Todays news LIVE Feb 04: ಜೈಶಂಕರ್ ಮತ್ತು ಮಾರ್ಕೊ ರೂಬಿಯೋ ಮಹತ್ವದ ಮಾತುಕತೆ
x

Today's news LIVE Feb 04: ಜೈಶಂಕರ್ ಮತ್ತು ಮಾರ್ಕೊ ರೂಬಿಯೋ ಮಹತ್ವದ ಮಾತುಕತೆ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


ಇಂದು ಬುಧವಾರ, ಫೆಬ್ರುವರಿ 04, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • ಮಾನವ-ವನ್ಯಜೀವಿ ಸಂಘರ್ಷ| ಕೇಂದ್ರದ ಅರಣ್ಯ ಸಚಿವರ ಜತೆ  ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ
    4 Feb 2026 1:25 PM IST

    ಮಾನವ-ವನ್ಯಜೀವಿ ಸಂಘರ್ಷ| ಕೇಂದ್ರದ ಅರಣ್ಯ ಸಚಿವರ ಜತೆ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

    ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೀವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಸಂಸತ್‌ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಈ ಭೇಟಿಯ ವೇಳೆ ಕುಮಾರಸ್ವಾಮಿ ಅವರು, ಮುಖ್ಯವಾಗಿ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಆನೆಗಳ ದಾಳಿ ಬಗ್ಗೆ ಚರ್ಚೆ ನಡೆಸಿದರು.

    ವನ್ಯಜೀವಿ ಉಪಟಳ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಅನೇಕರು, ಅದರಲ್ಲಿಯೂ ಅರಣ್ಯದ ಅಂಚಿನಲ್ಲಿ ಬೇಸಾಯ ಮಾಡುವ, ದನಕರುಗಳನ್ನು ಮೇಯಿಸುವ ರೈತರು ಬಲಿಯಾಗಿದ್ದಾರೆ. ಇನ್ನೂ ಅನೇಕರು ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಈ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಭೂಪೇಂದ್ರ ಯಾದವ್‌ ಅವರನ್ನು ವಿನಂತಿಸಿದರು.

    ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಅದಕ್ಕೆ ಪೂರಕವಾದ ಎಲ್ಲಾ ಮಾಹಿತಿಯನ್ನು ಸಚಿವ ಕುಮಾರಸ್ವಾಮಿ ಅವರಿಂದ ಪಡೆದುಕೊಂಡರು. ಅಲ್ಲದೆ, ಈ ನಿಟಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಕುರಿತು ನಿರ್ದೇಶನ ನೀಡಿದರು.

  • ವಿಬಿ ಜಿ ರಾಮ್‌ ಜಿ ಕಾಯ್ದೆಯಿಂದ ಜನಸಾಮನ್ಯರಿಗೆ ಅನ್ಯಾಯ
    4 Feb 2026 1:01 PM IST

    ವಿಬಿ ಜಿ ರಾಮ್‌ ಜಿ ಕಾಯ್ದೆಯಿಂದ ಜನಸಾಮನ್ಯರಿಗೆ ಅನ್ಯಾಯ

    ವಿಧಾನಸಭೆಯಲ್ಲಿ ವಿಬಿ ಜಿ ರಾಮ್‌ ಜಿ ಕುರಿತು ನಡೆದ ಚರ್ಚೆಯಲ್ಲಿ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರ ವಿವಾದಾತ್ಮಕ ಕಾಯ್ದೆಯನ್ನು ತಂದಿದೆ. ಈ ನೂತನ ಕಾಯ್ದೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರು ಕೈ ಬಿಡಲಾಗಿದೆ. ಗ್ರಾಮೀಣ ಜನರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಶೇ.55 ಜನರ ಉದ್ಯೋಗದ ಹಕ್ಕುನ್ನು ಕಸಿದುಕೊಳ್ಳಲಾಗಿದೆ  ಎಂದರು.

    ಬಿಜೆಪಿಯವರು ಮನುವಾದಿಗಳು, ಅವರ ಸಂಸ್ಕೃತಿ ನೂತನ ಕಾಯ್ದೆಯಲ್ಲಿದೆ. ಮಹಿಳೆಯರ ಆರ್ಥಿಕ ಹಕ್ಕನ್ನ ಕಿತ್ತುಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಚ್ಚು ಅವಕಾಶ ಕೊಟ್ಟಿದ್ದರು. ಮಹಿಳಾ ಸಬಲೀಕರಣ ಹಕ್ಕು ತಂದಿದ್ದರು. ಇವರ ವಿಬ ಜಿ ರಾಮ್‌ ಜಿ ಕಾಯ್ದೆ ಜನರ ವಿರುದ್ಧವಾಗಿದೆ. ಶ್ರೀರಾಮನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಮಹಿಳೆಯರಿಗೆ, ಗ್ರಾಮೀಣ ಜನರಿಗೆ ಅನ್ಯಾಯವಾಗುತ್ತಿದೆ. ನೂತನ ಕಾಯ್ದೆ ಬಡವರ ವಿರುದ್ಧವಾಗಿದೆ. ನಿಮ್ಮ ಕಾಯ್ದೆಯನ್ನ ಮೊದಲು ವಾಪಸ್ ಪಡೆಯಬೇಕು. ಎಲ್ಲಿದೆ ಇವರ ವಿಕಸಿತ ಭಾರತ, ಕೇಂದ್ರದ ಆಡಳಿತ 40 ವರ್ಷ ಹಿಂದಕ್ಕೆ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಪ್ರಧಾನಿ ಮೋದಿ ರಾಜೀನಾಮೆಗೆ ಶಾಸಕ ಕೋನರೆಡ್ಡಿ ಆಗ್ರಹ
    4 Feb 2026 12:45 PM IST

