LIVE Karnataka Assembly Session Live: ಸದನದಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ; ಕಲಾಪ ಜ.27ಕ್ಕೆ ಮುಂದೂಡಿಕೆ
x
ವಿಧಾನ ಮಂಡಲ ಅಧಿವೇಶನ

Karnataka Assembly Session Live: ಸದನದಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ; ಕಲಾಪ ಜ.27ಕ್ಕೆ ಮುಂದೂಡಿಕೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಕೇವಲ ಒಂದು ಸಾಲಿನ ಭಾಷಣ ಮಾಡಿ ನಿರ್ಗಮಿಸಿರುವುದು ಈಗ ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಕೇಂದ್ರದ ವಿರುದ್ಧದ ಹೋರಾಟಕ್ಕೆ ಹೊಸ ವೇದಿಕೆ ಒದಗಿಸಿದೆ.


Click the Play button to hear this message in audio format

ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೆ ನಿರ್ಗಮಿಸಿದ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ, ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರೀಯ ಮಟ್ಟದಲ್ಲಿ 'ಗೋ ಬ್ಯಾಕ್' ಅಭಿಯಾನ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ನರೇಗಾ (MNREGA) ಯೋಜನೆಯಲ್ಲಿ ಕೇಂದ್ರದ ನಡೆಯನ್ನು ಟೀಕಿಸಿದ್ದಕ್ಕೆ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದ್ದನ್ನೇ ಪ್ರಮುಖವಾಗಿಟ್ಟುಕೊಂಡು, ಕೇಂದ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟುಮಾಡಲು ಕೈ ನಾಯಕರು ತೀರ್ಮಾನಿಸಿದ್ದಾರೆ.

ರಾಜ್ಯಪಾಲರ ನಡೆಯು ಸಂವಿಧಾನಬಾಹಿರ ಎಂದು ವಾದಿಸುತ್ತಿರುವ ಕಾಂಗ್ರೆಸ್, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ವಿಶೇಷ ಅಧಿವೇಶನದ ಉಭಯ ಸದನಗಳಲ್ಲಿ ತೀವ್ರ ಆಕ್ರೋಶ ಹೊರಹಾಕಲು ನಿರ್ಧರಿಸಿದೆ.

Live Updates

  • 23 Jan 2026 12:44 PM IST

    ರಾಜ್ಯಪಾಲರಿಗೆ ಅಗೌರವ ಸರಿಯೇ: ಸುನೀಲ್‌ ಕುಮಾರ್‌ ಪ್ರಶ್ನೆ

    ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಸದನಕ್ಕೆ ನೀವೇ ಕರೆತಂದಿರಿ. ಅವರು ಸರ್ಕಾರದ ಭಾಷಣವನ್ನೇ ಮಂಡಿಸಲು ಬಂದಿದ್ದರು. ಅಂತಹವರಿಗೆ ಕನಿಷ್ಠ ಶಿಷ್ಟಾಚಾರದ ಗೌರವವನ್ನೂ ಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಲಿಲ್ಲವೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.

    ನೀವು ಸ್ಪೀಕರ್ ಆದಾಗ ಅನುಭವ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಹಿಂದೆ ನಮ್ಮ 9 ಜನರನ್ನು ಒಮ್ಮೆ ಹಾಗೂ 18 ಜನ ಶಾಸಕರನ್ನು ಅಮಾನತುಗೊಳಿಸಲಾಗಿತ್ತು.  ಆಗ ಸದನದ ಗೌರವ ಕಾಪಾಡಲು ಆ ಕ್ರಮ ಕೈಗೊಂಡೆ ಎಂದು ಹೇಳಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಸಭಾಪತಿ ಯು.ಟಿ. ಖಾದರ್‌ ಅವರನ್ನು ಪ್ರಶ್ನಿಸಿದರು. 

  • 23 Jan 2026 12:25 PM IST

    ಆತುರ ಬೇಡ, ನಿಸ್ಪಕ್ಷ ತೀರ್ಪು ನೀಡಿ: ಆರ್‌. ಅಶೋಕ್‌

    ಕಲಾಪದಲ್ಲಿ ನಡೆದ ಗದ್ದಲದ ವಿಚಾರವಾಗಿ ಕಾಂಗ್ರೆಸ್‌ ಶಾಸಕರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌,  "ಸಭಾಧ್ಯಕ್ಷರೇ, ನೀವು ಸ್ಪೀಕರ್ ಆಗಿಯೇ ಮುಂದುವರಿಯಿರಿ ಅಥವಾ ಮಂತ್ರಿಯಾಗಿಯಾದರೂ ಹೋಗಿ. ಆದರೆ, ಸದನದಲ್ಲಿ ರೂಲಿಂಗ್ ಕೊಡುವಾಗ ಮಾತ್ರ ಆತುರ ಪಡಬೇಡಿ. ಸರಿಯಾದ ಮತ್ತು ನಿಷ್ಪಕ್ಷಪಾತವಾದ ತೀರ್ಪು ನೀಡಿ" ತಿಳಿಸಿದರು. 

  • 23 Jan 2026 12:20 PM IST

    ಅಮಾನತು ಮಾಡಿದ ವೀರಾವೇಶ ಎಲ್ಲಿ ಹೋಯ್ತು? ಸ್ಪೀಕರ್‌ಗೆ ಅಶ್ವಥ್ ನಾರಾಯಣ್ ಪ್ರಶ್ನೆ

    ಗುರುವಾರ(ಜ.23) ವಿಧಾನಮಂಡಲ ಕಲಾಪದಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ ಎಂಬ ವಿಚಾರವಾಗಿ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಸಭಾಧ್ಯಕ್ಷರ ನಡೆಯನ್ನು ಪ್ರಶ್ನಿಸಿದ ಅವರು, 18 ಶಾಸಕರನ್ನು ಅಮಾನತು ಮಾಡಿದಾಗ ತೋರಿದ 'ವೀರಾವೇಶ' ಈಗ ಎಲ್ಲಿ ಮಾಯವಾಯಿತು ಎಂದು ಖಾರವಾಗಿ ಪ್ರಶ್ನಿಸಿದರು. 

  • 23 Jan 2026 12:13 PM IST

    ರಾಜ್ಯಪಾಲರಿಗೆ ಅಗೌರವ: ಸದನದಲ್ಲಿ ಆರ್. ಅಶೋಕ್ ಗುಡುಗು!

    ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯಪಾಲರಿಗೆ ಆಗಿರುವ ಅಗೌರವ ಹಾಗೂ ಸದನದಲ್ಲಿ ನಡೆದ ಗದ್ದಲದ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಸದನದಲ್ಲಿ ಮಾತನಾಡಿದ ಅವರು,   "ರಾಜ್ಯಪಾಲರನ್ನು ಅದ್ದೂರಿಯಾಗಿ ಬರಮಾಡಿಕೊಂಡ ನೀವು, ಅವರು ಭಾಷಣ ಮುಗಿಸಿ ತೆರಳುವಾಗ ಕಳುಹಿಸಿಕೊಡಲು ಒಬ್ಬರೂ ಹೋಗಲಿಲ್ಲ. ಇದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ. ಈ ಬಗ್ಗೆ ನಾನು ಈಗಾಗಲೇ ಪತ್ರ ನೀಡಿದ್ದು, ಚರ್ಚೆಗೆ ಅವಕಾಶ ನೀಡಬೇಕು" ಎಂದು ಒತ್ತಾಯಿಸಿದರು.

    ಸದನದ ಗದ್ದಲದ ನಡುವೆ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆ ಹರಿದಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, "ಅವರ ಬಟ್ಟೆ ಹರಿದಿದೆ ಎಂದು ಅವರೇ ಹೇಳುತ್ತಿದ್ದಾರೆ, ಆದರೆ ಸರ್ಕಾರ ಏನೂ ಆಗಿಲ್ಲ ಎನ್ನುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು? ನಾಳೆ ರಾಜ್ಯಪಾಲರ ಮೇಲೆಯೇ ಹಲ್ಲೆಯಾದರೆ ಏನು ಮಾಡುತ್ತೀರಿ? ರಾಜ್ಯಪಾಲರನ್ನು ಅಬಲರನ್ನಾಗಿ ಮಾಡಬೇಡಿ" ಎಂದು ಎಚ್ಚರಿಸಿದರು.

    "ರಾಜ್ಯಪಾಲರು 'ಜೈ ಹಿಂದ್' ಎಂದ ತಕ್ಷಣ ರಾಷ್ಟ್ರಗೀತೆ ಶುರುವಾಗಲಿಲ್ಲ. ಒಂದು ವೇಳೆ ರಾಷ್ಟ್ರಗೀತೆ ಆರಂಭವಾಗಿದ್ದರೆ ಅವರು ಖಂಡಿತ ಇರುತ್ತಿದ್ದರು. ಆದರೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ರಾಜ್ಯಪಾಲರು 'ಓಡಿ ಹೋದರು' ಎಂದು ಹೇಳಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಮಾತುಗಳನ್ನಾಡಬಾರದು" ಎಂದು ಕಿಡಿಕಾರಿದರು.

