Todays Live News Mar 25:ಇರಾನ್‌ಗೆ ಅಮೆರಿಕದಿಂದ 15 ಅಂಶಗಳ ಕದನ ವಿರಾಮ ಪ್ರಸ್ತಾವನೆ
x

Today's Live News Mar 25:ಇರಾನ್‌ಗೆ ಅಮೆರಿಕದಿಂದ 15 ಅಂಶಗಳ ಕದನ ವಿರಾಮ ಪ್ರಸ್ತಾವನೆ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಬುಧವಾರ ಮಾರ್ಚ್ 25, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • ಸದನದಲ್ಲಿ ಸಿಎಂ ಪಟ್ಟದ ಸಂಚಲನ, ಡಿಕೆಶಿ ಹೆಸರೇಳದ ಸಿದ್ದರಾಮಯ್ಯ
    25 March 2026 5:25 PM IST

    ಸದನದಲ್ಲಿ ಸಿಎಂ ಪಟ್ಟದ ಸಂಚಲನ, ಡಿಕೆಶಿ ಹೆಸರೇಳದ ಸಿದ್ದರಾಮಯ್ಯ

    ವಿಧಾನಸಭೆಯಲ್ಲಿ ಬುಧವಾರ ನಡೆದ ಬಜೆಟ್ ಚರ್ಚೆಯ ನಡುವೆಯೇ 'ಮುಂದಿನ ಮುಖ್ಯಮಂತ್ರಿ' ಯಾರಾಗಬಹುದು ಎಂಬ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಸ್ವಾರಸ್ಯಕರ ಮತ್ತು ಹಾಸ್ಯಭರಿತ ಚರ್ಚೆ ನಡೆಯಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರ ಕಾಲೆಳೆದ ಸಿಎಂ ಸಿದ್ದರಾಮಯ್ಯ, ಕೊನೆಗೂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸದೆ ಜಾಣತನ ಮೆರೆದರು.

    ಚರ್ಚೆಯ ಆರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಫೋಟೋ ಶೂಟ್ ಬಗ್ಗೆ ಆರ್. ಅಶೋಕ್ ವ್ಯಂಗ್ಯವಾಡಿದರು. "ಸ್ಪೀಕರ್ ಅವರು ಹೊಸ ಬಾಗಿಲು, ಕಿಟಕಿ ಮಾಡಿಸಿ ಫೋಟೋ ಶೂಟ್ ಮಾಡಿಸುತ್ತಿದ್ದಾರೆ, ಅವರಿಗೂ ಏನೋ ಡೌಟ್ ಶುರುವಾದಂತಿದೆ" ಎಂದರು. ಇದಕ್ಕೆ ಉತ್ತರಿಸಿದ ಸಿಎಂ, "ಅವರು 2028 ರಲ್ಲೂ ಗೆಲ್ಲುತ್ತಾರೆ, ಹೈಕಮಾಂಡ್ ತೀರ್ಮಾನಿಸುವವರೆಗೂ ಸ್ಪೀಕರ್ ಆಗಿ ಇರುತ್ತಾರೆ" ಎಂದರು.

    ಅಶೋಕ್, ಬೆಲ್ಲದ್ ಸಿಎಂ ಆದ್ರೆ ನನಗೆ ಖುಷಿ

    ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿಎಂ ಆಗಬೇಕು ಎಂಬ ಕನಸು ನಿನಗೂ ಇಲ್ಲವೇ, ನೀನು ಸಿಎಂ ಆದರೂ ನಾನು ಸಂತೋಷಪಡುತ್ತೇನೆ. ಅರವಿಂದ ಬೆಲ್ಲದ್ ಸಿಎಂ ಆದರೂ ನನಗೆ ಖುಷಿಯೇ. ಇನ್ನು ವಿಜಯೇಂದ್ರ ಅಲ್ಲಿ ಕಾಯುತ್ತಾ ಕೂತಿದ್ದಾರೆ, ಅವರು ಯಾರಿಗೂ ಬಿಡುವುದಿಲ್ಲ ಅನಿಸುತ್ತದೆ ಎಂದು ಛೇಡಿಸಿದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.

