
ಬಾನು ಮುಷ್ತಾಕ್ ದರಸಾ ಮಹೋತ್ಸವಕ್ಕೆ ಚಾಮುಂಡಿ ದೇವಿಗೆ ಪುಪ್ಪಾರ್ಚನೆ ಮಾಡಿ ಉದ್ಘಾಟನೆ ಮಾಡಿದ್ದಾರೆ.
ಮೈಸೂರು ದಸರಾ| ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್
ಸೋಮವಾರ ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ಈ ಭವ್ಯ ಉತ್ಸವಕ್ಕೆ ಅಂತರರಾಷ್ಟ್ರೀಯ 'ಬುಕರ್' ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಬಾನು ಮುಷ್ತಾಕ್ ಅವರು ಚಾಲನೆ ನೀಡಲಿದ್ದು, ಈ ಮೂಲಕ 11 ದಿನಗಳ ಸಂಭ್ರಮ ಗರಿಗೆದರಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವುದರೊಂದಿಗೆ ದಸರಾಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಲಿದೆ.
ಸೋಮವಾರ ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಲವಾರು ಗಣ್ಯರು, ಜನಪ್ರತಿನಿಧಿಗಳು ಸಾಕ್ಷಿಯಾಗಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಘಾಟನೆಯ ನಂತರ, ಮೈಸೂರು ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯವಾದ 11 ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಸಾಂಸ್ಕೃತಿಕ ನಗರಿ ಹಬ್ಬದ ಕಳೆಯನ್ನು ಪಡೆದುಕೊಳ್ಳಲಿದೆ.
ಬಿಗಿ ಬಂದೋಬಸ್ತ್
ಈ ಬಾರಿಯ ದಸರಾ ಉದ್ಘಾಟಕಿಯ ಆಯ್ಕೆಯು ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ದಸರಾ ಉದ್ಘಾಟನೆಗೆ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರನ್ನು ಆಹ್ವಾನಿಸಿರುವುದು ಇದೇ ಮೊದಲು. ಈ ಆಯ್ಕೆಯನ್ನು ಬಿಜೆಪಿ ಮತ್ತು ಕೆಲವು ಹಿಂದುತ್ವಪರ ಸಂಘಟನೆಗಳು ವಿರೋಧಿಸಿದ್ದವು. ಮಾಜಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿ ಆಯ್ಕೆಯನ್ನು ಪ್ರಶ್ನಿಸಿದ್ದರು. ಆದರೆ, ಈ ಅರ್ಜಿಗಳನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಸರ್ಕಾರದ ಆಯ್ಕೆಯನ್ನು ಎತ್ತಿಹಿಡಿದಿವೆ. ಈ ವಿವಾದದ ಹಿನ್ನೆಲೆಯಲ್ಲಿ, ಉದ್ಘಾಟನಾ ಸಮಾರಂಭಕ್ಕೆ ಚಾಮುಂಡಿ ಬೆಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಖಾಸಗಿ ದರ್ಬಾರ್ ಆರಂಭ
ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಕೂಡ ಸೋಮವಾರದಿಂದಲೇ ಆರಂಭಗೊಳ್ಳಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನವನ್ನು ಏರಿ ತಮ್ಮ 11ನೇ ವರ್ಷದ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಶರನ್ನವರಾತ್ರಿಯ ಅಂಗವಾಗಿ ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನೆರವೇರಲಿವೆ. ಗತಕಾಲದ ವೈಭವವನ್ನು ನೆನಪಿಸುವ ಈ ಖಾಸಗಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.
ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು (ಜಂಬೂಸವಾರಿ) ಈ ಬಾರಿ ಗಾಂಧಿ ಜಯಂತಿಯ ದಿನವಾದ ಅಕ್ಟೋಬರ್ 2ರಂದು ನಡೆಯಲಿದೆ. ಅಂದು ಮಧ್ಯಾಹ್ನ 1 ರಿಂದ 1.18ರೊಳಗೆ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಂಜೆ 4.42 ರಿಂದ 5.06ರ ಶುಭ ಲಗ್ನದಲ್ಲಿ, 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವುದರೊಂದಿಗೆ ವಿಶ್ವವಿಖ್ಯಾತ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ವೈಮಾನಿಕ ಪ್ರದರ್ಶನ ವಿಶೇಷ
ಸೆ.27ರಂದು ಸಂಜೆ 4 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಆಕರ್ಷಕ ವೈಮಾನಿಕ ಪ್ರದರ್ಶನ ಇರಲಿದೆ. ಸೆ.28 ಹಾಗೂ 29ರಂದು ಸಂಜೆ 6 ಗಂಟೆಗೆ ಇದೇ ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ.
