LIVE Todays news LIVE Feb 07: 5.71 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ನಾಶ
x

Today's news LIVE Feb 07: 5.71 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ನಾಶ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


ಇಂದು ಶನಿವಾರ ಫೆಬ್ರುವರಿ 07, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 7 Feb 2026 10:33 AM IST

    ಜಿಬಿಎ ಚುನಾವಣೆಗೆ ಬಿಜೆಪಿ ಸಜ್ಜು: ಉಸ್ತುವಾರಿಗಳಿಂದ ಇಂದು ಮೊದಲ ಸಭೆ

    ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿಜೆಪಿ ಸಿದ್ದತೆ ನಡೆಸುತ್ತಿದ್ದು, ಹೈಕಮಾಂಡ್‌ನಿಂದ ಜಿಬಿಎ ಚುನಾವಣೆಗೆ ಉಸ್ತುವಾರಿಗಳಾಗಿ ನೇಮಕವಾಗಿರುವ ರಾಮ್ ಮಾಧವ್, ಸಹ ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಶನಿವಾರ(ಫೆ.7) ಸಭೆ ನಡೆಯಲಿದೆ. 

    ಜಿಬಿಎ ಚುನಾವಣೆ ಸಿದ್ದತೆ ಹೇಗಿರಬೇಕು, ಚುನಾವಣಾ ಘೋಷಣೆ ಮುನ್ನವೇ ಏನೆಲ್ಲಾ ಕಾರ್ಯಕ್ರಮ ಮಾಡಬೇಕು ಎಂದು ಉಸ್ತುವಾರಿಗಳು ರಾಜ್ಯದ ಮುಖಂಡರಿಗೆ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಸಂಸದರು ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರುಗಳು, ಮಾಜಿ ಸಚಿವರುಗಳು ಹಾಗೂ ಬಿಬಿಎಂಪಿ ಮಾಜಿ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

  • 7 Feb 2026 9:07 AM IST

    ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ ಹರ್ಷ

    ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಚೌಕಟ್ಟನ್ನು ಶನಿವಾರ ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ದೊರೆತ ದೊಡ್ಡ ಉತ್ತೇಜನವಾಗಿದ್ದು, ಭಾರತೀಯ ಕಾರ್ಮಿಕರು, ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಬಣ್ಣಿಸಿದ್ದಾರೆ. ಈ ಘೋಷಣೆಯ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ಎರಡು ರಾಷ್ಟ್ರಗಳು ಮಧ್ಯಂತರ ವ್ಯಾಪಾರ ಒಪ್ಪಂದದ ರಚನೆಯ ಬಗ್ಗೆ ಒಮ್ಮತಕ್ಕೆ ಬಂದಿವೆ ಎಂದು ತಿಳಿಸಿದ್ದಾರಲ್ಲದೆ, ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ದೃಢವಾದ ಬಾಂಧವ್ಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೋರುತ್ತಿರುವ ವೈಯಕ್ತಿಕ ಬದ್ಧತೆಗಾಗಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • 7 Feb 2026 8:34 AM IST

    ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು ನಾಶ

    ಬೆಂಗಳೂರಿನಲ್ಲಿ ಅಬಕಾರಿ‌ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಇಂದು ನಾಶಪಡಿಸಲಾಯಿತು. ದಾಬಸ್‌ಪೇಟೆಯ KWWA‌ನಲ್ಲಿ ಬೆಂಗಳೂರು ಉತ್ತರ ವಿಭಾಗದ 1,2,3,4 ಅಬಕಾರಿ ಜಿಲ್ಲೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 156 ಪ್ರಕರಣಗಳಲ್ಲಿ ಸುಮಾರು 650 ಕೆಜಿಯಷ್ಟು ಗಾಂಜಾ, 2.296 ಕೆಜಿ ಗಾಂಜಾ ಮಿಶ್ರಿತ ಚಾಕೋಲೆಟ್, 70 ಗ್ರಾಂ MDMA, 570 ಗ್ರಾಂ ಹಶೀಶ್ ಆಯಿಲ್, ಗಾಂಜಾ ಗಿಡಗಳು ಸೇರಿದಂತೆ ಹಲವು ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.


    ಕಾನೂನಿನ ಕಣ್ಣುತಪ್ಪಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಇಂದು ಮಾದಕ ವಸ್ತಗಳನ್ನು ನಾಶಪಡಿಸಲಾಗಿದೆ‌. ಈ ವೇಳೆ ಬಿಯುಡಿ 1 ಉಪ ಆಯುಕ್ತ ಮೌಸಸ್ ಸ್ಯಾಮುಯೆಲ್, ಬಿಯುಡಿ 2 ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್, ಬಿಯುಡಿ 3 ಉಪ ಆಯುಕ್ತ ಮುರುಳಿ, ಬಿಯುಡಿ 4 ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇಲಾಖೆಯ‌ ಸಿಬ್ಬಂದಿ ಉಪಸ್ಥಿತರಿದ್ದರು.

    ನಾವು ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್‌ಗೆ ಕಡಿವಾಣ ಹಾಕಬೇಕು ಎಂದು ನಮ್ಮ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಯುವಕರ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ಗೆ ಕಡಿವಾಣ ಹಾಕ್ಬೇಕು. ಎನ್‌ಡಿಪಿಎಸ್ ಕಾಯ್ದೆ ಸಮರ್ಪಕವಾಗಿ, ಮತ್ತಷ್ಟು ಪರಿಣಾಮವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story