
Today's news LIVE Feb 11:"ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ": ರಾಹುಲ್ ಕಿಡಿ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಬುಧವಾರ ಫೆಬ್ರುವರಿ 11, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 11 Feb 2026 3:34 PM IST
"ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ": ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ (ಫೆಬ್ರವರಿ 11) ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನೇರ ಮತ್ತು ತೀವ್ರ ವಾಗ್ದಾಳಿ ನಡೆಸಿದರು. ಈ ಒಪ್ಪಂದವು ಏಕಪಕ್ಷೀಯವಾಗಿದ್ದು, ದೇಶದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ ಎಂದು ಅವರು ಕಿಡಿಕಾರಿದರು.
- 11 Feb 2026 1:47 PM IST
"ಯುದ್ಧದ ಯುಗ ಮುಗಿದಿಲ್ಲ, ಶುರುವಾಗಿದೆ!" - ಪ್ರಧಾನಿ ಮೋದಿಗೆ ರಾಹುಲ್ ಟಾಂಗ್
ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ರಾಹುಲ್ ಗಾಂಧಿ, ಭಾರತದ ದತ್ತಾಂಶ (Data) ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತು ಕೇಂದ್ರ ಸರ್ಕಾರಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. 21ನೇ ಶತಮಾನದ ಜಾಗತಿಕ ಸ್ಪರ್ಧೆಯಲ್ಲಿ ಭಾರತದ 140 ಕೋಟಿ ಜನರ ಡೇಟಾ ಅತ್ಯಂತ ಅಮೂಲ್ಯ ಆಸ್ತಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವಿನ ಜಾಗತಿಕ ಪೈಪೋಟಿಯಲ್ಲಿ 'ಡೇಟಾ' ಅತ್ಯಂತ ಶಕ್ತಿಶಾಲಿ ಆಯುಧ. ಅಮೆರಿಕ ತನ್ನ ಡಾಲರ್ ಶಕ್ತಿಯನ್ನು ಉಳಿಸಿಕೊಳ್ಳಲು ಮತ್ತು ಸೂಪರ್ ಪವರ್ ಆಗಿ ಮುಂದುವರಿಯಲು ಭಾರತದ ಡೇಟಾ ಪೂಲ್ ಅಗತ್ಯವಿದೆ. ಏಕೆಂದರೆ ಚೀನಾ ಈಗಾಗಲೇ ತನ್ನ 140 ಕೋಟಿ ಜನರ ಡೇಟಾ ಹೊಂದಿದೆ. ಭಾರತ ಮಾತುಕತೆಗೆ ಕುಳಿತಾಗ ಈ ಡೇಟಾದ ಮೌಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆಯ (AI) ಇಂಧನವೇ ಡೇಟಾ. ನಿಮ್ಮ ಬಳಿ AI ತಂತ್ರಜ್ಞಾನವಿದ್ದು ಡೇಟಾ ಇಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ. AI ತಂತ್ರಜ್ಞಾನವು ಭವಿಷ್ಯದಲ್ಲಿ ಅನೇಕ ಗಂಭೀರ ಪರಿಣಾಮಗಳನ್ನು ಬೀರಲಿದ್ದು, ಸರ್ಕಾರ ಈ ಬಗ್ಗೆ ಜಾಗೃತವಾಗಬೇಕು ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿ ಅವರು 'ಇದು ಯುದ್ಧದ ಯುಗವಲ್ಲ' ಎಂದು ಈ ಹಿಂದೆ ಹೇಳಿದ್ದರು. ಆದರೆ ರಾಹುಲ್ ಗಾಂಧಿ ಇದನ್ನು ತಳ್ಳಿಹಾಕಿದ್ದು, "ನಾವು ಈಗ ಯುದ್ಧದ ಯುಗಕ್ಕೆ ಪ್ರವೇಶಿಸುತ್ತಿದ್ದೇವೆ. ಉಕ್ರೇನ್, ಗಾಜಾ ಮತ್ತು ಇರಾನ್‌ನಲ್ಲಿ ಯುದ್ಧದ ಭೀತಿ ಎದುರಾಗಿದೆ. ಇಂಧನ ಮತ್ತು ಹಣಕಾಸು ವ್ಯವಸ್ಥೆಗಳನ್ನು ಅಸ್ತ್ರಗಳನ್ನಾಗಿ ಬಳಸಲಾಗುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.
