
Bangalore Stampede | ವಿಜಯೋತ್ಸವ ದುರಂತ: ಸಂಪುಟದಲ್ಲಿ ಬಿಸಿಯೇರಿದ ʼವೈಫಲ್ಯದʼ ಚರ್ಚೆ; ಆರ್ಸಿಬಿ ವಿರುದ್ಧ ಎಫ್ಐಆರ್
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತಿತರ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ,.
ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ವಿಚಾರವು ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಘಟನೆಯು ಕೇವಲ ರಾಜ್ಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿರುವುದರಿಂದ ಸರ್ಕಾರದ ವಿರುದ್ಧ ಆಕ್ಷೇಪಗಳು ವ್ಯಕ್ತಗೊಂಡಿವೆ. ಹೀಗಾಗಿ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲು ಹಲವಾರು ಸಚಿವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದಲ್ಲಿ ಸುಮಾರು 2-3 ಲಕ್ಷ ಜನರು ಸೇರಿದ್ದರು. ಈ ಅನಿರೀಕ್ಷಿತ ಜನಸಂದಣಿ ನಿಯಂತ್ರಿಸಲು ಭದ್ರತಾ ವ್ಯವಸ್ಥೆ ವಿಫಲವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಪ್ರಕಾರ, ಗೇಟ್ 7ರ ಬಳಿ "ಉಚಿತ ಟಿಕೆಟ್" ಎಂಬ ವದಂತಿ ಹರಡಿದ್ದರಿಂದ ಜನರು ಒಳನುಗ್ಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಉಂಟಾದ ಗೊಂದಲ ಮತ್ತು ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ ಈ ಎಲ್ಲ ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
ಈ ದುರಂತಕ್ಕೆ ಯಾರು ಜವಾಬ್ದಾರರು ಎಂಬುದು ಸಭೆಯಲ್ಲಿ ಚರ್ಚೆಯಾಗಲಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಆಯೋಜನೆಯ ಹೊಣೆಗಾರಿಕೆಯನ್ನು ಹೊಂದಿದ್ದರೂ, ಭದ್ರತಾ ನಿರ್ವಹಣೆ ರಾಜ್ಯ ಪೊಲೀಸ್ ಇಲಾಖೆಯದ್ದಾಗಿತ್ತು. ಕೇವಲ 2,000 ಪೊಲೀಸ್ ಸಿಬ್ಬಂದಿಯನ್ನು 2-3 ಲಕ್ಷ ಜನರನ್ನು ನಿಯಂತ್ರಿಸಲು ನಿಯೋಜಿಸಿದ್ದು ಭದ್ರತಾ ವೈಫಲ್ಯಕ್ಕೆ ಕಾರಣವಾಯಿತೇ ಎಂಬ ಆರೋಪಗಳ ಕುರಿತು ಪ್ರಶ್ನೆಗಳು ಸಭೆಯಲ್ಲಿ ಏಳಲಿವೆ.
ಸಂಭ್ರಮಾಚರಣೆಯನ್ನು ತರಾತುರಿಯಲ್ಲಿ ಆಯೋಜಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೊಡ್ಡ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದ್ದರೂ ಸೂಕ್ತ ಯೋಜನೆ ರೂಪಿಸದಿರುವುದು ಏಕೆ ಎಂಬ ಪ್ರಶ್ನೆಗಳು ಸಚಿವರ ವಲಯದಲ್ಲೇ ಎದ್ದಿವೆ. ವಿಜಯ ಪಥಯಾತ್ರೆಯ ಕುರಿತು ಆರ್ಸಿಬಿಯ ಸಾಮಾಜಿಕ ಮಾಧ್ಯಮ ಘೋಷಣೆ ಮತ್ತು ಗೃಹ ಸಚಿವರ ಪ್ರಕಟಣೆಗಳ ನಡುವಿನ ಗೊಂದಲವೂ ಚರ್ಚೆಯಾಗಲಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಘಟನೆಯ ಸಮಗ್ರ ತನಿಖೆ, ಭದ್ರತಾ ಕ್ರಮಗಳ ಸುಧಾರಣೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಮತ್ತಷ್ಟು ಬೆಂಬಲ ಹಾಗೂ ಕೆಸಿಎಯ ಪಾತ್ರದ ಕುರಿತು ಮಹತ್ವದ ತೀರ್ಮಾನಗಳನ್ನು ನಿರೀಕ್ಷಿಸಲಾಗಿದೆ.
ಪರಿಶೀಲನೆ
ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು, ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಲ್ತುಳಿತಕ್ಕೂ ಮುನ್ನ ಹಾಗೂ ನಂತರದ ಸನ್ನಿವೇಶಗಳ ಕುರಿತು ಮಾಹಿತಿ ಪಡೆದರು. ಅಲ್ಲದೇ ಕಾಲ್ತುಳಿತ ಸಂಭವಿಸಿದ ಸ್ಥಳಗಳನ್ನು ಪರಿಶೀಲಿಸಿದರು.
