
Jan 18 news LIVE: ವಿಮಾನಗಳ ರದ್ದು, ವಿಳಂಬ: ಇಂಡಿಗೋಗೆ ಭಾರೀ ದಂಡ
ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ
ಇಂದು ಭಾನುವಾರ, ಜನವರಿ 18, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 18 Jan 2026 12:00 PM IST
ಯೂರೋಪಿಯನ್ ಎಂಟು ರಾಷ್ಟ್ರಗಳಿಗೆ ಟ್ರಂಪ್ ಸುಂಕದ ಬರೆ
ಗ್ರೀನ್‌ಲ್ಯಾಂಡ್ ದ್ವೀಪದ ಮೇಲೆ ಅಮೆರಿಕದ ನಿಯಂತ್ರಣ ಸಾಧಿಸುವ ತಮ್ಮ ಇಚ್ಛೆಗೆ ಅಡ್ಡಬಂದ ಯುರೋಪಿನ ಎಂಟು ಪ್ರಮುಖ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಿಗೆದ್ದಿದ್ದಾರೆ. ಈ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಫೆಬ್ರವರಿಯಿಂದ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಘೋಷಿಸುವ ಮೂಲಕ ಮಿತ್ರರಾಷ್ಟ್ರಗಳಿಗೇ ಬಿಸಿ ಮುಟ್ಟಿಸಿದ್ದಾರೆ.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್‌ನಲ್ಲಿದ್ದ ಟ್ರಂಪ್, ಶನಿವಾರ (ಜ.17) ತಮ್ಮದೇ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ದೇಶಗಳು ಟ್ರಂಪ್ ಅವರ ಸುಂಕದ ಬರೆಗೆ ಗುರಿಯಾಗಲಿವೆ.
ಅಷ್ಟೇ ಅಲ್ಲದೆ, ಜೂನ್ 1ರ ಒಳಗೆ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸುವ ಒಪ್ಪಂದವಾಗದಿದ್ದರೆ, ಈ ಆಮದು ಸುಂಕವನ್ನು ಶೇ. 25ಕ್ಕೆ ಏರಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದು ಯುರೋಪ್ ಒಕ್ಕೂಟ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ತೀವ್ರ ಬಿರುಕು ಮೂಡಿಸುವ ಸಾಧ್ಯತೆಯಿದೆ.
- 18 Jan 2026 11:51 AM IST
ದೆಹಲಿಯಲ್ಲಿ ದಟ್ಟ ಮಂಜು, ಗೋಚರತೆ ಪ್ರಮಾಣ ಶೂನ್ಯ
ದೇಶದ ರಾಜಧಾನಿ ನವದೆಹಲಿ ಹಾಗೂ ಎನ್ಸಿಆರ್ ಪ್ರದೇಶ ದಟ್ಟ ಮಂಜಿನಿಂದ ಆವೃತವಾಗಿದ್ದು, ಭಾನುವಾರ ಬೆಳಿಗ್ಗೆ ಗೋಚರತೆ ಪ್ರಮಾಣ ಶೂನ್ಯಕ್ಕೆ ಕುಸಿದಿದೆ. ಮೈ ಕೊರೆಯುವ ಚಳಿಯ ನಡುವೆಯೇ ವಾಯುಮಾಲಿನ್ಯದ ಪ್ರಮಾಣವೂ ಮಿತಿಮೀರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾನುವಾರ ಬೆಳಿಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.3 ಡಿಗ್ರಿಯಷ್ಟು ಕಡಿಮೆ. ಸಫ್ದರ್‌ಜಂಗ್ ಪ್ರದೇಶದಲ್ಲಿ ಗೋಚರತೆ ಶೂನ್ಯವಾಗಿದ್ದರೆ, ಪಾಲಂನಲ್ಲಿ ಕೇವಲ 100 ಮೀಟರ್‌ಗಳಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
- 18 Jan 2026 11:40 AM IST
ಪ್ರತಿಭಟನೆ ಹಿಂದೆ ಅಮೆರಿಕ ಕೈವಾಡ: ಇರಾನ್ ಆರೋಪ
ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಸಂಭವಿಸಿದ ಸಾವಿರಾರು ಸಾವು-ನೋವುಗಳಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನೇರ ಹೊಣೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಆರೋಪ ಮಾಡಿದ್ದಾರೆ. ಈ ಕೃತ್ಯಗಳಿಗಾಗಿ ಟ್ರಂಪ್ ಅವರನ್ನು 'ಅಪರಾಧಿ' ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ದೇಶವಿರೋಧಿ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಖಮೇನಿ, "ನಾವು ದೇಶವನ್ನು ಅನಗತ್ಯವಾಗಿ ಯುದ್ಧಕ್ಕೆ ತಳ್ಳುವುದಿಲ್ಲ. ಆದರೆ, ಇರಾನ್ ವಿರುದ್ಧ ಸಂಚು ರೂಪಿಸಿದ ದೇಶೀಯ ಅಥವಾ ಅಂತಾರಾಷ್ಟ್ರೀಯ ಅಪರಾಧಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ," ಎಂದು ಗುಡುಗಿದ್ದಾರೆ. ಇರಾನ್‌ನ ಸೇನೆ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸುವುದು ಅಮೆರಿಕದ ಹುನ್ನಾರವಾಗಿದೆ ಎಂದು ಅವರು ದೂರಿದ್ದಾರೆ.
- 18 Jan 2026 11:25 AM IST
ವಿಮಾನಗಳ ರದ್ದು, ವಿಳಂಬ: ಇಂಡಿಗೋಗೆ ಭಾರೀ ದಂಡ
ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ ಭಾರೀ ಪ್ರಮಾಣದ ವಿಮಾನಗಳ ರದ್ದು ಮತ್ತು ವಿಳಂಬದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ದೇಶದ ಪ್ರಮುಖ ವಿಮಾನಯಾನ ಸಂಸ್ಥೆ 'ಇಂಡಿಗೋ'ಗೆ ಬಿಸಿ ಮುಟ್ಟಿಸಿದೆ. ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂಪಾಯಿ ದಂಡ ವಿಧಿಸಿರುವುದಲ್ಲದೆ, ಸಿಇಒ ಪೀಟರ್ ಎಲ್ಬರ್ಸ್ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.





