
ವಲಸೆ ವೀಸಾ ಸ್ಥಗಿತ- 75 ರಾಷ್ಟ್ರಗಳಿಗೆ ಟ್ರಂಪ್ ಬಿಗ್ ಶಾಕ್!
ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ
ಇಂದು ಗುರುವಾರ, ಜನವರಿ 15, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 15 Jan 2026 11:48 AM IST
ಕೇರಳ SAI ಕೇಂದ್ರದ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿನಿಯರು ಆತ್ಮಹತ್ಯೆ
ಕೇರಳದಲ್ಲಿ ಇಬ್ಬರು ಉದಯೋನ್ಮುಖ ಕ್ರೀಡಾಪಟುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಲ್ಲಂನ ಭಾರತದ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್‌ನಲ್ಲಿ ನಡೆದ ಈ ಘಟನೆಯು ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮತ್ತು ಆತಂಕ ಮೂಡಿಸಿದೆ. ಮೃತಪಟ್ಟ ವಿದ್ಯಾರ್ಥಿನಿಯರು 17 ಮತ್ತು 15 ವರ್ಷ ವಯಸ್ಸಿನವರು. ಕೋಝಿಕ್ಕೋಡ್ ಮತ್ತು ತಿರುವನಂತಪುರದ ನಿವಾಸಿಗಳಾಗಿದ್ದರು.
ಗುರುವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ತರಬೇತಿ ಶಿಬಿರಕ್ಕೆ ಇಬ್ಬರೂ ಹಾಜರಾಗದಿದ್ದಾಗ, ಇತರ ವಿದ್ಯಾರ್ಥಿನಿಯರು ಅವರು ಉಳಿದುಕೊಂಡಿದ್ದ ಕೊಠಡಿಗೆ ಹೋಗಿ ನೋಡಿದ್ದಾರೆ. ಕೊಠಡಿಯ ಬಾಗಿಲನ್ನು ಎಷ್ಟು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಹಾಸ್ಟೆಲ್ ಅಧಿಕಾರಿಗಳು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಇಬ್ಬರೂ ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
15 ವರ್ಷದ ಬಾಲಕಿ ಬೇರೆ ಕೊಠಡಿಯಲ್ಲಿ ಉಳಿಯುತ್ತಿದ್ದಳು. ಆದರೆ ಬುಧವಾರ ರಾತ್ರಿ 17 ವರ್ಷದ ವಿದ್ಯಾರ್ಥಿನಿಯ ಕೊಠಡಿಗೆ ಬಂದು ಅಲ್ಲೇ ತಂಗಿದ್ದಳು ಎಂದು ತಿಳಿದುಬಂದಿದೆ. ಮುಂಜಾನೆ ವೇಳೆ ಇಬ್ಬರೂ ಇತರ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ಹಠಾತ್ತಾಗಿ ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ನಿಗೂಢವಾಗಿದೆ.
ಸ್ಥಳಕ್ಕೆ ಧಾವಿಸಿರುವ ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಸ್ಥಳೀಯರ ವಿಚಾರಣೆ ನಡೆಸುತ್ತಿದ್ದಾರೆ. ಮೃತಪಟ್ಟ 17 ವರ್ಷದ ಬಾಲಕಿ ಅಥ್ಲೆಟಿಕ್ಸ್ (Athletics) ವಿಭಾಗದ ತರಬೇತಿ ಪಡೆಯುತ್ತಿದ್ದಳು ಮತ್ತು ಆಕೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಇನ್ನು 15 ವರ್ಷದ ಬಾಲಕಿ ಕಬಡ್ಡಿ (Kabaddi) ಆಟಗಾರ್ತಿಯಾಗಿದ್ದು, ಆಕೆ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆದರೆ, ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
- 15 Jan 2026 11:09 AM IST
ಟ್ರಂಪ್ ಸರ್ಕಾರದಿಂದ 75 ದೇಶಗಳ ವಲಸೆ ವೀಸಾ ಸ್ಥಗಿತ
ವಲಸೆ ನೀತಿಯಲ್ಲಿ ಮಹತ್ತರ ಬದಲಾವಣೆ ತಂದಿರುವ ಟ್ರಂಪ್ ಸರ್ಕಾರ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಬರೋಬ್ಬರಿ 75 ರಾಷ್ಟ್ರಗಳ ವಲಸೆ ವೀಸಾವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಅಮೆರಿಕದಲ್ಲಿ ನೆಲೆಸುವ ಬಯಕೆ ಹೊಂದಿದ್ದ ಲಕ್ಷಾಂತರ ಮಂದಿಗೆ ಈ ನಿರ್ಧಾರ ಆಘಾತ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರವು ವಲಸೆ ನೀತಿಯಲ್ಲಿ ಕ್ರಾಂತಿಕಾರಕ ಮತ್ತು ಕಟ್ಟುನಿಟ್ಟಿನ ಬದಲಾವಣೆ ತಂದಿದೆ. ಜನವರಿ 21 ರಿಂದ ಜಾರಿಗೆ ಬರಲಿರುವ ಈ ಹೊಸ ಆದೇಶವು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯದ 75 ರಾಷ್ಟ್ರಗಳ ನಾಗರಿಕರ ಮೇಲೆ ನೇರ ಪರಿಣಾಮ ಬೀರಲಿದೆ.
