
Jan 21 news LIVE:ಡೊನಾಲ್ಡ್ ಟ್ರಂಪ್‌ರ 'ಬೋರ್ಡ್ ಆಫ್ ಪೀಸ್' ಸೇರಿದ ನೆತನ್ಯಾಹು
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಬುಧವಾರ, ಜನವರಿ 21, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 21 Jan 2026 2:46 PM IST
ಡೊನಾಲ್ಡ್ ಟ್ರಂಪ್‌ರ 'ಬೋರ್ಡ್ ಆಫ್ ಪೀಸ್' ಸೇರಿದ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ "ಬೋರ್ಡ್ ಆಫ್ ಪೀಸ್" ಸೇರಲು ಒಪ್ಪಿಗೆ ನೀಡಿದ್ದಾರೆ. ಆರಂಭದಲ್ಲಿ ಈ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಇಸ್ರೇಲ್‌ನ ಪ್ರಾದೇಶಿಕ ಪ್ರತಿಸ್ಪರ್ಧಿ ಟರ್ಕಿಯನ್ನು ಸೇರಿಸಿಕೊಂಡಿದ್ದಕ್ಕೆ ನೆತನ್ಯಾಹು ಕಚೇರಿ ಆಕ್ಷೇಪ ವ್ಯಕ್ತಪಡಿಸಿತ್ತಾದರೂ, ಈಗ ಅಧಿಕೃತವಾಗಿ ಆಹ್ವಾನವನ್ನು ಸ್ವೀಕರಿಸಿದೆ. ಗಾಜಾ ಕದನ ವಿರಾಮ ಯೋಜನೆಯ ಮೇಲ್ವಿಚಾರಣೆಗಾಗಿ ರೂಪುಗೊಂಡ ಈ ಮಂಡಳಿಯು ಈಗ ಜಾಗತಿಕ ಸಂಘರ್ಷಗಳನ್ನು ಬಗೆಹರಿಸುವ 'ಪರ್ಯಾಯ ವಿಶ್ವಸಂಸ್ಥೆ'ಯ ಮಾದರಿಯಲ್ಲಿ ಬೆಳೆಯುತ್ತಿದೆ.
ಈ ಮಂಡಳಿಯ ಕುರಿತಾದ ಹೆಚ್ಚಿನ ವಿವರಗಳನ್ನು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (WEF) ಸಭೆಯಲ್ಲಿ ಟ್ರಂಪ್ ಅವರು ಗುರುವಾರ ಘೋಷಿಸುವ ನಿರೀಕ್ಷೆಯಿದೆ. ವಿಶೇಷವೆಂದರೆ, ಈ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು 1 ಬಿಲಿಯನ್ ಡಾಲರ್ ಕೊಡುಗೆ ನೀಡಬೇಕೆಂಬ ನಿಯಮವಿದ್ದು, ಈಗಾಗಲೇ ಹಂಗೇರಿ, ಅರ್ಜೆಂಟೀನಾ ಮತ್ತು ವಿಯೆಟ್ನಾಂ ಸೇರಿದಂತೆ ಹಲವು ದೇಶಗಳು ಇದನ್ನು ಸೇರಲು ಮುಂದೆ ಬಂದಿವೆ.
- 21 Jan 2026 2:39 PM IST
22 ಜನರನ್ನು ಬಲಿಪಡೆದ ಒಂಟಿ ಸಲಗ- ತುರ್ತು ಪರಿಸ್ಥಿತಿ ಘೋಷಣೆ
ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಕಾಡಾನೆಯೊಂದು ಭೀಕರ ದಾಳಿ ನಡೆಸುತ್ತಿದ್ದು, ರಾಜ್ಯ ಸರ್ಕಾರವು ಆ ಪ್ರದೇಶದಲ್ಲಿ " ತುರ್ತು ಪರಿಸ್ಥಿತಿ" ಘೋಷಿಸಿದೆ. ತನ್ನ ಹಿಂಡಿನಿಂದ ಬೇರ್ಪಟ್ಟ ಈ ಆನೆಯು ವಿಪರೀತ ಆಕ್ರಮಣಕಾರಿಯಾಗಿದ್ದು, ಇಲ್ಲಿಯವರೆಗೆ ಕನಿಷ್ಠ 22 ಜನರನ್ನು ಬಲಿಪಡೆದಿದೆ. ದಿನಕ್ಕೆ ಸುಮಾರು 30 ಕಿಲೋಮೀಟರ್ ದೂರ ಕ್ರಮಿಸುತ್ತಿರುವ ಈ ಆನೆಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆನೆಯನ್ನು ಸೆರೆಹಿಡಿಯಲು ಈಗಾಗಲೇ ಮೂರು ಬಾರಿ ಅರಿವಳಿಕೆ ಮದ್ದು ನೀಡುವ ಪ್ರಯತ್ನ ವಿಫಲವಾಗಿದೆ.
- 21 Jan 2026 2:02 PM IST
ಪ್ರಯಾಗ್‌ರಾಜ್‌ನಲ್ಲಿ ತರಬೇತಿ ವಿಮಾನ ಪತನ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕೆಪಿ ಕಾಲೇಜು ಸಮೀಪ ಬುಧವಾರದಂದು ತರಬೇತಿ ವಿಮಾನವೊಂದು ಪತನಗೊಂಡಿದೆ. ಹಾರಾಟದ ವೇಳೆ ವಿಮಾನವು ಹಠಾತ್ತಾಗಿ ಸಮತೋಲನ ಕಳೆದುಕೊಂಡಿದ್ದೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಧಾವಿಸಿದ್ದು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ. ವಿಮಾನ ಪತನಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಅದೃಷ್ಟವಶಾತ್ ಪ್ರಾಣಾಪಾಯದ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ.
- 21 Jan 2026 1:59 PM IST
"ನನ್ನ ಹತ್ಯೆಗೆ ಯತ್ನಿಸಿದರೆ ಇರಾನ್ ಭೂಪಟದಲ್ಲೇ ಇರಲ್ಲ"- ಟ್ರಂಪ್ ಎಚ್ಚರಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ ತಾರಕಕ್ಕೇರಿದ್ದು, ಉಭಯ ದೇಶಗಳು ಪರಸ್ಪರ ಭೀಕರ ಎಚ್ಚರಿಕೆಗಳನ್ನು ನೀಡಿವೆ. ಮಂಗಳವಾರ (ಜನವರಿ 20, 2026) ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಹತ್ಯೆಗೆ ಇರಾನ್ ಸಂಚು ರೂಪಿಸಿದರೆ ಆ ದೇಶವನ್ನೇ ಭೂಪಟದಿಂದ ಅಳಿಸಿ ಹಾಕುವುದಾಗಿ ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಅಬುಲ್ಫಜಲ್ ಶೆಕರ್ಚಿ ಪ್ರತಿಕ್ರಿಯಿಸಿ, "ನಮ್ಮ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಿರುದ್ಧ ಯಾವುದೇ ಆಕ್ರಮಣಕಾರಿ ಕ್ರಮ ಕೈಗೊಂಡರೆ, ಅಮೆರಿಕದ ಕೈಗಳನ್ನು ಕತ್ತರಿಸುವುದಲ್ಲದೆ ಅವರ ಇಡೀ ಜಗತ್ತಿಗೇ ಬೆಂಕಿ ಹಚ್ಚುತ್ತೇವೆ" ಎಂದು ಗುಡುಗಿದ್ದಾರೆ. ಖಮೇನಿ ಅವರ 40 ವರ್ಷಗಳ ಆಡಳಿತ ಅಂತ್ಯವಾಗಬೇಕೆಂದು ಟ್ರಂಪ್ ಇತ್ತೀಚೆಗೆ ಕರೆ ನೀಡಿದ್ದ ಬೆನ್ನಲ್ಲೇ ಈ ಮಾತಿನ ಚಕಮಕಿ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದೆ.
- 21 Jan 2026 1:53 PM IST
ನಾಳೆ ಬಿಜೆಪಿ-ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ಸಭೆ!
