
Bengaluru Bandh | ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಪ್ರತಿಭಟನೆ
Bengaluru Bandh ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದ್ದು, ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಕರ್ನಾಟಕ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು ಸೇರಿದಂತೆ ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ಬೆಳಗಾವಿ, ಬೆಂಗಳೂರು ಮಹಾನಗರ ಸೇರಿದಂತೆ ಬಹುತೇಕ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಾವಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಕೆಲವು ಕಡೆ ಬೆಳಿಗ್ಗೆ ಕನ್ನಡಪರ ಸಂಘಟನೆಗಳು ಬಂದ್ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಬೆಂಗಳೂರಿನ ರಾಜಾಜಿನಗರ ಮೆಟ್ರೊ ಸ್ಟೇಷನ್ ಮೇಲೆ ಮುತ್ತಿಗೆ ಹಾಕುವ ಪ್ರಯತ್ನಗಳು ನಡೆದಿವೆ.
ಘಟನೆಯ ಕೇಂದ್ರ ತಾಣ ಬೆಳಗಾವಿಯಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ದೊರಕಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ಬಸ್, ಆಟೋ ಓಡಾಟ ಎಂದಿನಂತೆಯೇ ಇದೆ. ಆದರೆ ಕೆಲವೊಂದು ಕಡೆ ಕನ್ನಡಪರ ಸಂಘಟನೆಗಳು ಮುಖಂಡರು ಪ್ರತಿಭಟನೆ ಆಯೋಜಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್, ಆಟೋ, ಓಲಾ, ಉಬರ್ ಸಂಚಾರ ನಡೆಸುತ್ತಿವೆ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಕಾರಣ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದ್ದು, ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ದಾವಣಗೆರೆಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲಿಯೂ ಜನಜೀವನ ಎಂದಿನಂತೆಯೇ ಆರಂಭವಾಗಿದೆ.
ಮಂಡ್ಯದಲ್ಲಿ ಪ್ರತಿಭಟನೆಯ ಕಾವು
ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ರಸ್ತೆಯಲ್ಲಿಯೇ ಮಲಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಶಿವರಾಮೇಗೌಡ ಬಣದಿಂದ ಈ ಪ್ರತಿಭಟನೆ ನಡೆದಿದೆ.
ಮೈಸೂರು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
Live Updates
- 22 March 2025 11:27 AM IST
ಕರ್ನಾಟಕ ಬಂದ್ ಬೆಂಬಲಿಸಿ, ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.