ಇದಕ್ಕೂ ಮುನ್ನ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಇನ್ನು ಮುಂದೆ ಬೃಹತ್ ಸಮಾರಂಭ, ಮೆರವಣಿಗೆ, ಸಭೆ ಹಾಗೂ ವಿಜಯೋತ್ಸವಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲು ನಿರ್ಧರಿಸಲಾಗಿದೆ.
ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ರಾಷ್ಟ್ರ ನಾಯಕರಲ್ಲದೆ ಇತರ ದೇಶಗಳ ನಾಯಕರೂ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರೂ ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಿಷಾದ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ದುರಂತಲ್ಲಾದ ಜೀವಹಾನಿ ಆಘಾತಕಾರಿ ಮತ್ತು ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಆಶಿಸಿದ್ದಾರೆ.
ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನ ದುರಂತದಲ್ಲಿ ಮೃತರಾದವರ ಸಂಬಂಧಿಗಳು ಮತ್ತು ಗಾಯಗೊಂಡವರ ನೋವಿನಲ್ಲಿ ನಾನು ಮತ್ತು ಅಕ್ಷತಾನ (ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳು) ಭಾಗಿಯಾಗಿದ್ದೇವೆ. ನಾವು ನಿಮ್ಮೊಂದಿಗೆ ಸಂಭ್ರಮಾಚಾರಣೆ ಮಾಡಿದ್ದೆವು; ಆದರೆ, ಈಗ ಶೋಕಾಚರಣೆ ಮಾಡುತ್ತಿದ್ದೇವೆ’ ಎಂದು ನೋವು ಹಂಚಿಕೊಂಡಿದ್ದಾರೆ.
ಬುಧವಾರ ಏನಾಯಿತು?
ಐಪಿಎಲ್ 2025ನಲ್ಲಿ ಐತಿಹಾಸಿಕ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. 18 ವರ್ಷಗಳ ನಿರೀಕ್ಷೆಯ ನಂತರ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದ ಆರ್ಸಿಬಿ ತಂಡಕ್ಕೆ ನಗರದೆಲ್ಲೆಡೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.
ಬುಧವಾರ ಮಧ್ಯಾಹ್ನ ತಂಡವು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗಲೇ ಸಾವಿರಾರು ಅಭಿಮಾನಿಗಳು ತಂಡವನ್ನು ಬರಮಾಡಿಕೊಂಡರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕವಾಗಿ ವಿರಾಟ್ ಕೊಹ್ಲಿ ಮತ್ತು ಆಟಗಾರರನ್ನು ಸ್ವಾಗತಿಸಿ, ಅವರಿಗೆ ಬೊಕೆ ಹಾಗೂ ಆರ್ಸಿಬಿ ಮತ್ತು ಕನ್ನಡ ಬಾವುಟಗಳನ್ನು ನೀಡಿ ಗೌರವಿಸಿದರು.
ವಿಜಯೋತ್ಸವದ ಪ್ರಮುಖ ಭಾಗವಾಗಿ, ಆರ್ಸಿಬಿ ತಂಡದ ಆಟಗಾರರು ವಿಧಾನಸೌಧದ ಮೆಟ್ಟಿಲುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಸಚಿವರಿಂದ ಅಧಿಕೃತ ಸನ್ಮಾನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಂಡದ ನಾಯಕ ರಜತ್ ಪಟೀದಾರ್, ವಿರಾಟ್ ಕೊಹ್ಲಿ, ಮತ್ತು ಇತರ ಆಟಗಾರರು ಭಾಗವಹಿಸುತ್ತಾರೆ.
ಸನ್ಮಾನ ನಂತರ, ತಂಡದ ಆಟಗಾರರು ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಬಸ್ನಲ್ಲಿ ಸಾಗಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿತ್ತು; ಮೂರು ಡಿಸಿಪಿಗಳು, ಒಂಬತ್ತು ಎಸಿಪಿಗಳು, ಹನ್ನೆರಡು ಇನ್ಸ್ಪೆಕ್ಟರ್ಗಳು ಮತ್ತು ಹಲವಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Live Updates
- 4 Jun 2025 10:41 PM IST
ಮ್ಯಾಜಿಸ್ಪೀರೀಯಲ್ ತನಿಖೆ ಸರ್ಕಾರ ಆದೇಶ
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ಗಳ ಬಳಿ ಉಂಟಾದ ಕಾಲ್ತುಳಿತ ಹಾಗೂ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ, ಸನ್ನಿವೇಶಗಳ ಹಾಗೂ ಪ್ರಕರಣದಲ್ಲಿ ಉಂಟಾಗಿರಬಹುದಾದ ಲೋಪಗಳ ಕುರಿತು ಸಮಗ್ರ ತನಿಖೆಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ, ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ವಿಚಾರಣಾಧಿಕಾರಿಯವರು ಈ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಮ್ಯಾಜಿಸ್ಪೀರೀಯಲ್ ವಿಚಾರಣೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರ ಅದೇಶಿಸಿದೆ.