    ಪ್ರಧಾನಿ ಮೋದಿ ರಾಜೀನಾಮೆಗೆ ಶಾಸಕ ಕೋನರೆಡ್ಡಿ ಆಗ್ರಹ

    ವಿಧಾನಸಭೆಯ ಕಲಾಪದಲ್ಲಿ ಬಿಜೆಪಿ ಪ್ರತಿಭಟನೆ ನಡುವೆ ಮನರೇಗಾ ಚರ್ಚೆಗೆ ಸಭಾಪತಿ ಯು.ಟಿ. ಖಾದರ್‌ ಚರ್ಚೆಗೆ ಅವಕಾಶ ನೀಡಿದರು. ಈ ವೇಳೆ ಶಾಸಕ ಕೋನರೆಡ್ಡಿ ಮಾತನಾಡಿ, ಮನರೇಗಾ ಯೋಜನೆ ಕುರಿತು ಚರ್ಚೆ ಬಿಜೆಪಿಗೆ ಬೇಕಿಲ್ಲ, ನಾವು ಕೇಂದ್ರದ ವಿರುದ್ಧ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿದ್ದರು. ಪಂಚಾಯತ್ ರಾಜ್ ಯೋಜನೆ ಅದ್ಬುತವಾಗಿತ್ತು. ಮನರೇಗಾ ಚರ್ಚೆ ಆದ್ರೆ ಕೇಂದ್ರಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ.

    ವಿಷಾಂತರ ಮಾಡಲು ಅಬಕಾರಿ ಇಲಾಖೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಇಲ್ಲಿ ನೃತ್ಯ ಮಾಡಲ ಬಂದಿಲ್ಲ. ಮ‌ನರೇಗಾ ಬಗ್ಗೆ ಚರ್ಚೆಗೆ ಬಂದಿರುವುದು. ಕಾಯ್ದೆಯನ್ನು ರದ್ದು ಪಡಿಸಿದ್ದಕ್ಕಾಗಿ ಮೊದಲು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡಬೇಕು. ಗ್ರಾಮ ಸ್ವರಾಜ್ ಕಾಯ್ದೆ ಜಾರಿಗೆ ಬರಬೇಕು. ಬಿಜೆಪಿಯವರ ನೃತ್ಯವನ್ನು ಎಲ್ಲರೂ‌ ನೋಡುತ್ತಿದ್ದಾರೆ. ಮನರೇಗಾವನ್ನು ಮರಳಿ ಜಾರಿಗೆ ತರಬೇಕು ಎಂದು ಕೇಂದ್ರದ ವಿರುದ್ಧ ಶಾಸಕ ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

  • ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ರಾಜೀನಾಮೆಗೆ ಆಗ್ರಹ
    4 Feb 2026 12:27 PM IST

    ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ರಾಜೀನಾಮೆಗೆ ಆಗ್ರಹ

    ಬುಧುವಾರ(ಫೆ.4) ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಸದನದ ಬಾವಿಗಿಳಿದು ʼಅಬಕಾರಿ ಇಲಾಖೆ ಲೂಟಿ ರಾಹುಲ್‌ ಗಾಂಧಿಗೆ ಕೋಟಿ ಕೋಟಿ ಎಂದು ಘೋಷಣೆ ಕೂಗುತ್ತಾ, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

  • 4 Feb 2026 7:24 AM IST

    ಭಾರತ-ಅಮೆರಿಕ ಸಂಬಂಧಕ್ಕೆ ಹೊಸ ವೇಗ: ಜೈಶಂಕರ್ ಮತ್ತು ಮಾರ್ಕೊ ರೂಬಿಯೋ ಮಹತ್ವದ ಮಾತುಕತೆ

    ವಾಷಿಂಗ್ಟನ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದವನ್ನು ಸ್ವಾಗತಿಸಿದರು. ಈ ವೇಳೆ ರಕ್ಷಣೆ, ಇಂಧನ, ಪರಮಾಣು ಶಕ್ತಿ ಮತ್ತು ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿದ ಉಭಯ ನಾಯಕರು, ನಿರ್ಣಾಯಕ ಖನಿಜಗಳ ಪರಿಶೋಧನೆ ಮತ್ತು ಗಣಿಗಾರಿಕೆಯಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಅಧಿಕೃತಗೊಳಿಸುವ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

    ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಉಭಯ ದೇಶಗಳ ಪ್ರಜಾಪ್ರಭುತ್ವಗಳು ಜೊತೆಯಾಗಿ ಕೆಲಸ ಮಾಡುವುದರ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದ್ದಲ್ಲದೆ, ಕ್ವಾಡ್ ಒಕ್ಕೂಟದ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದ ಶಾಂತಿ ಮತ್ತು ಸಮೃದ್ಧಿಗಾಗಿ ಪರಸ್ಪರ ಬದ್ಧತೆಯನ್ನು ವ್ಯಕ್ತಪಡಿಸಿದರು.

Read More
Next Story