     ಡಿಕೆಶಿ ಹೆಸರೇಳಲು ಪಟ್ಟು

    ಸಿಎಂ ಮಾತುಗಳ ನಡುವೆ ಎದ್ದು ನಿಂತ ಬಿಜೆಪಿ ಶಾಸಕ ಸುನೀಲ್ ಕುಮಾರ್, "ನೀವು ಅಶೋಕ್, ಬೆಲ್ಲದ್ ಸಿಎಂ ಆದ್ರೆ ಖುಷಿ ಪಡ್ತೀನಿ ಅಂತೀರಿ. ಆದರೆ ನಿಮ್ಮ ಪಕ್ಕದಲ್ಲೇ ಇರುವ ಡಿ.ಕೆ. ಶಿವಕುಮಾರ್ ಅವರು ಸಿಎಂ ಆದರೂ ಖುಷಿ ಪಡ್ತೀನಿ ಎಂದು ಒಂದು ಸಲ ಹೇಳಿ ಬಿಡಿ" ಎಂದು ಸವಾಲು ಹಾಕಿದರು.

    "ನಮ್ಮಲ್ಲಿ 224 ಶಾಸಕರಿಗೂ ಯೋಗ್ಯತೆ ಇದೆ. ಎಂ.ಬಿ. ಪಾಟೀಲ್, ಮುನಿಯಪ್ಪ, ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ಯಾರೇ ಆದರೂ ನನಗೆ ಖುಷಿಯೇ. ಹೈಕಮಾಂಡ್ ಎಲ್ಲಿಯವರೆಗೆ ತೀರ್ಮಾನಿಸುತ್ತದೋ ಅಲ್ಲಿಯವರೆಗೆ ನಾನೇ ಸಿಎಂ ಆಗಿರುತ್ತೇನೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

    ಹೈಕಮಾಂಡ್‌ ತೀರ್ಮಾನ ಅಂತಿಮ 

    ನೀವು ಈಗ ಯಾರ್ಯಾರ ಹೆಸರನ್ನು ಹೇಳಿದ್ದೀರೋ ಅವರೆಲ್ಲರ ಪರಿಸ್ಥಿತಿ 'ಗೋವಿಂದ' ಅಷ್ಟೇ! ನೀವು ಡಿಕೆಶಿ ಅವರಿಗೆ ಮತ್ತು ನಮಗೆ ಸರಿಯಾಗಿ ನೀರು ಕುಡಿಸುತ್ತಿದ್ದೀರಿ ಎಂದು ಆರ್‌.ಅಶೋಕ್‌ ಲೇವಡಿ ಮಾಡಿದರು.ಕೊನೆಯವರೆಗೂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಸಿದ್ದರಾಮಯ್ಯ ಅವರು ಚರ್ಚೆಯನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳುವ ಮೂಲಕ ಸದನದಲ್ಲಿ ಕುತೂಹಲ ಕಾಯ್ದುಕೊಂಡರು.

