
Today's news Feb 19: AI ನಿಂದ ಹೊಸ ಉದ್ಯೋಗಗಳ ಸೃಷ್ಟಿ: ಸುಂದರ್ ಪಿಚೈ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಗುರುವಾರ ಫೆಬ್ರುವರಿ 19, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 19 Feb 2026 2:43 PM IST
AI ನಿಂದ ಹೊಸ ಉದ್ಯೋಗಗಳ ಸೃಷ್ಟಿ: ಭಾರತದ ಡಿಜಿಟಲ್ ಭವಿಷ್ಯದ ಬಗ್ಗೆ ಸುಂದರ್ ಪಿಚೈ ಭರವಸೆಯ ಮಾತು
ನವದೆಹಲಿಯಲ್ಲಿ ನಡೆದ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ'ಯಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಭಾರತದ ಬದಲಾವಣೆಯ ವೇಗವನ್ನು ಕಂಡು ಬೆರಗಾಗಿದ್ದೇನೆ ಎಂದು ಹೇಳುತ್ತಾ, ವಿಶಾಖಪಟ್ಟಣಂನಲ್ಲಿ ಗೂಗಲ್ ತನ್ನ 15 ಬಿಲಿಯನ್ ಡಾಲರ್ ಹೂಡಿಕೆಯ ಭಾಗವಾಗಿ ಬೃಹತ್ 'ಫುಲ್-ಸ್ಟ್ಯಾಕ್ AI ಹಬ್' ಸ್ಥಾಪಿಸುವುದಾಗಿ ಘೋಷಿಸಿದರು. ತಮ್ಮ ಕಾಲೇಜು ದಿನಗಳ ರೈಲು ಪ್ರಯಾಣವನ್ನು ಸ್ಮರಿಸಿದ ಅವರು, ಅಂದಿನ ಸಣ್ಣ ನಗರ ವಿಶಾಖಪಟ್ಟಣಂ ಇಂದು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ಬೆಳೆಯುತ್ತಿರುವುದನ್ನು ಶ್ಲಾಘಿಸಿದರು.
ಭಾರತ ಮತ್ತು ಅಮೆರಿಕ ನಡುವೆ ಹೊಸ 'ಸಬ್‌ಸೀ ಫೈಬರ್ ಆಪ್ಟಿಕ್ ಕೇಬಲ್' ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದ ಅವರು, AI ತಂತ್ರಜ್ಞಾನವು ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದರು. ಭಾರತದ ರಸ್ತೆಗಳಲ್ಲಿ ಸ್ವಯಂಚಾಲಿತ ಕಾರುಗಳ ಸಂಚಾರದ ಬಗ್ಗೆ ತಮ್ಮ ತಂದೆ ಮಾಡಿದ್ದ ಹಾಸ್ಯವನ್ನು ನೆನಪಿಸಿಕೊಂಡ ಪಿಚೈ, AI ಉದ್ಯೋಗಗಳನ್ನು ಕಸಿಯುವ ಬದಲು ಹೊಸ ವೃತ್ತಿಜೀವನಗಳನ್ನು ಸೃಷ್ಟಿಸುತ್ತದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಪ್ರಗತಿಗೆ ದೊಡ್ಡ ವೇಗ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
- 19 Feb 2026 11:56 AM IST
AI ದಾರಿದೀಪವಾಗಲಿ, ವಿನಾಶಕಾರಿ ಶಕ್ತಿಯಾಗಬಾರದು: ಪ್ರಧಾನಿ ಮೋದಿ ಕರೆ
ಪ್ರಧಾನಿ ಮೋದಿಯವರು AI ತಂತ್ರಜ್ಞಾನವನ್ನು ಕೇವಲ ಒಂದು ಯಾಂತ್ರಿಕ ಪ್ರಗತಿಯಾಗಿ ನೋಡದೆ, ಅದನ್ನು ಮಾನವಕುಲದ ಹಿತಕ್ಕಾಗಿ ಬಳಸಬೇಕಾದ ಶಕ್ತಿಯಾಗಿ ಪ್ರತಿಪಾದಿಸಿದರು. ಈ ಶೃಂಗಸಭೆಯ ಧ್ಯೇಯವಾಕ್ಯವಾದ "ಸರ್ವಜನ ಹಿತಾಯ, ಸರ್ವಜನ ಸುಖಾಯ" (ಎಲ್ಲರ ಕಲ್ಯಾಣ ಮತ್ತು ಎಲ್ಲರ ಸಂತೋಷ) ಎಂಬುದೇ ಭಾರತದ ಮಾನದಂಡ ಎಂದರು. "AI ತಂತ್ರಜ್ಞಾನವು ದಿಕ್ಕು ತಪ್ಪಿದರೆ ವಿನಾಶಕಾರಿಯಾಗಬಲ್ಲದು, ಆದರೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಅದು ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಆದ್ದರಿಂದ ನಾವು ಯಂತ್ರಕೇಂದ್ರಿತ AI ಬದಲಿಗೆ ಮಾನವಕೇಂದ್ರಿತ ಮತ್ತು ಸ್ಪಂದನಾಶೀಲ ವ್ಯವಸ್ಥೆಯನ್ನು ರೂಪಿಸಬೇಕು" ಎಂದು ಅವರು ಒತ್ತಿ ಹೇಳಿದರು.
