Foot In Mouth Statement | ʼಕಾಲಾ ಕುಮಾರಸ್ವಾಮಿʼ ಹೇಳಿಕೆ: ಕ್ಷಮೆ ಕೋರಿದ ಜಮೀರ್ ಖಾನ್
ಪ್ರೀತಿಯಿಂದ ಅವರು ನನ್ನನ್ನು ʼಕುಳ್ಳʼ ಎಂದಾಗ ನಾನು ಪ್ರೀತಿಯಿಂದಲೇ ʼಕರಿಯಣ್ಣʼ ಎನ್ನುತ್ತಿದ್ದೆ. ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದಿದ್ದಾರೆ ಜಮೀರ್ ಖಾನ್.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮರದಲ್ಲಿ ಕಾಂಗ್ರೆಸ್ ಮುಖಂಡ, ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಗ್ಗೆ 'ಕಾಲಾ ಕುಮಾರಸ್ವಾಮಿ' ಎಂದು ಅವರ ಕಪ್ಪು ಬಣ್ಣದ ಬಗ್ಗೆ ನಾಲಿಗೆ ಹರಿಬಿಟ್ಟು ಜನಾಂಗೀಯ ನಿಂದನೆ ಮಾಡಿದ್ದು, ಇದೀಗ ಕ್ಷಮೆ ಕೋರಿದ್ದಾರೆ.
ಜಮೀರ್ ಹೇಳಿಕೆ ದೇಶಾದ್ಯಂತ ಚರ್ಚೆಯಾಗಿ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತ್ತು. ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ಸಂಬಂಧ ಸಮಜಾಯಿಷಿ ನೀಡಿ ಬಳಿಕ ಕ್ಷಮೆಯಾಚನೆ ಮಾಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಚಿವ ಜಮೀರ್ ಖಾನ್, "ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ, ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ," ಎಂದು ಸಮಜಾಯಿಷಿ ನೀಡಿದ್ದಾರೆ. "ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ," ಎಂದವರು ತಿಳಿಸಿದ್ದಾರೆ.
"ದೇವೇಗೌಡರ ಕುಟುಂಬ ಕೊಂಡುಕೊಳ್ಳುತ್ತೇನೆ," ಎಂಬ ಹೇಳಿಕೆ ಬಗ್ಗೆಯೂ ಸಮಜಾಯಿಷಿ ನೀಡಿದ ಜಮೀರ್, "ಯಾರಾದರೂ ಎಚ್.ಡಿ. ದೇವೇಗೌಡರ ಕುಟುಂಬ ಕೊಂಡುಕೊಳ್ಳಲು ಸಾಧ್ಯವಾ? ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ಉಲ್ಲೇಖಸಿ ನಾನು ಈ ರೀತಿ ಹೇಳಿದ್ದೇನೆ," ಎಂದು ಸ್ಪಷ್ಟನೆ ನೀಡಿದರು.
ಜಮೀರ್ ಹೇಳಿಕೆ ಏನು?
ಭಾನುವಾರ ರಾತ್ರಿ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಜಮೀರ್ ಅವರು ಮಾತನಾಡುತ್ತಾ, ತಮ್ಮ ಹಳೆಯ ಗೆಳೆಯ ಹಾಗೂ ಈಗ ರಾಜಕೀಯ ವಿರೋಧಿಯಾಗಿರುವ ಕುಮಾರಸ್ವಾಮಿ ಅವರ ವಿರುದ್ಧ ಟೀಕಾಸ್ತ್ರ ಎಸೆದು, “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕಪ್ಪು ಬಣ್ಣ ಹೊಂದಿರುವ ಕುಮಾರಸ್ವಾಮಿ) ಹೆಚ್ಚು ಡೇಂಜರ್" ಎಂದು ಉರ್ದುವಿನಲ್ಲಿ ಹೇಳಿಕೆ ನೀಡಿದ್ದರು. "ಯೋಗೇಶ್ವರ್ ಕಾಂಗ್ರೆಸ್ನಿಂದಲೇ ರಾಜಕೀಯ ಪ್ರಾರಂಭ ಮಾಡಿದ್ರು ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್ ಹೋಗಬೇಕು ಅಂದುಕೊಂಡಿದ್ದರೂ, ಅವರು "ಕಾಲಾ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್" ಅಂತ ಆ ಪಕ್ಷದ ಅಭ್ಯರ್ಥಿಯಾಗಲು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದರು. ಪ್ರಮುಖವಾಗಿ ಮುಸಲ್ಮಾನ ಮತದಾರರನ್ನು ಸೆಳೆಯಲು ವಸತಿ ಮತ್ತು ವಕ್ಸ್ ಸಚಿವರೂ ಆಗಿರುವ ಜಮೀರ್, ಹಿಂದೆ ಹಿಜಾಬ್ ವಿವಾದ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ ಹಿಜಾಬ್ ಬೇಡ ಬೇಡ ಅಂದಿದ್ದೆ, ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ,' ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.