ನಾಲಿಗೆ ಹರಿಬಿಟ್ಟ ಜಮೀರ್ ಖಾನ್ :ಕಾಂಗ್ರೆಸ್‌ಗೆ ಮುಜುಗರ ತಂದ ʼಕಾಲಾ ಕುಮಾರಸ್ವಾಮಿʼ ಹೇಳಿಕೆ
ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕೆಂಬ ಹಠತೊಟ್ಟಿರುವ ಡಿ.ಕೆ. ಶಿವಕುಮಾರ್ ಅವರ ತಂಡಕ್ಕೆ ಅವರ ಸಂಪುಟದ ಸಹೋದ್ಯೋಗಿ ಜಮೀರ್ ಮಾತು ಮುಗ್ಗಲ ಮುಳ್ಳಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷಕ್ಕೂ ತೀವ್ರ ಮುಜುಗರ ಸೃಷ್ಟಿಸಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮರದಲ್ಲಿ ಕಾಂಗ್ರೆಸ್ ಮುಖಂಡ, ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ನಾಲಿಗೆ ಹರಿಬಿಟ್ಟಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ʼಕಾಲಾ ಕುಮಾರಸ್ವಾಮಿʼ ಎಂದು ಕಪ್ಪು ಬಣ್ಣದವರೆಂದು ಜನಾಂಗೀಯ ನಿಂದನೆ ಮಾಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಖಾತೆ ಸಚಿವ @BZZameerAhmedK ಜನಾಂಗೀಯ ನಿಂದನೆ ಮಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ (10-11-2024) ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ "ಕಾಲಾ… pic.twitter.com/fPOGcbgBgX
ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಬ್ಬರ ನಡುವೆ ಮಾತಿನ ಸಮರದ ಅಬ್ಬರದ ನಡುವೆ ಈಗ ಜಮೀರ್ ಖಾನ್ ಅವರ ಎಲ್ಲೆ ತಪ್ಪಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕೆಂದೇ ಹಠತೊಟ್ಟಿರುವ ಡಿ.ಕೆ. ಶಿವಕುಮಾರ್ ಅವರ ತಂಡಕ್ಕೆ ಅವರ ಸಂಪುಟದ ಸಹೋದ್ಯೋಗಿ ಜಮೀರ್ ಮಾತು ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆ ಗೆದ್ದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೆರವು ಮಾಡಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಳಿಕ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಚನ್ನಪಟ್ಟಣದಲ್ಲಿ ಪ್ರಭಾವಿಯಾಗಿರುವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಒಂದು ರೀತಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಹಣಾಹಣಿಯಲ್ಲಿ ಯೋಗೇಶ್ವರ್ ಅವರ ಉಮೇದುವಾರಿಕೆ ಕಾಂಗ್ರೆಸ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಜಮೀರ್ ಹೇಳಿಕೆ ಏನು?
ಭಾನುವಾರ ರಾತ್ರಿ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಜಮೀರ್ ಅವರು ಮಾತನಾಡುತ್ತಾ, ತಮ್ಮ ಹಳೆಯ ಗೆಳೆಯ ಹಾಗೂ ಈಗ ರಾಜಕೀಯ ವಿರೋಧಿಯಾಗಿರುವ ಕುಮಾರಸ್ವಾಮಿ ಅವರ ವಿರುದ್ಧ ಟೀಕಾಸ್ತ್ರ ಎಸೆದು, “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕಪ್ಪು ಬಣ್ಣ ಹೊಂದಿರುವ ಕುಮಾರಸ್ವಾಮಿ) ಹೆಚ್ಚು ಡೇಂಜರ್” ಎಂದು ಉರ್ದುವಿನಲ್ಲಿ ಹೇಳಿಕೆಯಿತ್ತರು.
"ಯೋಗೇಶ್ವರ್ ಕಾಂಗ್ರೆಸ್‌ನಿಂದಲೇ ರಾಜಕೀಯ ಪ್ರಾರಂಭ ಮಾಡಿದ್ರು ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್ ಹೋಗಬೇಕು ಅಂದುಕೊಂಡಿದ್ದರೂ, ಅವರು "ಕಾಲಾ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್" ಅಂತ ಆ ಪಕ್ಷದ ಅಭ್ಯರ್ಥಿಯಾಗಲು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದರು.
ಪ್ರಮುಖವಾಗಿ ಮುಸಲ್ಮಾನ ಮತದಾರರನ್ನು ಸೆಳೆಯಲು ವಸತಿ ಮತ್ತು ವಕ್ಫ್ ಸಚಿವರೂ ಆಗಿರುವ ