
Today's Live News Mar 24: ಬೈರೂತ್ ಮೇಲೆ ಮತ್ತೆ ಇಸ್ರೇಲ್ ಭೀಕರ ವೈಮಾನಿಕ ದಾಳಿ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ ಮಾರ್ಚ್ 24, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 24 March 2026 11:48 AM IST
ಇರಾನ್ ಯುದ್ಧದ ಅಂತ್ಯಕ್ಕೆ ಡೊನಾಲ್ಡ್ ಟ್ರಂಪ್ ಸುಳಿವು
ಇರಾನ್ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಟ್ರಂಪ್ ಸುಳಿವು ನೀಡಿದ ನಂತರ ಏಷ್ಯಾದ ಷೇರು ಮಾರುಕಟ್ಟೆಗಳು ಚೇತರಿಸಿಕೊಂಡಿವೆ. ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಮಾತುಕತೆ ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ವಾಲ್ ಸ್ಟ್ರೀಟ್‌ನಲ್ಲಿ ಕಂಡುಬಂದ ಸಮಾಧಾನಕರ ಬೆಳವಣಿಗೆಯಿಂದಾಗಿ ಮಂಗಳವಾರ ಏಷ್ಯಾದ ಮಾರುಕಟ್ಟೆಗಳು ಚೇತರಿಕೆ ಕಂಡಿವೆ.
ಜಪಾನ್‌ನ ನಿಕೈ 225 ಸೂಚ್ಯಂಕವು ಬೆಳಗಿನ ವಹಿವಾಟಿನಲ್ಲಿ ಶೇಕಡಾ 1.1 ರಷ್ಟು ಏರಿಕೆ ಕಂಡು 52,093.02 ಕ್ಕೆ ತಲುಪುವ ಮೂಲಕ ಹಿಂದಿನ ದಿನದ ನಷ್ಟವನ್ನು ಸರಿದೂಗಿಸಿಕೊಂಡಿದೆ. ಟೊಯೋಟಾ ಮೋಟಾರ್ ಕಾರ್ಪೊರೇಷನ್ ತನ್ನ ಕೆಂಟುಕಿ ಮತ್ತು ಇಂಡಿಯಾನಾ ಆಟೋ ಪ್ಲಾಂಟ್‌ಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರ ಅದರ ಷೇರು ಬೆಲೆ ಶೇಕಡಾ 1.1 ರಷ್ಟು ಹೆಚ್ಚಾಗಿದೆ. ಜಪಾನಿನ ಉತ್ಪಾದಕರು ಅಮೆರಿಕದ ಉದ್ಯೋಗಗಳು ಮತ್ತು ಆರ್ಥಿಕ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ತೋರಿಸಲು ಉತ್ಸುಕರಾಗಿದ್ದಾರೆ.
ಆಸ್ಟ್ರೇಲಿಯಾದ ಎಸ್ ಅಂಡ್ ಪಿ/ಎಎಸ್‌ಎಕ್ಸ್ 200 ಸೂಚ್ಯಂಕವು ಶೇಕಡಾ 0.5 ರಷ್ಟು ಏರಿಕೆಯಾಗಿ 8,404.00 ಕ್ಕೆ ತಲುಪಿದ್ದರೆ ದಕ್ಷಿಣ ಕೊರಿಯಾದ ಕಾಸ್ಪಿ ಸೂಚ್ಯಂಕವು ಶೇಕಡಾ 2.2 ರಷ್ಟು ಜಿಗಿದು 5,526.24 ಕ್ಕೆ ತಲುಪಿದೆ. ಫೆಬ್ರವರಿ ಅಂತ್ಯದಲ್ಲಿ ಆರಂಭವಾದ ಇರಾನ್ ಯುದ್ಧದ ಆತಂಕದಿಂದಾಗಿ ಜಾಗತಿಕ ಮಾರುಕಟ್ಟೆಗಳು ಏರಿಳಿತವನ್ನು ಕಾಣುತ್ತಿದ್ದವು. ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಇಂಧನ ಸಾಗಣೆಗೆ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯ ಪ್ರವೇಶಕ್ಕೆ ಅಡ್ಡಿಯಾಗುವ ಭಯದಿಂದ ಏಷ್ಯಾ ರಾಷ್ಟ್ರಗಳು ಹೆಚ್ಚು ತೊಂದರೆಗೀಡಾಗಿದ್ದವು.