- 4 Jun 2025 8:39 PM IST
ಆರ್ಸಿಬಿ ವಿಜಯೋತ್ಸವ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
ಬೌರಿಂಗ್ ಹಾಗೂ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಾಂತ್ವನ ಹೇಳಿದ್ದಾರೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
- 4 Jun 2025 8:23 PM IST
ವಿಜಯೋತ್ಸವದ ಕಾಲ್ತುಳಿತಕ್ಕೆ ಸರ್ಕಾರವೇ ನೇರ ಹೊಣೆ; ಎಚ್ಡಿಕೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಹತ್ತಕ್ಕೂ ಹೆಚ್ಚು ಆರ್ಸಿಬಿ ಅಭಿಮಾನಿಗಳು ಧಾರುಣವಾಗಿ ಮೃತಪಟ್ಟಿರುವುದು ದಿಗ್ಭ್ರಮೆ ಮೂಡಿಸಿದೆ. ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಘಟನೆಗೆ ದಿಗ್ಬ್ರಮೆ ವ್ಯಕ್ತಪಡಿಸಿರುವ ಅವರು, ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧರ ಜೀವ ನಷ್ಟವಾಗಿರುವುದು ಅತೀವ ದುಃಖ ತಂದಿದೆ. ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದೇ ಈ ಮಹಾದುರಂತಕ್ಕೆ ನೇರ ಕಾರಣ. ದುರಂತದ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
- 4 Jun 2025 8:08 PM IST
ಆರ್ಸಿಬಿ ವಿಜಯೋತ್ಸವ: ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ
ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಆರ್ಸಿಬಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ನಡೆದ ನೂಕುನುಗ್ಗಲಿನಲ್ಲಿ 10 ಮಂದಿ ಮೃತಪಟ್ಟಿದ್ದು 25 ಕ್ಕೂ ಹೆಚ್ಚು ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಈ ಘಟನೆಗೆ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ನಡೆದ ದುರ್ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದ್ದು ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನಾವಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
- 4 Jun 2025 7:34 PM IST
ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಅಸ್ವಸ್ಥರ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕರು
ಆರ್ಸಿಬಿ ವಿಜಯೋತ್ಸವ ಆಚರಣೆ ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದರು. ಈ ವೇಳೆ ನಡೆದ ಕಾಲ್ತುಳಿತಕ್ಕೆ 10 ಮಂದಿ ಮೃತಪಟ್ಟಿದ್ದು 25 ಕ್ಕೂ ಹೆಚ್ಚು ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರನ್ನು ಬೌರಿಂಗ್, ಲೇಡಿ ಕರ್ಜನ್ ಹಾಗೂ ವೈದೇಹಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾಧಿ ನಾರಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದು ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ್ದಾರೆ.
ಸರ್ಕಾರ ಅಭಿಮಾನಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಹಾಗೂ ಯೋಜನೆ ರೂಪಿಸದೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ಮನೆಯಲ್ಲಿ ಸೂತಕದ ವಾತವರಣ ಮನೆ ಮಾಡಿದೆ ಎಂದು ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ಸಾಮಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿತ್ತು.
- 4 Jun 2025 7:10 PM IST
ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಈ ವೇಳೆ ನಡೆದ ನೂಕುನುಗ್ಗಲಿನಲ್ಲಿ 10 ಮಂದಿ ಮೃತಪಟ್ಟಿದ್ದು 25 ಕ್ಕೂ ಹೆಚ್ಚು ಜನರನ್ನು ಶಿವಾಜಿನಗರದ ಬೌರಿಂಗ್, ಲೇಡಿ ಕರ್ಜನ್ ಹಾಗೂ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಠ್ಠಲ ಮಲ್ಯ ರಸ್ತೆಯಲ್ಲಿನ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ್ದಾರೆ.
- 4 Jun 2025 6:49 PM IST
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವಕ್ಕೆ ಮಳೆ ಅಡ್ಡಿ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವ ಆಚರಿಸಲು ಸಕಲ ಸಿದ್ದತೆ ನಡೆಸಿ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಿತ್ತು. ಆದರೆ ಕಾರ್ಯಕ್ರಮ ಆರಂಭಿಸುವ ಮೊದಲೇ ಮಳೆ ಸರಿಯಲು ಆರಂಭಿಸಿದ್ದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಆದುಷ್ಟು ಬೇಗ ಮಳೆ ನಿಂತು ಕಾರ್ಯಕ್ರಮ ಆರಂಭಿಸಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಧಾನಸೌಧದ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿಯೂ ಸಹ ಮಳೆ ಸುರಿದು ಕಾರ್ಯಕ್ರಮ ನಿಗದಿತ ಅವಧಿಗೂ ಮೊದಲೇ ಮುಕ್ತಾಯಗೊಂಡಿತ್ತು.
