
Jan 24 news LIVE:ವಿಎಚ್‌ಪಿ ನಾಯಕನ ಮೇಲೆ ಹಲ್ಲೆ ಬೆನ್ನಲ್ಲೇ ಭುಗಿಲೆದ್ದ ಕೋಮು ಸಂಘರ್ಷ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಶನಿವಾರ, ಜನವರಿ 24, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 24 Jan 2026 3:43 PM IST
ಸದನದಲ್ಲಿ ಶಿಸ್ತು ರೂಪಿಸಲು ಕಾಲೇಜು ಕಲಿಸಿದ ಪಾಠದ ನೆರವು : ಯು. ಟಿ. ಖಾದರ್
ಸದನದಲ್ಲಿ ಶಿಸ್ತು ರೂಪಿಸುವುದಕ್ಕೆ ಕಾಲೇಜು ನಮಗೆ ಕಲಿಸಿದ್ದ ಶಿಸ್ತಿನ ಪಾಠ ನೆರವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ(ಜ.24) ಆಯೋಜಿಸಲಾಗಿದ್ದ ಮೂಡಬಿದಿರೆ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಕಾಲೇಜು ಯಾವ ರೀತಿ ಮಾರ್ಗದರ್ಶಿಯಾಯಿತು ಎಂದು ವಿವರಿಸಿದರು. ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಾವು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕರು ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ನಮ್ಮ ಪೋಷಕರನ್ನೂ ಕರೆಸಿ ಬುದ್ದಿ ಹೇಳಿದ್ದರಿಂದಲೇ ಸಮಾಜದಲ್ಲಿ ಈ ಸಾಧನೆಯೊಂದಿಗೆ ಗುರುತಿಸುವಂತಾಗಿದೆ ಎಂದರು.
ಮಹಾವೀರ ಕಾಲೇಜು ವಿದ್ಯಾರ್ಥಿಗಳಾಗಿದ್ದವರು ಇಂದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ .ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಕಾಲೇಜು ನಮಗೆ ಅಂದು ಕಲಿಸಿಕೊಟ್ಟ ಪಾಠ ಇಂದಿಗೂ ದಾರಿದೀವಿಗೆಯಾಗಿದ್ದು ಸದಾ ನೆನಪಿನಲ್ಲಿ ಉಳಿದಿದೆ. ಕಾಲೇಜು ವಿಸ್ಯಾರ್ಥಿಗಳಾಗಿದ್ದಾಗ ಹಲವು ಸಾಹಸಗಳನ್ನು ಮಾಡಿದ್ದೇವೆ. ವಸತಿ ನಿಲಯ, ತರಗತಿಗಳಲ್ಲೂ ಕೆಲವೊಮ್ಮೆ ಶಿಸ್ತು ಮೀರಿ ವರ್ತಿಸಿದ್ದೂ ಇದೆ. ಆ ಸಂದರ್ಭದಲ್ಲಿ ಪ್ರಾಂಶುಪಾಲರು , ಪ್ರಾಧ್ಯಾಪಕರು ನಮಗೆ ಬುದ್ಧಿ ಹೇಳಿ ಸರಿ ದಾರಿಗೆ ತಂದಿದ್ದಾರೆ. ಈ ಸಂಸ್ಕೃತಿ, ಶಿಸ್ತು ನಾವು ಈ ಹಂತಕ್ಕೆ ಬೆಳೆಯಲು ಕಾರಣವಾಗಿದ್ದು ಮಹಾವೀರ ಕಾಲೇಜು ವಜ್ರಮಹೋತ್ಸವ ಆಚರಿಸುತ್ತಿರುವ ಈ ವರ್ಷದಲ್ಲಿ ಹಾಗೂ ಮುಂದೆಯೂ ಕಾಲೇಜಿನ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಹೇಳಿದರು.

- 24 Jan 2026 3:35 PM IST
ಶಾಸಕ ಸುರೇಶ್ ಕುಮಾರ್ ವಿರುದ್ಧ ಕೈ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ
ಶುಕ್ರವಾರ(ಜ.23) ಸದನದಲ್ಲಿ ಸಚಿವ ಭೈರತಿ ಸುರೇಶ್ ವಿರುದ್ದ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪೋಸ್ಟರ್ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪೋಸ್ಟರ್‌ನಲ್ಲೇನಿದೆ ?