ಅರಮನೆ ಹಾಗೂ ಬನ್ನಿಮಂಟಪ ಮೈದಾನದಲ್ಲಿ ವೀಕ್ಷಕರಿಗೆ ಟಿಕೆಟ್ ಹಾಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ. ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಟಿಕೆಟ್ ಪಡೆಯಲು ಇಚ್ಚಿಸುವವರು www.mysoredasara.gov.in ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು.
2,300 ಬಸ್‌ಗಳ ಕಾರ್ಯಾಚರಣೆ
ಮೈಸೂರು ದಸರಾ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ 2,300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಸೆ.26, 27 ಹಾಗೂ 30ರಂದು ಬೆಂಗಳೂರಿನ ಕೆಂಪೇಗೌಡ, ಮೈಸೂರು ರಸ್ತೆ ಹಾಗೂ ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಭಾಗಗಳಿಗೆ ಬಸ್‌ಗಳು ಸಂಚರಿಸಲಿವೆ. ಬೆಂಗಳೂರಿನಿಂದ ಮೈಸೂರಿಗೆ ಸೀಮಿತವಾಗಿ 260 ಬಸ್‌ಗಳು ಸಂಚರಿಸಲಿವೆ. 350 ಬಸ್‌ಗಳು ಮೈಸೂರು ಸುತ್ತಮುತ್ತ ಸಂಚರಿಸಲಿವೆ.
ಇದಲ್ಲದೇ ದಸರಾ ಪ್ರಯುಕ್ತ ಪ್ರವಾಸ ಕೈಗೊಂಡಿರುವವರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ರಾಯಚೂರು ಸೇರಿದಂತೆ ಪ್ರಮುಖ ನಗರಗಳಿಗೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಶಿರಡಿ, ಪುಣೆ, ಎರ್ನಾಕುಲಂ ಮೊದಲಾದ ಅಂತರರಾಜ್ಯ ತಾಣಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
Live Updates
- 22 Sept 2025 11:32 AM IST
ಸಂಸ್ಕೃತಿ ದ್ವೇಷಕ್ಕೆ ಜಾಗವಲ್ಲ, ಪ್ರೀತಿಯನ್ನು ಹರಡುವ ಗುರಿ ಹೊಂದಿದೆ: ಬಾನು ಮುಷ್ತಾಕ್
ಮೈಸೂರು ದಸರಾ ಶಾಂತಿಯ ಹಬ್ಬವಾಗಿದ್ದು, ಇದು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ ಎಂದು ಬಾನು ಮುಷ್ತಾಕ್ ತಿಳಿಸಿದರು.
ಸಂಸ್ಕೃತಿ ಎಂದರೆ ಹೃದಯಗಳನ್ನು ಒಟ್ಟುಗೂಡಿಸುವ ಸೇತುವೆ, ಅದು ದ್ವೇಷವನ್ನು ಬೆಳೆಸುವುದಲ್ಲ, ಪ್ರೀತಿಯನ್ನು ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆಗಳು ಮತ್ತು ಜೀವನ ಪಾಠಗಳು ಯಾವತ್ತೂ ಯಾವುದೇ ಗಡಿಯನ್ನು ದಾಟಲಿಲ್ಲ. ಅವು ಯಾವಾಗಲೂ ಪ್ರಾಣಿ ಮತ್ತು ಮನುಷ್ಯರನ್ನು ನೋಯಿಸದ ಜೀವಪರ ಮಾನವೀಯ ದರ್ಶನವನ್ನು ಬೆಳೆಸಿವೆ. ಈ ನೆಲದ ಸಂಸ್ಕೃತಿ ನನಗೆ ಕಲಿಸಿರುವ ಪಾಠ ಅಂದರೆ ಎಲ್ಲರನ್ನು ಒಳಗೊಳ್ಳುವ ಮನಸ್ಸು ಮತ್ತು ಎಲ್ಲರ ಬದುಕನ್ನು ಗೌರವಿಸುವ ಹೃದಯ. ಇಂದು ಇಡೀ ಜಗತ್ತು ಯುದ್ಧದ ಹಾದಿಯಲ್ಲಿ ನಡೆಯುತ್ತಿರುವಾಗ, ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗುತ್ತಿರುವಾಗ, ಮೈಸೂರು ದಸರಾ ಶಾಂತಿಯ ಹಬ್ಬ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಈ ಸಂದೇಶವು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ಬಾನು ಮುಷ್ತಾಕ್ ಆಶಿಸಿದರು.