ಪರಮಾಣು ಶಕ್ತಿಯ ಉದಾಹರಣೆ ನೀಡಿದ ಅವರು, ಅದರ ವಿನಾಶ ಮತ್ತು ರಚನಾತ್ಮಕ ಕೊಡುಗೆಗಳಂತೆ AI ಕೂಡ ಇಂದಿನ ನಿರ್ಧಾರಗಳ ಮೇಲೆ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು. AI ಕ್ಷೇತ್ರದಲ್ಲಿ ಮನುಷ್ಯ ಕೇವಲ 'ಡೇಟಾ ಪಾಯಿಂಟ್' ಆಗಿ ಉಳಿಯಬಾರದು; ಇದಕ್ಕಾಗಿ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ ಅಗತ್ಯ ಮತ್ತು ಕಮಾಂಡ್ ನಮ್ಮ ಕೈಯಲ್ಲೇ ಇರಬೇಕು. ಇದನ್ನು GPS ಗೆ ಹೋಲಿಸಿದ ಅವರು, "GPS ನಮಗೆ ಹಾದಿ ತೋರಿಸಬಹುದು, ಆದರೆ ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬ ಅಂತಿಮ ತೀರ್ಮಾನ ನಮ್ಮದೇ ಆಗಿರಬೇಕು" ಎಂದು ಮಾರ್ಮಿಕವಾಗಿ ಹೇಳಿದರು. ಮಕ್ಕಳು ಮತ್ತು ಕುಟುಂಬದ ಸುರಕ್ಷತೆಗೆ AI ಪೂರಕವಾಗಿರಬೇಕು ಎಂದು ಎಚ್ಚರಿಸಿದ ಪ್ರಧಾನಿ, ಭಾರತದ ಯುವಶಕ್ತಿಯ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತಾ, "ಭಾರತದಲ್ಲಿ ವಿನ್ಯಾಸಗೊಳಿಸಿ, ಜಗತ್ತಿಗೆ ತಲುಪಿಸಿ" ಎಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು.
- 19 Feb 2026 11:52 AM IST
ಭಾರತ ಸಾಧಿಸಿದ್ದನ್ನು ಜಗತ್ತಿನ ಬೇರೆ ಯಾವ ದೇಶವೂ ಮಾಡಿಲ್ಲ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ನವದೆಹಲಿಯಲ್ಲಿ ನಡೆಯುತ್ತಿರುವ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು "ನಮಸ್ತೆ" ಎಂದು ಭಾಷಣ ಆರಂಭಿಸಿ ಭಾರತದ ಡಿಜಿಟಲ್ ಕ್ರಾಂತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಹತ್ತು ವರ್ಷಗಳ ಹಿಂದೆ ಮುಂಬೈನ ಬೀದಿ ಬದಿ ವ್ಯಾಪಾರಿಗೆ ಬ್ಯಾಂಕ್ ಖಾತೆ ತೆರೆಯಲು ವಿಳಾಸ ಅಥವಾ ದಾಖಲೆಗಳಿಲ್ಲದ ಪರಿಸ್ಥಿತಿ ಇತ್ತು, ಆದರೆ ಇಂದು ಅದೇ ವ್ಯಾಪಾರಿ ತನ್ನ ಮೊಬೈಲ್ ಮೂಲಕ ಡಿಜಿಟಲ್ ಪಾವತಿ ಸ್ವೀಕರಿಸುತ್ತಿದ್ದಾನೆ ಎಂದು ಉದಾಹರಿಸಿದ ಅವರು, 1.4 ಬಿಲಿಯನ್ ಜನರಿಗೆ ಡಿಜಿಟಲ್ ಗುರುತು, ತಿಂಗಳಿಗೆ 20 ಬಿಲಿಯನ್ ವಹಿವಾಟು ನಡೆಸುವ ಪಾವತಿ ವ್ಯವಸ್ಥೆ (UPI) ಮತ್ತು 500 ಮಿಲಿಯನ್ ಡಿಜಿಟಲ್ ಆರೋಗ್ಯ ಐಡಿಗಳನ್ನು ಸೃಷ್ಟಿಸುವ ಮೂಲಕ ಭಾರತವು ಜಗತ್ತಿನ ಬೇರೆ ಯಾವುದೇ ದೇಶ ಮಾಡದ ಸಾಧನೆ ಮಾಡಿದೆ ಎಂದು ಬಣ್ಣಿಸಿದರು.