- 11 Feb 2026 1:43 PM IST
ಮುಂಬೈನ ನೂತನ ಮೇಯರ್ ಆಗಿ ಬಿಜೆಪಿ ರಿತು ತಾವ್ಡೆ ಆಯ್ಕೆ
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ (BMC) ಅಂತಿಮವಾಗಿ ಹೊಸ ಸಾರಥಿಗಳ ಆಯ್ಕೆಯಾಗಿದೆ. ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಕಾರ್ಪೊರೇಟರ್ ರಿತು ತಾವ್ಡೆ ಅವರು ಮುಂಬೈನ 78ನೇ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ ಮತ್ತು ಪದಗ್ರಹಣ
ವಾರ್ಡ್ ಸಂಖ್ಯೆ 132ರ ಕಾರ್ಪೊರೇಟರ್ ಆಗಿರುವ ರಿತು ತಾವ್ಡೆ ಹಾಗೂ ವಾರ್ಡ್ ಸಂಖ್ಯೆ 5ರ ಶಿವಸೇನೆಯ ಕಾರ್ಪೊರೇಟರ್ ಸಂಜಯ್ ಘಾಡಿ (ಡೆಪ್ಯುಟಿ ಮೇಯರ್) ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಎಂಸಿ ಪ್ರಧಾನ ಕಚೇರಿಯಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಉಪಸ್ಥಿತರಿದ್ದು, ನೂತನ ಮೇಯರ್ ಮತ್ತು ಡೆಪ್ಯುಟಿ ಮೇಯರ್‌ಗೆ ಅಭಿನಂದನೆ ಸಲ್ಲಿಸಿದರು.
- 11 Feb 2026 9:40 AM IST
ಅದಾನಿ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿ ನಾಯರ್‌ಗೆ ಒಂದು ವರ್ಷ ಜೈಲು ಶಿಕ್ಷೆ
ಅದಾನಿ ಸಮೂಹಕ್ಕೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಪತ್ರಕರ್ತ ರವಿ ನಾಯರ್ ಅವರನ್ನು ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಮಾನ್ಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ನ್ಯಾಯಾಲಯವು ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.
ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ರವಿ ನಾಯರ್ ಅವರು ಸರಣಿ ಟ್ವೀಟ್‌ಗಳ ಮೂಲಕ ಕಂಪನಿಯ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ಹರಡಿದ್ದಾರೆ. ಈ ಮೂಲಕ ಅದಾನಿ ಸಮೂಹದ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಕಂಪನಿಯು ಆರೋಪಿಸಿತ್ತು.
- 11 Feb 2026 8:25 AM IST
ಕೆನಡಾದ ಶಾಲೆಯಲ್ಲಿ ಗುಂಡಿನ ದಾಳಿ: 10 ಮಂದಿ ಸಾವು, 25 ಜನರಿಗೆ ಗಾಯ
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ 'ಟಂಬ್ಲರ್ ರಿಡ್ಜ್ ಸೆಕೆಂಡರಿ ಸ್ಕೂಲ್'ನಲ್ಲಿ ಮಂಗಳವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿದಂತೆ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಮತ್ತು 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಂಗಳವಾರ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಗುಂಡಿನ ಚಕಮಕಿ ಆರಂಭವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಟಂಬ್ಲರ್ ರಿಡ್ಜ್ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಈ ಘಟನೆಯನ್ನು ಪೊಲೀಸರು ಆರಂಭದಲ್ಲಿ 'ಸಕ್ರಿಯ ಶೂಟರ್ ಘಟನೆ' ಎಂದು ವರ್ಗೀಕರಿಸಿದ್ದರು.