- 22 Sept 2025 11:11 AM IST
ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯಲ್ಲಿದ್ದ ಮುಸ್ಲಿಂ ಸೈನಿಕರು: ಭಾನು ಮುಷ್ತಾಕ್
ತಮ್ಮ ಮಾವ ಸಿಪಾಯಿ ಮಹಮ್ಮದ್ ಗೌಸ್ ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು. ಅವರು ಮಾತ್ರವಲ್ಲದೆ, ಆ ಪಡೆದಲ್ಲಿ ಅನೇಕ ಮುಸ್ಲಿಂ ಅಂಗರಕ್ಷಕರು ಸೇವೆ ಸಲ್ಲಿಸುತ್ತಿದ್ದರು. ಜಯಚಾಮರಾಜ ಒಡೆಯರ್ ಅವರು ಧಾರ್ಮಿಕ ಭೇದವಿಲ್ಲದೆ, ಮುಸ್ಲಿಂ ಸೈನಿಕರ ಮೇಲೂ ಸಂಪೂರ್ಣ ನಂಬಿಕೆ ಇಟ್ಟು ಅವರನ್ನು ಅಂಗರಕ್ಷಕರಾಗಿ ನೇಮಕ ಮಾಡಿದ್ದರು. ಇದು ನನಗೆ ಹೆಮ್ಮೆ ತಂದಿದೆ ಎಂದು ಬಾನು ಮುಷ್ತಾಕ್ ತಮ್ಮ ದಸರಾ ಉದ್ಘಾಟನಾ ಭಾಷಣೆಯಲ್ಲಿ ತಿಳಿಸಿದರು.
- 22 Sept 2025 10:52 AM IST
ಟೀಕೆಗಳ ನಡುವೆಯೂ ಚಾಮುಂಡಿ ದೇವಿ ನನ್ನನ್ನು ಕರೆಸಿಕೊಂಡಿದ್ದಾಳೆ; ಬಾನು ಮುಷ್ತಾಕ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಉದ್ಘಾಟನೆಯಾಗಿದೆ. ಹಲವು ಏರುಪೇರು, ಚರ್ಚೆ, ಟೀಕೆಗಳ ನಡುವೆಯೂ ತಾಯಿ ಚಾಮುಂಡೇಶ್ವರಿ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ದಸರಾ ಉದ್ಘಾಟನೆಯು ನನ್ನ ಜೀವನದ ಅತ್ಯಂತ ಗೌರವದ ಗಳಿಕೆಯಾಗಿದೆ.
ಮೈಸೂರು ರಾಜಮನೆತನದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಈ ದಸರಾ ಉತ್ಸವವು, ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಕನ್ನಡ ಸಂಸ್ಕೃತಿಯ ಪ್ರತೀಕವೂ ಆಗಿದೆ. ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವವಾಗಿ, ಎಲ್ಲರನ್ನು ಒಗ್ಗೂಡಿಸುವ ಹಬ್ಬವಾಗಿ ದಸರಾ ಗುರುತಿಸಿಕೊಂಡಿದೆ ಎಂದು ಬಾನು ಮುಷ್ತಾಕ್ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
- 22 Sept 2025 10:31 AM IST
ನಾಡದೇವಿ ಚಾಮುಂಡಿಗೆ ಪುಪ್ಪಾರ್ಚನೆ ಮೂಲಕ ಮೈಸೂರು ದಸರಾಕ್ಕೆ ಚಾಲನೆ ನೀಡಿದ ಬಾನು ಮುಷ್ತಾಕ್
ನಾಡಹಬ್ಬ ದಸರಾವನ್ನು ಸೋಮವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಬರಹಗಾರ್ತಿ ಬಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಮತ್ತು ಸರ್ಕಾರದ ಇತರ ಗಣ್ಯರ ಸಮ್ಮುಖದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಕ್ಕೆ ಚಾಲನೆ ನೀಡಿದರು.ಇಂದಿನಿಂದ ಅಕ್ಟೋಬರ್ 2 ರವರೆಗೆ 11 ದಿನಗಳ ಕಾಲ ನಾಡಹಬ್ಬ ನಡೆಯಲಿದೆ.
- 22 Sept 2025 10:16 AM IST
ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವ ವಿವಾದದ ಹಿನ್ನೆಲೆಯಲ್ಲಿ, ಉದ್ಘಾಟನಾ ಸಮಾರಂಭಕ್ಕೆ ಚಾಮುಂಡಿ ಬೆಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.