ವಿಧಾನಸಭೆಯಲ್ಲಿ VBG RAM G ವಿಷಯವನ್ನು ಪ್ರಸ್ತಾಪಿಸುವ ಮೂಲಕ ತೇಜೋವಧೆ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಪ್ರಬಲ ತಿರುಗೇಟು ನೀಡಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಬಿಜೆಪಿ-ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಶೇಷ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸದನದಲ್ಲಿ ಸರ್ಕಾರದ ಆರೋಪಗಳನ್ನು ಸಮರ್ಥವಾಗಿ ಎದುರಿಸುವುದು ಹೇಗೆ ಮತ್ತು ಕಾಂಗ್ರೆಸ್ ವಿರುದ್ಧ ಯಾವ ರೀತಿಯ ಹೋರಾಟದ ತಂತ್ರ ರೂಪಿಸಬೇಕು ಎಂಬ ಬಗ್ಗೆ ಶಾಸಕರಿಗೆ ಕೇಂದ್ರ ಸಚಿವರು ಮಾರ್ಗದರ್ಶನ ನೀಡಲಿದ್ದು, ನಾಳೆಯ ಸಭೆಯಲ್ಲಿ ಮೈತ್ರಿಕೂಟದ ಮುಂದಿನ ನಿರ್ಣಾಯಕ ಹೆಜ್ಜೆಗಳು ತೀರ್ಮಾನವಾಗಲಿವೆ.
- 21 Jan 2026 1:48 PM IST
'ನಕಲಿ' ಪಿಜ್ಜಾ ಹಟ್ ಮಳಿಗೆ ಉದ್ಘಾಟನೆ- ಮುಜುಗರಕ್ಕಿಡಾದ ಪಾಕ್ ರಕ್ಷಣಾ ಸಚಿವ
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಯಾಲ್‌ಕೋಟ್‌ನ ಕಂಟೋನ್ಮೆಂಟ್ ಪ್ರದೇಶದಲ್ಲಿ "ಪಿಜ್ಜಾ ಹಟ್" ಮಳಿಗೆಯನ್ನು ಅತ್ಯಂತ ಸಡಗರದಿಂದ ಉದ್ಘಾಟಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಂಪು ಕಾರ್ಪೆಟ್ ಹಾಸಿ, ಅದ್ಧೂರಿ ಹೂವಿನ ಅಲಂಕಾರದೊಂದಿಗೆ ನಡೆದ ಈ ಉದ್ಘಾಟನಾ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಅಮೆರಿಕ ಮೂಲದ ಪಿಜ್ಜಾ ಹಟ್ ಸಂಸ್ಥೆಯು ಸ್ಪಷ್ಟನೆಯೊಂದನ್ನು ನೀಡಿದೆ.
ಈ ಮಳಿಗೆಯು "ಅನಧಿಕೃತ ಮತ್ತು ವಂಚನೆಯಿಂದ ಕೂಡಿದೆ" ಎಂದು ತಿಳಿಸಿರುವ ಸಂಸ್ಥೆಯು, ಪಿಜ್ಜಾ ಹಟ್ ಹೆಸರನ್ನು ಅಕ್ರಮವಾಗಿ ಬಳಸಲಾಗುತ್ತಿದ್ದು, ಸಿಯಾಲ್‌ಕೋಟ್‌ನ ಈ ಸ್ಥಳವು ತನ್ನ ಅಧಿಕೃತ ಮಳಿಗೆಗಳ ಪಟ್ಟಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಘಟನೆಯು ಸಚಿವರ ಪಾಲಿಗೆ ಭಾರಿ ಮುಜುಗರ ಉಂಟುಮಾಡಿದ್ದು, ಉದ್ಯಮದ ಬ್ರ್ಯಾಂಡಿಂಗ್ ದುರುಪಯೋಗದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
- 21 Jan 2026 7:50 AM IST
ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿ ವ್ಯಾನ್ಸ್ ದಂಪತಿ
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (41) ಮತ್ತು ಅವರ ಪತ್ನಿ ಭಾರತೀಯ ಮೂಲದ ಉಷಾ ವ್ಯಾನ್ಸ್ (40) ಮಂಗಳವಾರ (ಜನವರಿ 20) ಸಾಮಾಜಿಕ ಜಾಲತಾಣದ ಮೂಲಕ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜುಲೈ ಅಂತ್ಯದ ವೇಳೆಗೆ ದಂಪತಿಗಳು ಗಂಡು ಮಗುವನ್ನು ಸ್ವಾಗತಿಸಲಿದ್ದಾರೆ. ಈ ಹೊಸ ಅತಿಥಿಯ ಆಗಮನದೊಂದಿಗೆ ವ್ಯಾನ್ಸ್ ಕುಟುಂಬದ ಮಕ್ಕಳ ಸಂಖ್ಯೆ ನಾಲ್ಕಕ್ಕೆ ಏರಲಿದೆ. ಪ್ರಸ್ತುತ ಈ ದಂಪತಿಗೆ ಇವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.