ಅಮ್ಮನ ಬಗ್ಗೆ ಅತೀವ ಕಾಳಜಿ, ಗೌರವ ತೋರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸದನದಲ್ಲಿ ಏಳು ತಿಂಗಳು, ಒಂಬತ್ತು ತಿಂಗಳಿಗೆ ಹುಟ್ಟಿದವರು ಎಂಬ ಪದ ಬಳಸಿದ್ದಾರೆ. ಇಂತಹ ಹೀನಾಯ ಸಂಸ್ಕೃತಿಯವರು ನಮ್ಮ ಕ್ಷೇತ್ರದ ಶಾಸಕರಾಗಿರುವುದು ದುರಂತ ಎಂದು ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ನಲ್ಲಿ ಬರೆದಿದ್ದಾರೆ.
ಏನಿದು ಘಟನೆ ?
ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದ ಚರ್ಚೆಯ ವೇಳೆ ಶಾಸಕ ಸುರೇಶ್ ಕುಮಾರ್ ಅವರು ಸಚಿವ ಭೈರತಿ ಸುರೇಶ್ ಅವರನ್ನು ಉದ್ದೇಶಿಸಿ, "ಏಳು ತಿಂಗಳಿಗೆ ಹುಟ್ಟಿದ್ದಕ್ಕೆ ಹೀಗೆ ಆಡುತ್ತಿದ್ದಾರೆ" ಎಂಬ ಅರ್ಥದಲ್ಲಿ ಲೇವಡಿ ಮಾಡಿದ್ದರು. ಈ ಹೇಳಿಕೆಯು ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಸ್ವತಃ ಆಡಳಿತ ಪಕ್ಷದ ಸದಸ್ಯರು ಮತ್ತು ಸಭಾಧ್ಯಕ್ಷರು ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಶಾಸಕ ಸುರೇಶ್ ಕುಮಾರ್ ಸದನದಲ್ಲಿ ತಮ್ಮ ಮಾತನ್ನು ವಾಪಸ್ ಪಡೆದಿದ್ದರು.

- 24 Jan 2026 1:48 PM IST
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯುವ ರಾಜ್ಯಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಿದ್ದತೆಗಳ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ. ರವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಕೈಗೊಂಡಿರುವ ಯೋಜನೆಗಳನ್ನು ವಿವರಿಸಿದರು.

- 24 Jan 2026 1:27 PM IST
ರಾಜ್ಯಕ್ಕೆ ಹರಿದು ಬರಲಿದೆ 13,070 ಕೋಟಿ ರೂ. ಬಂಡವಾಳ
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಮಾವೇಶವು, ವೈಮಾಂತರಿಕ್ಷ, ಆಹಾರ ಸಂಸ್ಕರಣೆ, ಡೇಟಾ ಕೇಂದ್ರ, ಡಿಜಿಟಲ್ ಮೂಲಸೌಲಭ್ಯ, ಶುದ್ಧ ಇಂಧನ, ಅತ್ಯಾಧುನಿಕ ತಯಾರಿಕೆ ಮತ್ತಿತರ ವಲಯಗಳಲ್ಲಿನ ಹೂಡಿಕೆ, ವಿಸ್ತರಣೆ ಮತ್ತು ಪಾಲುದಾರಿಕೆಗಳಲ್ಲಿ ಕರ್ನಾಟಕವು ಮುಂಬರುವ ದಿನಗಳಲ್ಲಿ ಭಾರಿ ಮುನ್ನಡೆ ಸಾಧಿಸಲು ಚಿಮ್ಮು ಹಲಗೆಯಾಗಿ ಪರಿಣಮಿಸಿದ್ದು, 13,070 ಕೋಟಿ ರೂ. ಹೂಡಿಕೆ ವಾಗ್ದಾನಕ್ಕೆ ಅಧಿಕೃತ ಮುದ್ರೆ ದೊರೆತಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆ, ಸಂಶೋಧನೆ, ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ತಾಣವನ್ನಾಗಿ ವಿಶ್ವದ ಗಮನ ಸೆಳೆಯುವಂತೆ ಮಾಡುವಲ್ಲಿ ಸತತ ಐದು ದಿನಗಳ ಕಾಲ ನಡೆಸಿದ 45ಕ್ಕೂ ಹೆಚ್ಚು ಸಭೆ, ಸಮಾಲೋಚನೆಗಳು ಫಲ ನೀಡಿವೆ ಎಂದರು.
