Zero development in constituencies, limited to session discussions; MLAs letter demanding no allowance
x

ಶಾಸಕ ಶರಣಗೌಡ ಕಂದಕೂರ್‌

ಅಭಿವೃದ್ಧಿಗೆ ಹಿನ್ನಡೆ; ಅಧಿವೇಶನದಲ್ಲಿ ಯಾವುದೇ ಭತ್ಯೆ ಪಡೆಯುವುದಿಲ್ಲ; ಶಾಸಕ ಶರಣಗೌಡ ಕಂದಕೂರ್

ಬೆಳಗಾವಿಯಲ್ಲಿ 25 ರಿಂದ 30 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವರ್ಷವೂ ನಡೆಸುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ್‌ ಆರೋಪಿಸಿದ್ದಾರೆ.


Click the Play button to hear this message in audio format

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಗುರುಮಿಠಕಲ್‌ ಶಾಸಕ ಶರಣಗೌಡ ಕಂದಕೂರ್, ಅಧಿವೇಶನದ ಅವಧಿಯಲ್ಲಿ ಸರ್ಕಾರದಿಂದ ನೀಡಲಾಗುವ ಯಾವುದೇ ಭತ್ಯೆ ಮತ್ತು ಸೌಲಭ್ಯಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಕುರಿತು ಅವರು ಮಂಗಳವಾರ (ನ.11) ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪ್ರತಿ ವರ್ಷ 25 ರಿಂದ 30 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆಯಾದರೂ, ಇದರಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶರಣಗೌಡ ಕಂದಕೂರ್ ತಮ್ಮ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಳೆದ ಅಧಿವೇಶನದಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸರ್ಕಾರ ತೆಗೆದುಕೊಂಡ ನಿರ್ಧಾರಗಳೇನು ಎಂಬುದನ್ನು ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ. ಕೇವಲ ಚರ್ಚೆಗಳಿಂದ ಜನರ ಕಲ್ಯಾಣ ಅಸಾಧ್ಯ. ಈ ಅಧಿವೇಶನಗಳು ಕಾಲಹರಣ ಮತ್ತು ಎರಡು ವಾರಗಳ ಪ್ರವಾಸದಂತೆ ಆಗುತ್ತಿವೆ," ಎಂದು ಅವರು ಆರೋಪಿಸಿದ್ದಾರೆ.

ಸೌಲಭ್ಯ ನಿರಾಕರಣೆ

ಕಳೆದ ವರ್ಷದಂತೆ ಈ ವರ್ಷವೂ ನಾನು ಕಲಾಪದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಆದರೆ, ಸರ್ಕಾರ ನನಗೆ ನೀಡುವ ಪ್ರಯಾಣ ಭತ್ಯೆ (ಟಿಎ), ದಿನಭತ್ಯೆ (ಡಿಎ) ಹಾಗೂ ವಸತಿ ಸೌಲಭ್ಯವನ್ನು ಪಡೆಯುವುದಿಲ್ಲ. ಅಷ್ಟೇ ಅಲ್ಲ, ಕಲಾಪದ ವೇಳೆ ನೀಡುವ ಚಹಾ, ಉಪಹಾರ ಮತ್ತು ಊಟವನ್ನೂ ಸ್ವೀಕರಿಸುವುದಿಲ್ಲ. ನಮಗೆ ಹೊರಗಿನಿಂದ ಆಹಾರ ತರಿಸಿಕೊಂಡು ತಿನ್ನಲು ಅವಕಾಶ ಮಾಡಿಕೊಡಬೇಕು," ಎಂದು ಅವರು ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ

ಸತತ ಮಳೆ ಮತ್ತು ಪ್ರವಾಹದಿಂದ ಲಕ್ಷಾಂತರ ರೈತರು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡಿದ್ದರೂ, ಸರ್ಕಾರ ಇದುವರೆಗೆ ಒಂದು ಪೈಸೆಯನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರಾಜ್ಯದ ರೈತರು, ಬಡವರು ಮತ್ತು ಕಾರ್ಮಿಕರು ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶಾಸಕರಾಗಿ ನಾವು ಅನುದಾನಕ್ಕಾಗಿ ಸರ್ಕಾರವನ್ನು ಕಾಡಿ-ಬೇಡಿ ಹೋಗುವುದೇ ಆಗಿದೆ. ಜನರ ಭರವಸೆಗಳು ಹುಸಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಅಧಿವೇಶನದ ವೇಳೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯದಿರಲು ನಾನು ದೃಢ ನಿರ್ಧಾರ ಮಾಡಿದ್ದೇನೆ," ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Read More
Next Story