  • 23 Jan 2026 11:34 AM IST

    ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ

    ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಇಂದಿನಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತಾದ ಚರ್ಚೆಗಳು ಅಧಿಕೃತವಾಗಿ ಆರಂಭವಾಗಲಿವೆ. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳು ಮತ್ತು ವಿವಾದಗಳಿಗೆ ಜನವರಿ 28ರಂದು ವಿಧಾನಸಭೆಯಲ್ಲಿ ಹಾಗೂ ಜನವರಿ 29ರಂದು ವಿಧಾನಪರಿಷತ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ.

    ಮುಖ್ಯಮಂತ್ರಿಗಳ ಉತ್ತರ ಪೂರ್ಣಗೊಂಡ ಬಳಿಕ, ಅತಿ ಹೆಚ್ಚು ಕುತೂಹಲ ಮೂಡಿಸಿರುವ ನರೇಗಾ (MNREGA) ಯೋಜನೆಗೆ ಸಂಬಂಧಿಸಿದ ಕೇಂದ್ರದ ನೀತಿಗಳು ಹಾಗೂ ರಾಜ್ಯದ ನಿಲುವುಗಳ ಬಗ್ಗೆ ಸದನದಲ್ಲಿ ಪ್ರತ್ಯೇಕವಾಗಿ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

  • 23 Jan 2026 11:29 AM IST

    ವಿಧಾನಸೌಧದಲ್ಲಿ ಜಂಟಿ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆ

    ವಿಧಾನಮಂಡಲದ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿರುವ ಹಿನ್ನೆಲೆಯಲ್ಲಿ, ಸದನದ ಸುಗಮ ನಿರ್ವಹಣೆಗಾಗಿ ಇಂದು ಜಂಟಿ ಕಾರ್ಯಕಲಾಪ ಸಲಹಾ ಸಮಿತಿ (BAC) ಸಭೆ ಜರುಗಿತು. ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸರ್ಕಾರದ ಪರವಾಗಿ ಭಾಗವಹಿಸಿದ್ದರು.

    ವಿರೋಧ ಪಕ್ಷದ ನಾಯಕರು ರಾಜ್ಯಪಾಲರ ವಿಚಾರ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರೆ, ಇತ್ತ ಸಚೇತಕರಾದ ಅಶೋಕ್ ಪಟ್ಟಣ್, ರವಿಕುಮಾರ್ ಮತ್ತು ಸಲೀಂ ಅಹಮದ್ ಅವರು ತಮ್ಮ ತಮ್ಮ ಪಕ್ಷಗಳ ನಿಲುವುಗಳನ್ನು ಮಂಡಿಸಿದರು. ಸದನದಲ್ಲಿ ಉಂಟಾಗಿರುವ ಅಸ್ತವ್ಯಸ್ತ ಸ್ಥಿತಿಯನ್ನು ತಿಳಿಗೊಳಿಸಿ, ಜನಪರ ಚರ್ಚೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಸಭೆಯು ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ.

  • 23 Jan 2026 11:23 AM IST

    ಅಬಕಾರಿ ಇಲಾಖೆಯಲ್ಲಿ ಲಂಚ ಪ್ರಕರಣ- ವಿಧಾನಸಭೆಯಲ್ಲೂ ಚರ್ಚೆಗೆ ನಿಲುವಳಿ ಕೊಟ್ಟ ಬಿಜೆಪಿ

    ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಅಬಕಾರಿ ಇಲಾಖೆಯ ಲಂಚ ಪ್ರಕರಣದ ಸದ್ದು ಈಗ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಧ್ವನಿಸುತ್ತಿದೆ. ಅಬಕಾರಿ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ದಂಧೆ ಮತ್ತು ಲಂಚದ ವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಈ ಬಗ್ಗೆ ಕಲಾಪದ ಇತರ ಕಾರ್ಯಕಲಾಪಗಳನ್ನು ಬದಿಗಿಟ್ಟು ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿದೆ.

    ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಈಗಾಗಲೇ ನಿಲುವಳಿ ಸೂಚನೆಯ ಪತ್ರ ಸಲ್ಲಿಸಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ಅಬಕಾರಿ ಪರವಾನಗಿ ಪಡೆಯಲು ಮತ್ತು ವರ್ಗಾವಣೆಗಾಗಿ ಕೋಟ್ಯಂತರ ರೂಪಾಯಿ ಬೇಡಿಕೆ ಇಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದನ್ನೇ ಪ್ರಮುಖ ಅಸ್ತ್ರವಾಗಿರಿಸಿಕೊಂಡಿರುವ ವಿರೋಧ ಪಕ್ಷಗಳು, ಭ್ರಷ್ಟಾಚಾರದ ವಿಚಾರದಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಸಜ್ಜಾಗಿವೆ.