- 4 Jun 2025 6:35 PM IST
ಆರ್ಸಿಬಿ ವಿಜಯೋತ್ಸವ: ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ, ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ
ಆರ್ಸಿಬಿಯ ಸಂಭ್ರಮಾಚರಣೆ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದು ಈ ವೇಳೆ ನಡೆದ ನೂಕುನುಗ್ಗಲಿನಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಈ ವೇಳೆ 25ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಅವರನ್ನು ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಂಭವವಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾಧಿ ನಾರಯಣಸ್ವಾಮಿ ಸೇರಿದಂತೆ ಹಲವಾರು ನಾಯಕರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ಉಂಟಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೇರ ಕಾರಣ. ಸರ್ಕಾರದ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
- 4 Jun 2025 6:02 PM IST
ಆರ್ಸಿಬಿ ವಿಜಯೋತ್ಸವ: ಮೃತಪಟ್ಟ ಅಭಿಮಾನಿಗಳ ಸಂಖ್ಯೆ ಏಳಕ್ಕೆ ಏರಿಕೆ
ಆರ್ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ 6ನೇ ಗೇಟ್ ಬಳಿ ಸಂಭವಿಸಿದ ನೂಕುನುಗ್ಗಲಿನಲ್ಲಿ ಏಳು ಜನ ಮೃತಪಟ್ಟಿದ್ದಾರೆ. ಅಸ್ವಸ್ಥರಾದ 25 ಕ್ಕೂ ಹೆಚ್ಚುಮಂದಿಯನ್ನು ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸೌಧದಲ್ಲಿ ಆಯೋಜಿಸಿದ್ದ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಗೊಂದಲದ ಗೂಡಾಗುವುದರ ಜತೆಗೆ ನಿರೀಕ್ಷೆಯಂತೆ ನಡೆಯಲಿಲ್ಲ. ಯೋಜನೆಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಮಾತನಾಡುವುದರ ಜತೆಗೆ ಆರ್ಸಿಬಿಯಿಂದ ಇಬ್ಬರು ಆಟಗಾರರು ಮಾತನಾಡುವುದಿತ್ತು. ಆದರೆ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ನಡೆದು ಇಡೀ ಕಾರ್ಯಕ್ರಮಕ್ಕೆ ಸೂತಕದ ಛಾಯೆ ಆವರಿಸಿತ್ತು.
ಮಳೆ ಸುರಿದ ಕಾರಣ ವಿಧಾನಸೌಧ ಬಳಿ ನಡೆದ ಸನ್ಮಾನ ಕಾರ್ಯಕ್ರಮದಿಂದ ಆಟಗಾರರು ಬೇಗನೆ ಹೊರಟರು. ವೇದಿಕೆಯ ಮೇಲೆ ಸಚಿವರು ಹಾಗು ಅಧಿಕಾರಿಗಳು ತುಂಬಿದ್ದರು. ಸನ್ಮಾನ ಮಾಡುವ ವೇಳೆ ಯಾರಿಗೆ ಸನ್ಮಾನ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ. ಇನ್ನು ಸನ್ಮಾನ ಕಾರ್ಯಕ್ರಮ ಯೋಜನೆಯಂತೆ ನಡೆಯದೆ ಗೊಂದಲದ ಗೂಡಾಯಿತು.
ಸರ್ಕಾರದ ಈ ಅವ್ಯವಸ್ಥೆಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
- 4 Jun 2025 5:28 PM IST
ಮಳೆಯಿಂದ ಆರ್ಸಿಬಿ ತಂಡಕ್ಕೆ ಅರೆಬರೆ ಸನ್ಮಾನ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಸುದ್ದಿ ತಿಳಿದು ಬುಧವಾರ ಬೆಳಿಗ್ಗೆಯಿಂದಲೇ ಆರ್ಸಿಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕಾರ್ಯಕ್ರಮ ಆರಂಭವಾದ ಸ್ವಲ್ಪ ಸಮಯದಲ್ಲೇ ವಿಧಾನಸೌಧದ ಸುತ್ತಮುತ್ತ ಮಳೆ ಆರಂಭವಾದ ಕಾರಣ ಆಟಗಾರರು ವೇದಿಕೆಯಿಂದ ಬೇಗ ನಿರ್ಗಮಿಸಿದರು. ಇದರಿಂದ ಆರ್ಸಿಬಿ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸುವಂತಾಯಿತು.