ಜಿಪ್‌ಲೈನ್ ದುರಂತ: ರಾಮನಗರ ರೆಸಾರ್ಟ್‌ನಲ್ಲಿ ನರ್ಸ್ ಸಾವು
x

ಜಿಪ್‌ಲೈನ್ ದುರಂತ: ರಾಮನಗರ ರೆಸಾರ್ಟ್‌ನಲ್ಲಿ ನರ್ಸ್ ಸಾವು


ಬೆಂಗಳೂರು ಬಳಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಕೇಬಲ್ ತುಂಡಾಗಿದ್ದರಿಂದ, ಮಹಿಳೆಯೊಬ್ಬರು ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ನರ್ಸ್ ಆಗಿರುವ ರಂಜಿತಾ ಎನ್.(35) ಮೃತರು. ರಾಮನಗರ ಜಿಲ್ಲೆಯ ಬೆಟ್ಟಹಳ್ಳಿಯಲ್ಲಿ ಭಾನುವಾರ (ಮೇ 19) ಘಟನೆ ನಡೆದಿದೆ. ಅತ್ತಿಬೆಲೆ ನಿವಾಸಿ ರಂಜಿತಾ ಅವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪಘಾತದ ನಂತರ ಆಕೆಯ ಸಹೋದ್ಯೋಗಿ ನೀಡಿದ ದೂರು ಆಧರಿಸಿ, ರೆಸಾರ್ಟ್ ಮಾಲೀಕ ಮತ್ತು ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವರದಿ ಪ್ರಕಾರ, ರಂಜಿತಾ ಮತ್ತು ಖಾಸಗಿ ಆಸ್ಪತ್ರೆಯ ಅವರ 17 ಸಹೋದ್ಯೋಗಿಗಳು ರಜೆಗಾಗಿ ರೆಸಾರ್ಟ್‌ಗೆ ಭೇಟಿ ನೀಡಿದ್ದರು. ಬೆಳಗಿನ ಉಪಾಹಾರದ ನಂತರ ರಂಜಿತಾ ಮತ್ತು ಇತರರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ರಂಜಿತಾ ಅರ್ಧ ದಾರಿಯಲ್ಲಿದ್ದಾಗ, 100 ಮೀ ಉದ್ದದ ಕೇಬಲ್‌ ತುಂಡಾಗಿ ನೆಲಕ್ಕೆ ಬಿತ್ತು. ರಂಜಿತಾ ಮತ್ತು ಇತರ ಮೂವರು ಉರುಳಿಬಿದ್ದರು. ರಂಜಿತಾ ಅವರನ್ನು ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಹಾರೋಹಳ್ಳಿ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಂಜಿತಾ ಅವರ ಸಹೋದ್ಯೋಗಿ ನಿರ್ಮಲ್ ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಯಲ್ಲದ ನರಹತ್ಯೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯ)ರಡಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಇಬ್ಬರು ಅಥವಾ ಮೂವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ರಂಜಿತಾಗೆ ಸುರಕ್ಷತಾ ಹೆಲ್ಮೆಟ್ ನೀಡಿರಲಿಲ್ಲ ಎಂದು ನಿರ್ಮಲ್‌ ದೂರಿನಲ್ಲಿ ತಿಳಿಸಿದ್ದಾರೆ.

Read More
Next Story