  • 25 March 2026 3:13 PM IST

    ಇರಾನ್‌ಗೆ ಅಮೆರಿಕದಿಂದ 15 ಅಂಶಗಳ ಕದನ ವಿರಾಮ ಪ್ರಸ್ತಾವನೆ

    ಬುಧವಾರ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಯುದ್ಧದಲ್ಲಿ ಕದನ ವಿರಾಮವನ್ನು ಘೋಷಿಸಲು ಅಮೆರಿಕವು ಇರಾನ್‌ಗೆ 15 ಅಂಶಗಳ ಪ್ರಸ್ತಾವನೆಯನ್ನು ರವಾನಿಸಿದೆ. ಈ ಪ್ರಸ್ತಾವನೆಯು ಪ್ರಮುಖವಾಗಿ ಇರಾನ್ ಮೇಲಿನ ನಿರ್ಬಂಧಗಳ ಸಡಿಲಿಕೆ, ನಾಗರಿಕ ಪರಮಾಣು ಸಹಕಾರ, ಇರಾನ್‌ನ ಪರಮಾಣು ಕಾರ್ಯಕ್ರಮದ ಹಿಂತೆಗೆತ, ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮೇಲ್ವಿಚಾರಣೆ, ಕ್ಷಿಪಣಿ ಮಿತಿಗಳು ಮತ್ತು ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರದ ಪ್ರವೇಶದಂತಹ ವಿಷಯಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಸೋಸಿಯೇಟೆಡ್ ಪ್ರೆಸ್ (AP) ಗೆ ಮಾಹಿತಿ ನೀಡಿದ ಅಧಿಕಾರಿಗಳು ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಕೋರಿದ್ದಾರೆ. ಆದರೆ, ಇರಾನ್ ಮಾತ್ರ ತಾನು ಅಮೆರಿಕದೊಂದಿಗೆ ಯಾವುದೇ ಮಾತುಕತೆಯಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದೆ ಮತ್ತು ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳನ್ನು ಇರಾನ್‌ನ ಸೇನಾ ವಕ್ತಾರರು ಲೇವಡಿ ಮಾಡಿದ್ದಾರೆ.

  • 25 March 2026 11:03 AM IST

    ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಹಕ್ಕಿ ಜ್ವರದ ಅಟ್ಟಹಾಸ: 4,400 ಕೋಳಿಗಳ ಸಾವು

    ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ (ಏವಿಯನ್ ಇನ್ಫ್ಲುಯೆಂಜಾ) ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ ಕನಿಷ್ಠ 4,400 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಫಾರಂನ ಸುತ್ತಮುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಿದ್ದಾರೆ.

    ಕೋಣಿ ಪ್ರದೇಶದಲ್ಲಿರುವ ಸರ್ಕಾರಿ ಕೋಳಿ ಫಾರಂನಲ್ಲಿ ಮಾರ್ಚ್ 19 ರಿಂದ 24 ರ ಅವಧಿಯಲ್ಲಿ ವೈರಾಣು ಸೋಂಕಿನಿಂದಾಗಿ ಸುಮಾರು 4,400 ಕೋಳಿಗಳು ಸಾವನ್ನಪ್ಪಿವೆ ಎಂದು ಪಶುವೈದ್ಯಕೀಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿ.ಎಸ್. ತನ್ವರ್ ಮಂಗಳವಾರ ತಿಳಿಸಿದ್ದಾರೆ. ಈ ಫಾರಂನಲ್ಲಿ ಒಟ್ಟು 5,037 ಕೋಳಿಗಳಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

    ಸತ್ತ ಹಕ್ಕಿಗಳ ಮಾದರಿಗಳನ್ನು ಸೋಮವಾರ ಭೋಪಾಲ್ ಮತ್ತು ಪುಣೆಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಸತ್ತ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದನ್ನು ಭೋಪಾಲ್ ಪ್ರಯೋಗಾಲಯವು ದೃಢಪಡಿಸಿದೆ ಎಂದು ತನ್ವರ್ ತಿಳಿಸಿದ್ದಾರೆ.

  • 25 March 2026 10:58 AM IST

    ಇಂಡಿಗೋ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ಅಲೋಕ್ ಸಿಂಗ್ ನೇಮಕ

    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮಾಜಿ ಮುಖ್ಯಸ್ಥರಾಗಿದ್ದ ಅಲೋಕ್ ಸಿಂಗ್ ಅವರನ್ನು ಇಂಡಿಗೋ ತನ್ನ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ನೇಮಕ ಮಾಡಿದೆ. ಇತ್ತೀಚೆಗಷ್ಟೇ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ.

