಯ ಸಮ್ಮೇಳನವು ಕೇವಲ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬ್ರೆಜಿಲ್, ಈಜಿಪ್ಟ್, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಚೀನಾ, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದಂತಹ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲದೆ, ಜಗತ್ತಿನ ಒಟ್ಟು 21 ರಾಷ್ಟ್ರಗಳ ಕೃಷಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕೃಷಿ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಜಾಗತಿಕ ಸಹಕಾರವನ್ನು ಬಲಪಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಸಮ್ಮೇಳನದ ಪ್ರಮುಖ ವಿಷಯಗಳು
ಇಂದೋರ್‌ನಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವು ಗೋಷ್ಠಿಗಳು ಆಯೋಜನೆಯಾಗಿವೆ. ಮುಖ್ಯವಾಗಿ ಆಹಾರ ಭದ್ರತೆ, ಕೃಷಿ ಆವಿಷ್ಕಾರ, ಹವಾಮಾನ ಸ್ನೇಹಿ ಕೃಷಿ, ಕೃಷಿ ವ್ಯಾಪಾರ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಹೆಚ್ಚುತ್ತಿರುವ ಜಾಗತಿಕ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುವುದು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಿ, ಪರಿಸರಕ್ಕೆ ಹಾನಿಯಾಗದಂತೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು. ದೇಶಗಳ ನಡುವೆ ಕೃಷಿ ಉತ್ಪನ್ನಗಳ ಸುಗಮ ವ್ಯಾಪಾರ ಮತ್ತು ಆರ್ಥಿಕ ಉತ್ತೇಜನಕ್ಕೆ ಕೈಗೊಳ್ಳಬೇಕಾದ ಕ್ರಮಗಳು. ಸಣ್ಣ ಹಿಡುವಳಿದಾರರಿಗೆ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸುವ ಸಂಬಂಧ ಗೋಷ್ಠಿಗಳು ನಡೆಯಲಿವೆ.
ಜೂ. 12 ರಂದು ಕೃಷಿ ಸಚಿವರ ವಿಶೇಷ ಸಂವಾದ ನಡೆಯಲಿದೆ. ಇದರಲ್ಲಿ ಸಣ್ಣ ರೈತರು, ಮಹಿಳೆಯರು ಮತ್ತು ಯುವಕರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಆಹಾರ ಭದ್ರತೆಯನ್ನು ಹೇಗೆ ಸಾಧಿಸಬೇಕು ಎಂಬ ವಿಷಯದ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ. ಯುವಜನತೆಯನ್ನು ಕೃಷಿಯತ್ತ ಆಕರ್ಷಿಸುವುದು ಮತ್ತು ಕೃಷಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ. ಜೂ.13ರಂದು ಸಮ್ಮೇಳನದ ನಿರ್ಣಾಯಕ ದಿನವಾಗಿದೆ. ಬ್ರಿಕ್ಸ್ ರಾಷ್ಟ್ರಗಳ ಕೃಷಿ ಮಂತ್ರಿಗಳು ಸಭೆ ಸೇರಿ, ಜಂಟಿ ಘೋಷಣೆಯನ್ನು ಹೊರಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಕೃಷಿ ನೀತಿಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಒಮ್ಮತದ ನಿರ್ಧಾರಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.
ಸಂಸ್ಕೃತಿ ಮತ್ತು ಪರಂಪರೆಯ ದರ್ಶನ
ಅತಿಥಿಗಳಾಗಿ ಆಗಮಿಸಿರುವ ವಿದೇಶಿ ಪ್ರತಿನಿಧಿಗಳಿಗೆ ಇಂದೋರ್‌ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸಲು ಆಯೋಜಕರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿಧಿಗಳು ಇಂದೋರ್‌ನ ಐತಿಹಾಸಿಕ ತಾಣಗಳಾದ ರಾಜವಾಡ, ಖಾದ್ಯಪ್ರಿಯರ ನೆಚ್ಚಿನ 'ಛಪ್ಪನ್ ದೂಕಾನ್', ರಾತ್ರಿ ಮಾರುಕಟ್ಟೆಗೆ ಹೆಸರುವಾಸಿಯಾದ 'ಸರಾಫಾ ಬಜಾರ್' ಮತ್ತು ಐತಿಹಾಸಿಕ ಮಾಂಡುವಿಗೆ ಭೇಟಿ ನೀಡಲಿದ್ದಾರೆ. ಇದು ಭಾರತದ ಅತಿಥಿ ಸತ್ಕಾರದೊಂದಿಗೆ ಇಂದೋರ್‌ನ ಸಾಂಸ್ಕೃತಿಕ ವೈಭವವನ್ನು ವಿದೇಶಿ ಪ್ರತಿನಿಧಿಗಳಿಗೆ ಪರಿಚಯಿಸಲು ಸಹಕಾರಿಯಾಗಲಿದೆ.
ಪ್ರಸ್ತುತ ಜಗತ್ತು ಹವಾಮಾನ ವೈಪರೀತ್ಯ ಮತ್ತು ಆಹಾರ ಪೂರೈಕೆಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಈ ಸಮ್ಮೇಳನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಕೃಷಿ ತಂತ್ರಜ್ಞಾನ ಹಂಚಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಸುಸ್ಥಿರ ಬಳಕೆಯ ಬಗ್ಗೆ ಈ ರಾಷ್ಟ್ರಗಳು ಒಗ್ಗೂಡಿದರೆ, ಜಾಗತಿಕ ಹಸಿವನ್ನು ನೀಗಿಸಲು ಸಾಧ್ಯವಾಗುತ್ತದೆ. ಭಾರತವು ಇಂದೋರ್‌ನಂತಹ ಅಭಿವೃದ್ಧಿಶೀಲ ನಗರದಲ್ಲಿ ಈ ಸಮ್ಮೇಳನ ನಡೆಸುವ ಮೂಲಕ, ತಾನು ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧವಿರುವುದನ್ನು ಸಾಬೀತುಪಡಿಸಿದೆ.