ಯಾರಿಗೆ ಅನ್ವಯ?
ಈ ನಿರ್ಬಂಧವು ಕೇವಲ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಮತ್ತು ಕೆಲಸ ಮಾಡಲು ಇಚ್ಛಿಸುವವರಿಗೆ (Immigrant Visas) ಮಾತ್ರ ಅನ್ವಯಿಸುತ್ತದೆ. ಪ್ರವಾಸಿಗರು (Tourists) ಅಥವಾ ತಾತ್ಕಾಲಿಕ ಕೆಲಸಗಾರರಿಗೆ (Temporary Workers) ಈ ಆದೇಶದಿಂದ ಸದ್ಯಕ್ಕೆ ವಿನಾಯಿತಿ ನೀಡಲಾಗಿದೆ.
ಬಾಧಿತ ರಾಷ್ಟ್ರಗಳು: ಈ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ರಷ್ಯಾ, ಇರಾನ್, ಅಫ್ಘಾನಿಸ್ತಾನ, ಬ್ರೆಜಿಲ್, ನೈಜೀರಿಯಾ, ಸೋಮಾಲಿಯಾ ಮತ್ತು ಥೈಲ್ಯಾಂಡ್‌ನಂತಹ ಪ್ರಮುಖ ರಾಷ್ಟ್ರಗಳಿವೆ. ಕಳೆದ ಒಂದು ವರ್ಷದಿಂದ ವಿದೇಶಿಯರಿಗೆ ಕಟ್ಟುನಿಟ್ಟಿನ ತಪಾಸಣಾ ನಿಯಮಗಳನ್ನು ಹೇರುತ್ತಿದ್ದ ಟ್ರಂಪ್ ತಂಡವು, ಈಗ ರಾಷ್ಟ್ರೀಯತೆಯ ಆಧಾರದ ಮೇಲೆ ಸಾರಾಸಗಟು ವೀಸಾ ರದ್ದತಿ ಮಾಡುವ ಮೂಲಕ ವಲಸೆ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.
ಈ ನಿರ್ಧಾರಕ್ಕೆ ಕಾರಣವೇನು?
ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ನೀಡಿರುವ ಪ್ರಮುಖ ಕಾರಣಗಳು ಇಲ್ಲಿವೆ:
1. ಸರ್ಕಾರಿ ಸೌಲಭ್ಯಗಳ ದುರುಪಯೋಗ ತಡೆ: ಅಮೆರಿಕಕ್ಕೆ ಬಂದು ಅಲ್ಲಿನ ಸರ್ಕಾರದ ಕಲ್ಯಾಣ ಯೋಜನೆಗಳು ಅಥವಾ ಆರ್ಥಿಕ ಸಹಾಯದ (Welfare) ಮೇಲೆ ಅವಲಂಬಿತರಾಗುವ ಸಾಧ್ಯತೆ ಇರುವವರಿಗೆ ವೀಸಾ ನಿರಾಕರಿಸುವುದು ಹಳೆಯ ನಿಯಮ. ಈಗ ಇದೇ ಅಧಿಕಾರವನ್ನು ಬಳಸಿ 75 ರಾಷ್ಟ್ರಗಳ ಮೇಲೆ ಒಟ್ಟಾಗಿ ನಿರ್ಬಂಧ ಹೇರಲಾಗಿದೆ.
2. ರಾಷ್ಟ್ರೀಯ ಭದ್ರತೆ: ವಲಸಿಗರ ಹಿನ್ನೆಲೆಯನ್ನು ಸರಿಯಾಗಿ ಪರೀಕ್ಷಿಸಲು ಮತ್ತು ದೇಶದ ಭದ್ರತೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಆಡಳಿತ ಮಂಡಳಿ ವಾದಿಸಿದೆ.
- 15 Jan 2026 10:33 AM IST
ದಯಾಮರಣ ಪ್ರಕರಣ- ಸುಪ್ರೀಂ ಕೋರ್ಟ್‌ನಿಂದ ಇಂದು ಐತಿಹಾಸಿಕ ತೀರ್ಪು!
ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದು, ಕೃತಕ ಜೀವವೈದ್ಯಕೀಯ ಸಾಧನಗಳ ಮೂಲಕ ಉಸಿರಾಡುತ್ತಿರುವ ಹರೀಶ್ ರಾಣಾ ಅವರ ಬದುಕಿನ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಕುರಿತು ಅಂತಿಮ ಆದೇಶ ಹೊರಡಿಸಲಿದೆ.
2013ರಲ್ಲಿ ಚಂಡೀಗಢದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಹರೀಶ್ ರಾಣಾ ಅಂದಿನಿಂದ ಇಂದಿನವರೆಗೆ 'ಕೋಮಾ' ಸ್ಥಿತಿಯಲ್ಲೇ ಇದ್ದಾರೆ. ಚಿಕಿತ್ಸೆಗೆ ಸ್ಪಂದಿಸದ, ಕೇವಲ ಯಂತ್ರಗಳ ಸಹಾಯದಿಂದ ಉಸಿರಾಡುತ್ತಿರುವ ಹರೀಶ್ ಅವರ ನೋವಿನ ಬದುಕಿಗೆ ಅಂತ್ಯ ಹಾಡಲು ಅವಕಾಶ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇಂದು ನಿರ್ಧಾರ ಪ್ರಕಟಿಸಲಿದೆ.
ಹರೀಶ್ ಅವರ ಪೋಷಕರು ತಮ್ಮ ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ನೋಡಲಾಗದೆ, ಆತನಿಗೆ ನೀಡಲಾಗುತ್ತಿರುವ 'ಜೀವನ ರಕ್ಷಕ ವ್ಯವಸ್ಥೆ' (Life-support) ಹಿಂಪಡೆಯಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದು ವೇಳೆ ಕೋರ್ಟ್ ಹರೀಶ್ ಅವರ ಲೈಫ್-ಸಪೋರ್ಟ್ ತೆರವುಗೊಳಿಸಲು ಒಪ್ಪಿಗೆ ನೀಡಿದರೆ, ಇದು ಭಾರತದಲ್ಲಿ ಕಾನೂನುಬದ್ಧವಾಗಿ ಅನುಮೋದಿಸಲ್ಪಟ್ಟ ಮೊದಲ ದಯಾಮರಣ ಪ್ರಕರಣವಾಗಲಿದೆ.
- 15 Jan 2026 10:27 AM IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಮತ ಚಲಾಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಗುರುವಾರ ಬೆಳಗ್ಗೆ ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನೋಟಾ' (None of the Above) ಆಯ್ಕೆಯು ಪರೋಕ್ಷವಾಗಿ ಅಯೋಗ್ಯ ಅಭ್ಯರ್ಥಿಗಳು ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂಬ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
- 15 Jan 2026 10:26 AM IST
ಇರಾನ್ ವಾಯುಪ್ರದೇಶ ಬಂದ್: ಏರ್ ಇಂಡಿಯಾದ 3 ಅಮೆರಿಕ ವಿಮಾನಗಳು ರದ್ದು
ಇರಾನ್‌ನಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಲ್ಲಿನ ವಾಯುಪ್ರದೇಶವನ್ನು (Airspace) ನಾಗರಿಕ ವಿಮಾನಗಳ ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಇದರ ನೇರ ಪರಿಣಾಮ ಭಾರತದಿಂದ ಅಮೆರಿಕಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳ ಮೇಲೆ ಬೀರಿದೆ.
- 15 Jan 2026 10:21 AM IST
ಪೌರಾಯುಕ್ತೆಗೆ ಧಮ್ಕಿ: ಪರಾರಿಯಾದ 'ಕೈ' ಮುಖಂಡ ರಾಜೀವ್ ಗೌಡ ಬಂಧನಕ್ಕೆ ಬಲೆ!
ಬ್ಯಾನರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅಶ್ಲೀಲವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಈಗ ಪೊಲೀಸರಿಗೆ ಹೆದರಿ ತಲೆಮರೆಸಿಕೊಂಡಿದ್ದಾರೆ. ಬ್ಯಾನರ್ ತೆರವುಗೊಳಿಸಿದರೆ ಕಚೇರಿಗೆ ಬೆಂಕಿ ಹಚ್ಚುತ್ತೇನೆ, ಜನರನ್ನು ಕರೆತಂದು ಚಪ್ಪಲಿಯಲ್ಲಿ ಹೊಡೆಸುತ್ತೇನೆ" ಎಂದು ರಾಜೀವ್ ಗೌಡ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಪೌರಾಯುಕ್ತೆ ಅಮೃತಾ ಗೌಡ ಅವರು ನೀಡಿದ ದೂರಿನ ಮೇರೆಗೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ರಾಜೀವ್ ಗೌಡ ವಿರುದ್ಧ BNS ಸೆಕ್ಷನ್ 79, 132, 352, 199 ಮತ್ತು 54 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