ಇದನ್ನು 'ಇಂಡಿಯಾ ಸ್ಟಾಕ್' (India Stack) ಎಂದು ಕರೆಯಲಾಗುತ್ತಿದ್ದು, ಇದು ಮುಕ್ತ ಮತ್ತು ಸಾರ್ವಭೌಮ ವ್ಯವಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮ್ಯಾಕ್ರನ್, ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯ ಆಶಯದಂತೆ ಕೃತಕ ಬುದ್ಧಿಮತ್ತೆಯು (AI) ಆರೋಗ್ಯ, ಇಂಧನ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮಾನವಕುಲದ ಹಿತಕ್ಕಾಗಿ ದೊಡ್ಡ ಬದಲಾವಣೆ ತರಲಿದೆ ಹಾಗೂ ಭಾರತ-ಫ್ರಾನ್ಸ್ ಈ ತಾಂತ್ರಿಕ ಕ್ರಾಂತಿಯಲ್ಲಿ ಒಟ್ಟಾಗಿ ನಂಬಿಕೆ ಇಟ್ಟಿವೆ ಎಂದು ತಿಳಿಸಿದರು.
- 19 Feb 2026 10:08 AM IST
ಒಂದೇ ವೇದಿಕೆಯಲ್ಲಿ ಮೋದಿ, ಮ್ಯಾಕ್ರನ್, ಸುಂದರ್ ಪಿಚೈ ಮತ್ತು ಸ್ಯಾಮ್ ಆಲ್ಟ್‌ಮನ್!
ದೆಹಲಿಯ ಭಾರತ್ ಮಂಟಪದಲ್ಲಿ ಗುರುವಾರ ನಡೆದ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026' ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಜೂಮ್, ಗೂಗಲ್‌ನ ಸುಂದರ್ ಪಿಚೈ ಮತ್ತು ಓಪನ್ ಎಐನ ಸ್ಯಾಮ್ ಆಲ್ಟ್‌ಮನ್ ಅಂತಹ ಜಾಗತಿಕ ತಂತ್ರಜ್ಞಾನ ದಿಗ್ಗಜರು ಭಾಗವಹಿಸಿದ್ದರು.
ಕಳೆದ ಸೋಮವಾರ ಆರಂಭವಾದ ಈ ಆರು ದಿನಗಳ ಶೃಂಗಸಭೆಯು "ಸರ್ವಜನ ಹಿತಾಯ, ಸರ್ವಜನ ಸುಖಾಯ" (ಸರ್ವರ ಹಿತ ಮತ್ತು ಸರ್ವರ ಸುಖ) ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದ್ದು, ಇದು 2023ರಲ್ಲಿ ಯುಕೆ, 2024ರಲ್ಲಿ ದಕ್ಷಿಣ ಕೊರಿಯಾ ಮತ್ತು 2025ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಸರಣಿ ಸಭೆಗಳ ನಂತರದ ನಾಲ್ಕನೇ ಅಂತರಾಷ್ಟ್ರೀಯ ಆವೃತ್ತಿಯಾಗಿದೆ. ಸುಮಾರು 20ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು 100ಕ್ಕೂ ಹೆಚ್ಚು ಸಿಇಒಗಳು ಸೇರಿದಂತೆ 500ಕ್ಕೂ ಹೆಚ್ಚು ಜಾಗತಿಕ ಎಐ (AI) ನಾಯಕರನ್ನು ಒಟ್ಟುಗೂಡಿಸಿರುವ ಈ ಶೃಂಗಸಭೆಯು ಇದುವರೆಗಿನ ಅತಿ ದೊಡ್ಡ ಎಐ ಸಮಾವೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- 19 Feb 2026 8:48 AM IST
ಫೆಬ್ರವರಿ 26ಕ್ಕೆ ಎನ್‌ಸಿಪಿ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಫೆಬ್ರವರಿ 26 ರಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಬುಧವಾರ ತಿಳಿಸಿದ್ದಾರೆ.
ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ಬಳಿ ನಡೆದ ಲಿಯರ್‌ಜೆಟ್ 45 ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ಸುನೇತ್ರಾ ಅವರ ಪತಿ ಮತ್ತು ಅಂದಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದರು. ಅಜಿತ್ ಪವಾರ್ ಅವರ ನಿಧನದ ನಂತರ ಪಕ್ಷದಲ್ಲಿ ಉಂಟಾಗಿರುವ ನಾಯಕತ್ವದ ಶೂನ್ಯತೆಯನ್ನು ತುಂಬಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಫುಲ್ ಪಟೇಲ್, "ಅಜಿತ್‌ದಾದಾ ಅವರ ಅಗಲಿಕೆಯ ನಂತರ ನಮ್ಮ ಪಕ್ಷದಲ್ಲಿ ಉಂಟಾಗಿರುವ ನಾಯಕತ್ವದ ಕೊರತೆಯನ್ನು ನೀಗಿಸುವ ಪ್ರಕ್ರಿಯೆಯಲ್ಲಿದ್ದೇವೆ. ನಾವು ಸ್ವತಂತ್ರ ಪಕ್ಷವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಫೆಬ್ರವರಿ 26 ರಂದು ಸುನೇತ್ರಾ ಪವಾರ್ ಅವರು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ," ಎಂದು ಹೇಳಿದರು.
ಇದೇ ವೇಳೆ ಎನ್‌ಸಿಪಿಯ ಎರಡು ಬಣಗಳ ವಿಲೀನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಟೇಲ್, ಈ ವಿಷಯದ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಸ್ಪಷ್ಟಪಡಿಸಿದರು.
- 19 Feb 2026 7:33 AM IST
ಸಲೀಂ ಖಾನ್ ಆರೋಗ್ಯದ ಕುರಿತು ಲೀಲಾವತಿ ಆಸ್ಪತ್ರೆ ವೈದ್ಯರ ಸ್ಪಷ್ಟನೆ
ಖ್ಯಾತ ಚಿತ್ರಕಥೆಗಾರ ಮತ್ತು ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಫೆಬ್ರವರಿ 17 ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಜಲೀಲ್ ಪಾರ್ಕರ್ ಅವರು, 90 ವರ್ಷದ ಹಿರಿಯ ಬರಹಗಾರ ಸದ್ಯ ಸ್ಥಿರವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅವರಿಗೆ ಅಲ್ಪ ಪ್ರಮಾಣದ ಮೆದುಳಿನ ರಕ್ತಸ್ರಾವ ಕಂಡುಬಂದಿದ್ದರಿಂದ, ಹೆಚ್ಚಿನ ತಪಾಸಣೆಗಳಾದ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ನಡೆಸುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಲಾಗಿಲ್ಲ, ಬದಲಾಗಿ ಡಿಎಸ್‌ಎ ಎಂಬ ವೈದ್ಯಕೀಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ವಯೋಸಹಜ ಕಾರಣಗಳಿಂದ ಚೇತರಿಕೆಗೆ ಸ್ವಲ್ಪ ಸಮಯ ಬೇಕಾಗಬಹುದಾದರೂ, ಗುರುವಾರದ ವೇಳೆಗೆ ಅವರನ್ನು ವೆಂಟಿಲೇಟರ್‌ನಿಂದ ಹೊರತರುವ ಸಾಧ್ಯತೆಯಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಸದ್ಯ ಸಲ್ಮಾನ್ ಖಾನ್ ಸೇರಿದಂತೆ ಇಡೀ ಕುಟುಂಬ ಆಸ್ಪತ್ರೆಯಲ್ಲೇ ಇದ್ದು ಅವರ ಆರೈಕೆ ಮಾಡುತ್ತಿದೆ.
- 19 Feb 2026 7:30 AM IST
ನಕಲಿ ರೋಬೋಟ್ ವಿವಾದ: ಕೇಂದ್ರ ಸರ್ಕಾರದಿಂದ ಎಚ್ಚರಿಕೆ
ದೆಹಲಿಯಲ್ಲಿ ನಡೆದ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿತ್ 2026'ರಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾದ 'Unitree' ಕಂಪನಿಯ ರೋಬೋಟ್ ಅನ್ನು ತನ್ನದೇ 'ಸ್ವದೇಶಿ ಸಂಶೋಧನೆ' ಎಂದು ಪ್ರದರ್ಶಿಸಿದ ಘಟನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಇಂತಹ ತಪ್ಪು ಮಾಹಿತಿ ನೀಡುವುದನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಕೇವಲ ನೈಜ ಸಂಶೋಧನೆಗಳಿಗೆ ಮಾತ್ರ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದೆ.
ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ಈ ರೋಬೋಟ್ ಅನ್ನು ಸಂಸ್ಥೆಯ "ಸೆಂಟರ್ ಆಫ್ ಎಕ್ಸಲೆನ್ಸ್" ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದ್ದರು, ಆದರೆ ಇದು ಚೀನಾ ಮೂಲದ ಉತ್ಪನ್ನ ಎಂಬುದು ಬಯಲಾದ ನಂತರ ಅವರು "ಸಂವಹನದ ಕೊರತೆಯಿಂದ ಈ ತಪ್ಪು ಸಂಭವಿಸಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, 'ಮೇಕ್ ಇನ್ ಇಂಡಿಯಾ' ಹೆಸರಿನಲ್ಲಿ ನಡೆದ ಈ ವಂಚನೆಯು ಶಿಕ್ಷಣ ಸಂಸ್ಥೆಯ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