ಇಂಧನ ವಹಿವಾಟಿನಲ್ಲಿ ಅಮೆರಿಕದ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 2.02 ಡಾಲರ್ ಏರಿಕೆಯಾಗಿ 90.15 ಡಾಲರ್‌ಗೆ ತಲುಪಿದೆ. ಅಂತರಾಷ್ಟ್ರೀಯ ಗುಣಮಟ್ಟದ ಬ್ರೆಂಟ್ ಕಚ್ಚಾ ತೈಲವು 1.41 ಡಾಲರ್ ಏರಿಕೆಯಾಗಿ 101.35 ಡಾಲರ್‌ಗೆ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿನ ಹಗೆತನದ ಸಂಪೂರ್ಣ ಪರಿಹಾರದ ಕುರಿತು ಅಮೆರಿಕ ಮತ್ತು ಇರಾನ್ ಉತ್ಪಾದಕ ಮಾತುಕತೆಗಳನ್ನು ನಡೆಸಿವೆ ಎಂದು ಟ್ರಂಪ್ ಹೇಳಿದ ನಂತರ ಈ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ.
- 24 March 2026 11:42 AM IST
ಬಜೆಟ್ ಮಂಡನೆಗೂ ಮುನ್ನ ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ
ಮಂಗಳವಾರ ಬೆಳಿಗ್ಗೆ 11:30 ಕ್ಕೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬಜೆಟ್ ಮಂಡಿಸಲು ನಿಗದಿಯಾಗಿದ್ದ ಕೆಲವೇ ಗಂಟೆಗಳ ಮೊದಲು ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬೆಳಿಗ್ಗೆ 7:28 ಕ್ಕೆ ವಿಧಾನಸಭೆಗೆ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ನಂತರ 7:49 ಕ್ಕೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಮತ್ತೊಂದು ಇಮೇಲ್ ಕಳುಹಿಸಲಾಗಿದೆ. ಬಾಂಬ್ ಬೆದರಿಕೆ ಬಂದ ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಲಾರಂಭಿಸಿದವು ಮತ್ತು ತನಿಖೆಯನ್ನು ಪ್ರಾರಂಭಿಸಿದವು. ನಾವು ಆವರಣದ ಸುತ್ತಮುತ್ತ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಇಮೇಲ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು, ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕ್ಯಾಬಿನೆಟ್ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಹಲವು ಪ್ರಮುಖ ಗಣ್ಯರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಿವೆ, ಹಾಗೆಯೇ ವಿಧ್ವಂಸಕ ವಿರೋಧಿ ತಪಾಸಣೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
- 24 March 2026 11:33 AM IST
ದಕ್ಷಿಣ ಪೆಸಿಫಿಕ್‌ನ ಟೋಂಗಾ ದ್ವೀಪದಲ್ಲಿ ಭೀಕರ ಭೂಕಂಪ: ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆ ದಾಖಲು
ದಕ್ಷಿಣ ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ಟೋಂಗಾದಲ್ಲಿ ಮಂಗಳವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು ಪ್ರಾಥಮಿಕವಾಗಿ 7.6 ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಸಮಯದ ಪ್ರಕಾರ ಮಂಗಳವಾರ ಸಂಜೆ ವೇಳೆ ಈ ಭೂಕಂಪ ಸಂಭವಿಸಿದ್ದು, ಟೋಂಗಾದ ಎರಡನೇ ಅತಿದೊಡ್ಡ ಪಟ್ಟಣವಾದ ನಿಯಾಫುದಿಂದ ಪಶ್ಚಿಮಕ್ಕೆ ಸುಮಾರು 153 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ತಿಳಿದುಬಂದಿದೆ. ಸಮುದ್ರದ ಮೇಲ್ಮೈಯಿಂದ ಸುಮಾರು 237 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಸಾಮಾನ್ಯವಾಗಿ ಸಮುದ್ರದ ಆಳದಲ್ಲಿ ಭೂಕಂಪ ಸಂಭವಿಸಿದಾಗ ಅದರ ತೀವ್ರತೆಯು ಮೇಲ್ಮೈಗೆ ಬರುವಷ್ಟರಲ್ಲಿ ತುಸು ಕಡಿಮೆಯಾಗುತ್ತದೆ. ಆದರೂ ಸಹ 7.6 ರಷ್ಟು ಹೆಚ್ಚಿನ ತೀವ್ರತೆ ಇರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಸದ್ಯದ ವರದಿಗಳ ಪ್ರಕಾರ, ಈ ಭೂಕಂಪದಿಂದಾಗಿ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಭೂಕಂಪದ ಆಳವು ಹೆಚ್ಚಿರುವುದರಿಂದ ಸುನಾಮಿ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದರೂ, ಕರಾವಳಿ ತೀರದ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹವಮಾನ ಇಲಾಖೆ ಮತ್ತು ಭೂವಿಜ್ಞಾನಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
- 24 March 2026 11:33 AM IST
ಸಿದ್ಧತೆ ಯಾವುದಕ್ಕಾಗಿ - ನಾಯಕತ್ವಕ್ಕೋ ಅಥವಾ ಅದರ ಅನುಪಸ್ಥಿತಿಗೋ?: ಪ್ರಧಾನಿಗೆ ಸ್ಟಾಲಿನ್ ತೀಕ್ಷ್ಣ ಪ್ರಶ್ನೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಎಲ್‌ಪಿಜಿ ಸಿದ್ಧತೆಯ ಕೊರತೆಯ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ಧತೆಯನ್ನು ಜನರಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಾಡಿದಂತೆ ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮಗಳನ್ನು ಎದುರಿಸಲು ದೇಶವು ಸಿದ್ಧವಾಗಿರಬೇಕೆಂದು ಮೋದಿ ಬಯಸುತ್ತಿದ್ದಾರೆ ಎಂದು ಟೀಕಿಸಿದರು.
ಇದಕ್ಕೆ ತಿರುಗೇಟು ನೀಡುರುವ ಡಿಎಂಕೆ ಮುಖ್ಯಸ್ಥ, "ಯಾವುದಕ್ಕಾಗಿ ಸಿದ್ಧರಾಗಿರಬೇಕು - ನಾಯಕತ್ವಕ್ಕಾಗಿಯೇ ಅಥವಾ ಅದರ ಅನುಪಸ್ಥಿತಿಗಾಗಿಯೇ?" ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು. ಯಾರು ಸಿದ್ಧರಾಗಿರಬೇಕು, ಅದು ಕೇಂದ್ರ ಸರ್ಕಾರವೋ ಅಥವಾ ಜನರೋ ಎಂದು ಸ್ಟಾಲಿನ್ ಕೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಸಿದ್ಧತೆಯನ್ನು ಜನರಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ ಮತ್ತು ನಮ್ಮನ್ನು ರಕ್ಷಿಸಲು ನೀವು ಏಕೆ ಸಿದ್ಧರಾಗಿರಲಿಲ್ಲ ಎಂದು ಪ್ರಶ್ನಿಸಿದರು. ತಮಿಳುನಾಡಿನ ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಅಡೆತಡೆಯಿಲ್ಲದೆ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಪ್ರಧಾನಿಯವರಿಗೆ ಪತ್ರ ಬರೆದಿರುವುದನ್ನು ಡಿಎಂಕೆ ಮುಖ್ಯಸ್ಥರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
- 24 March 2026 7:23 AM IST
ಬೈರೂತ್ ಮೇಲಿನ ಇಸ್ರೇಲ್ ವೈಮಾನಿಕ ದಾಳಿ ತೀವ್ರ
ಹಿಜ್ಬುಲ್ಲಾ ಗುಂಪುಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮಿಲಿಟರಿಯು ಮಂಗಳವಾರ ಮುಂಜಾನೆ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೂ ಮುನ್ನವೇ ಹಲವಾರು ಪ್ರದೇಶಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಎಚ್ಚರಿಕೆ ನೀಡಿದ್ದರಿಂದ ಸಾವಿರಾರು ಜನರು ಈಗಾಗಲೇ ಆ ಭಾಗದಿಂದ ಪಲಾಯನ ಮಾಡಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯದ ವರದಿಗಳಾಗಿಲ್ಲ. ದಾಳಿಯ ತೀವ್ರತೆಗೆ ಉಪನಗರಗಳಲ್ಲಿ ಬೃಹತ್ ಬೆಂಕಿ ಮತ್ತು ಹೊಗೆಯ ಮೋಡಗಳು ಆವರಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಲೆಬನಾನ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈವರೆಗಿನ ಇಸ್ರೇಲ್ ದಾಳಿಯಿಂದ ಲೆಬನಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