    ಸಿಂಗ್ ಅವರು ಇಂಡಿಗೋದ ದೀರ್ಘಕಾಲೀನ ಕಾರ್ಯತಂತ್ರದ ಯೋಜನೆಗಳನ್ನು ರೂಪಿಸುವ ಮತ್ತು ಸಂಸ್ಥೆಯ ಬೆಳವಣಿಗೆಯನ್ನು ವೇಗಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು, ಈ ಹಿಂದೆ ಏರ್ ಇಂಡಿಯಾ ಮತ್ತು ಒಮಾನ್ ಏರ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ವಿಮಾನಯಾನ ಮಾರುಕಟ್ಟೆ ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ, ಇಂಡಿಗೋದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರ ಅನುಭವವನ್ನು ಸುಧಾರಿಸಲು ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

  • 25 March 2026 10:54 AM IST

    ಇರಾನ್ ಯುದ್ಧದ ಪರಿಣಾಮ: ಫಿಲಿಪ್ಪೈನ್ಸ್‌ನಲ್ಲಿ ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ ಘೋಷಣೆ

    ಇರಾನ್ ಯುದ್ಧ ಮತ್ತು ಪೂರೈಕೆಯ ಆತಂಕದ ಹಿನ್ನೆಲೆಯಲ್ಲಿ ಫಿಲಿಪ್ಪೈನ್ಸ್ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇಂಧನ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆರ್ಥಿಕತೆಯನ್ನು ರಕ್ಷಿಸಲು ಫಿಲಿಪ್ಪೈನ್ಸ್ ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

    ದೇಶದ ಇಂಧನ ಪೂರೈಕೆಯ ಲಭ್ಯತೆ ಮತ್ತು ಸ್ಥಿರತೆಗೆ ಎದುರಾಗಿರುವ ಸನ್ನಿಹಿತ ಅಪಾಯವನ್ನು ಉಲ್ಲೇಖಿಸಿ ಫಿಲಿಪ್ಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಹೆಚ್ಚುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಫಿಲಿಪ್ಪೈನ್ಸ್ ಪಾತ್ರವಾಗಿದೆ.

    ಈ ಯುದ್ಧವು ಪ್ರಮುಖ ಹಡಗು ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿದೆ, ಇದು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಆತಂಕವನ್ನು ಉಂಟುಮಾಡಿದೆ ಮತ್ತು ಪೂರೈಕೆಯಲ್ಲಿ ಕೊರತೆ ಹಾಗೂ ಬೆಲೆ ಏರಿಕೆಗೆ ಕಾರಣವಾಗಿದೆ. ಫಿಲಿಪ್ಪೈನ್ಸ್ ತನ್ನ ತೈಲದ ಶೇಕಡಾ 98 ರಷ್ಟು ಭಾಗವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ ಮತ್ತು ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗಿನಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಎರಡರಷ್ಟು ಹೆಚ್ಚಾಗಿದೆ.

  • 25 March 2026 7:18 AM IST

    ಹಿರಿಯ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಮಂಗಳವಾರ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ, ಅವರು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿದೆ. ಈ ಸಂದರ್ಭದಲ್ಲಿ ಅವರ ಮಕ್ಕಳಾದ ಲೋಕಸಭಾ ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಅವರು ಸ್ವಲ್ಪ ಸಮಯ ಆಸ್ಪತ್ರೆಯಲ್ಲಿದ್ದು, ನಂತರ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

    ಅನಾರೋಗ್ಯಕ್ಕೆ ನಿಖರ ಕಾರಣ ತಿಳಿದಿಲ್ಲ

    ಸೋನಿಯಾ ಗಾಂಧಿ ಅವರ ಆಸ್ಪತ್ರೆ ದಾಖಲಾತಿಗೆ ನಿಖರವಾದ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕಳೆದ ಕೆಲವು ಸಮಯದಿಂದ ಅವರು ಉಸಿರಾಟದ ತೊಂದರೆ ಮತ್ತು ಕಾಲಕಾಲಕ್ಕೆ ಎದುರಾಗುವ ಸೋಂಕುಗಳಿಂದಾಗಿ ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.

Read More
Next Story