  • 23 Jan 2026 11:19 AM IST

    ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯಕ್ಕೆ ಮುಂದಾದ ಸರ್ಕಾರ

    ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದದೆ ಮತ್ತು ರಾಷ್ಟ್ರಗೀತೆ ಮುಗಿಯುವ ಮೊದಲೇ ಸದನದಿಂದ ನಿರ್ಗಮಿಸಿ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ನಿರ್ಧರಿಸಿದ್ದಾರೆ.

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಅಧಿಕೃತ ನಿರ್ಣಯ ಕಳುಹಿಸಲು ಆಡಳಿತಾರೂಢ ಕಾಂಗ್ರೆಸ್ ಸಜ್ಜಾಗಿದೆ.

    ಇನ್ನೊಂದೆಡೆ, ರಾಜ್ಯಪಾಲರು ಭಾಷಣ ಮಾಡುತ್ತಿದ್ದಾಗ ಘೋಷಣೆ ಕೂಗಿ ಅವರಿಗೆ ಅಗೌರವ ತೋರಿದ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದ್ದು, ಈ ಸಂಬಂಧ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ದೂರು ನೀಡಿದೆ.

  • 23 Jan 2026 11:17 AM IST

    ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ‘ಗೋ ಬ್ಯಾಕ್‌’ ಸಮರ

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ್ದ ಪೂರ್ಣ ಭಾಷಣವನ್ನು ಓದದೆ ಕೇವಲ ಒಂದು ಸಾಲಿಗೆ ಸೀಮಿತಗೊಳಿಸಿ ನಿರ್ಗಮಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೆಂಡಾಮಂಡಲವಾಗಿಸಿದೆ. ರಾಜ್ಯಪಾಲರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೈ ನಾಯಕರು, ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಲು ನಿರ್ಧರಿಸಿದ್ದಾರೆ. ಪ್ರಮುಖವಾಗಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿ 'ಗೋಬ್ಯಾಕ್' ಅಭಿಯಾನವನ್ನು ನಡೆಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸುತ್ತಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ.

    ವಿಶೇಷವಾಗಿ ನರೇಗಾ (MNREGA) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೀತಿಗಳನ್ನು ರಾಜ್ಯ ಸರ್ಕಾರ ಟೀಕಿಸಿತ್ತು. ಇದೇ ಕಾರಣಕ್ಕೆ ರಾಜ್ಯಪಾಲರು ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಈ ವಿಚಾರವನ್ನೇ ಅಸ್ತ್ರವಾಗಿಸಿಕೊಂಡಿರುವ ಆಡಳಿತ ಪಕ್ಷವು, ವಿಶೇಷ ಅಧಿವೇಶನದ ಉಭಯ ಸದನಗಳ ಒಳಗೂ ಮತ್ತು ಹೊರಗೂ ನಿರಂತರ ಪ್ರತಿಭಟನೆ ನಡೆಸಲು ತಂತ್ರ ರೂಪಿಸಿದೆ. ಈಗಾಗಲೇ ನರೇಗಾ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ಗೆ ರಾಜ್ಯಪಾಲರ ಈ ನಡೆ ಕೇಂದ್ರದ ವಿರುದ್ಧ ಇನ್ನಷ್ಟು ಒತ್ತಡ ಹೇರಲು ಪ್ರಬಲ ಅಸ್ತ್ರವಾಗಿ ಸಿಕ್ಕಂತಾಗಿದೆ.

    ಮತ್ತೊಂದೆಡೆ, ರಾಜ್ಯಪಾಲರ ಭಾಷಣದ ಲೋಪಗಳ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿರುವ ಸರ್ಕಾರ, ಸಂವಿಧಾನಬದ್ಧವಾಗಿ ಕೈಗೊಳ್ಳಬೇಕಾದ ಕಾನೂನು ಹೋರಾಟಕ್ಕೂ ತಯಾರಿ ನಡೆಸುತ್ತಿದೆ. ಒಟ್ಟಾರೆಯಾಗಿ, ರಾಜ್ಯಪಾಲರ ನಡೆಯನ್ನು ಮುಂದಿಟ್ಟುಕೊಂಡು ಕೇಂದ್ರಕ್ಕೆ ಮುಜುಗುರ ಉಂಟುಮಾಡುವ ಮತ್ತು ನರೇಗಾ ಅನುದಾನ ಸೇರಿದಂತೆ ರಾಜ್ಯದ ಹಿತಾಸಕ್ತಿಗಳ ವಿಚಾರದಲ್ಲಿ ದೊಡ್ಡ ಮಟ್ಟದ ಜನಜಾಗೃತಿ ಮೂಡಿಸಲು ಸಿದ್ದರಾಮಯ್ಯ ನೇತೃತ್ವದ ಕೈಪಡೆ ಲೆಕ್ಕಾಚಾರ ಹಾಕಿದೆ.

Read More
Next Story