- 24 Jan 2026 1:25 PM IST
ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರಿಡಲು ಸಿಎಂಗೆ ಉಗ್ರಪ್ಪ ಪತ್ರ
ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಾವಣೆ ಮಾಡಿದ ಹಿನ್ನಲೆ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಮಹಾತ್ಮ ಗಾಂಧಿ ಕಚೇರಿ ಎಂದು ಹೆಸರು ಇಡುವಂತೆ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಪತ್ರ ಬರೆದು ಮನವಿ ಮಾಡಿದ್ದಾರೆ.
- 24 Jan 2026 8:10 AM IST
ವಿಎಚ್‌ಪಿ ನಾಯಕನ ಮೇಲೆ ಹಲ್ಲೆ ಬೆನ್ನಲ್ಲೇ ಭುಗಿಲೆದ್ದ ಕೋಮು ಸಂಘರ್ಷ
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯುವ ಮುಖಂಡ ಸೋಹಲ್ ಠಾಕೂರ್ ಬುಂದೇಲಾ ಅವರ ಮೇಲೆ ನಡೆದ ಹಲ್ಲೆಯು ಭೀಕರ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಸ್ಥಳೀಯವಾಗಿ ವಿಎಚ್‌ಪಿ ಗೋ ಸೇವಾ ಪ್ರಕೋಷ್ಠದ ಮುಖ್ಯಸ್ಥರಾಗಿರುವ ಸೋಹಲ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಗುಂಪಿನ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ವಾಗ್ವಾದವು ಹಲ್ಲೆಯಲ್ಲಿ ಅಂತ್ಯಗೊಂಡು, ನಂತರ ಎರಡು ದಿನಗಳ ಕಾಲ ಪಟ್ಟಣದಲ್ಲಿ ವ್ಯಾಪಕ ವಿಧ್ವಂಸಕ ಕೃತ್ಯ, ಬೆಂಕಿ ಹಚ್ಚುವಿಕೆ ಮತ್ತು ಕಲ್ಲು ತೂರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಮೋಹನ್ ಯಾದವ್ ಅವರ ತವರು ಜಿಲ್ಲೆಯಲ್ಲೇ ಈ ಹಿಂಸಾಚಾರ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
- 24 Jan 2026 7:19 AM IST
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-0 ಮುನ್ನಡೆ
ಶುಕ್ರವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ (76) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (ಅಜೇಯ 82) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ತಂಡ 7 ವಿಕೆಟ್‌ಗಳ ಭವ್ಯ ಜಯ ದಾಖಲಿಸಿದೆ. 209 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಕೇವಲ 15.2 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಆರಂಭದಲ್ಲೇ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರೂ, ಎರಡು ವರ್ಷಗಳ ನಂತರ ತಂಡಕ್ಕೆ ಮರಳಿದ ಕಿಶನ್ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಕೇವಲ 32 ಎಸೆತಗಳಲ್ಲಿ ಅಬ್ಬರಿಸಿದರೆ, ಸೂರ್ಯಕುಮಾರ್ ತಮ್ಮ ಫಾರ್ಮ್‌ಗೆ ಮರಳುವ ಮೂಲಕ ಕೇವಲ 37 ಎಸೆತಗಳಲ್ಲಿ ಪಂದ್ಯವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಕೊನೆಯಲ್ಲಿ ಶಿವಂ ದುಬೆ (ಅಜೇಯ 36) ಸಾಥ್ ನೀಡಿದರು. ಕಿಶನ್ ಅವರ ಈ ಅಮೋಘ ಪ್ರದರ್ಶನವು ವಿಶ್ವಕಪ್ ಮುನ್ನ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆಯಲ್ಲದೆ, ಕಳಪೆ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಅವರ ಸ್ಥಾನಕ್ಕೆ ಕಂಟಕವಾಗುವ ಮುನ್ಸೂಚನೆ ನೀಡಿದೆ.