- 21 Jan 2026 7:24 AM IST
ನಟ ಅಕ್ಷಯ್ ಕುಮಾರ್ ಮರ್ಸಿಡಿಸ್ ಚಾಲಕನ ಅತಿವೇಗಕ್ಕೆ ಆಟೋ ಪಲ್ಟಿ- ಚಾಲಕ ಅರೆಸ್ಟ್!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ವಿದೇಶಿ ಪ್ರವಾಸ ಮುಗಿಸಿ ಮುಂಬೈಗೆ ಮರಳಿದ ಕೆಲವೇ ಗಂಟೆಗಳಲ್ಲಿ ಅವರ ಭದ್ರತಾ ವಾಹನವು ಜುಹೂನಲ್ಲಿ ಭೀಕರ ಸರಣಿ ಅಪಘಾತಕ್ಕೀಡಾಗಿದೆ. ಅತಿ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಅಕ್ಷಯ್ ಕುಮಾರ್ ಅವರ ಭದ್ರತಾ ಪಡೆಯ ಇನ್ನೋವಾ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಇನ್ನೋವಾ ಕಾರು ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಮತ್ತು ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜುಹೂ ಪೊಲೀಸರು ಅಜಾಗರೂಕ ಚಾಲನೆಯ ಆರೋಪದ ಮೇಲೆ ಮರ್ಸಿಡಿಸ್ ಚಾಲಕ ರಾಧೇಶ್ಯಾಮ್ ರೈ ಎಂಬಾತನನ್ನು ಬಂಧಿಸಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅದೃಷ್ಟವಶಾತ್ ನಟ ಅಕ್ಷಯ್ ಕುಮಾರ್ ಅಪಾಯದಿಂದ ಪಾರಾಗಿದ್ದು, ಈವರೆಗೆ ಘಟನೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
- 21 Jan 2026 7:18 AM IST
ಜವರಾಯನ ಅಟ್ಟಹಾಸ: ಕುರಿ ವ್ಯಾಪಾರ ಮುಗಿಸಿ ಮರಳುತ್ತಿದ್ದ ಐವರು ಬಲಿ!
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐದು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಟಂಟಂ ವಾಹನ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ತೀವ್ರತೆಗೆ ಈ ಸಾವು-ನೋವು ಸಂಭವಿಸಿದೆ. ಮೃತರೆಲ್ಲರೂ ಆಂಧ್ರಪ್ರದೇಶದ ಪದಲಕುಂಟ ಮದರಿ ಗ್ರಾಮದ ಕುರಿ ವ್ಯಾಪಾರಿಗಳಾಗಿದ್ದು, ಸಿಂಧನೂರಿನಲ್ಲಿ ಕುರಿ ವ್ಯಾಪಾರ ಮುಗಿಸಿ ತಮ್ಮೂರಿಗೆ ವಾಪಸ್ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
- 21 Jan 2026 7:14 AM IST
ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತಿ ಪೊಲೀಸರ ವಶಕ್ಕೆ
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಮನೆಗಳಿಗೆ ನುಗ್ಗಿ ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕದಿಯುತ್ತಿದ್ದ ವಿಕೃತಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಸೈಕೋ ಕಿಲರ್ ಉಮೇಶ್ ರೆಡ್ಡಿಯನ್ನು ನೆನಪಿಸುವಂತೆ ವರ್ತಿಸುತ್ತಿದ್ದ ಈ ಅಸಾಮಿ, ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ವಿಕೃತ ಆನಂದ ಅನುಭವಿಸುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ಈ 'ಜ್ಯೂನಿಯರ್ ಉಮೇಶ್ ರೆಡ್ಡಿ' ಖ್ಯಾತಿಯ ವಿಕೃತಿಯನ್ನು ಅರೆಸ್ಟ್ ಮಾಡುವ ಮೂಲಕ ಸ್ಥಳೀಯ ಮಹಿಳೆಯರ ಆತಂಕವನ್ನು ದೂರ ಮಾಡಿದ್ದಾರೆ.

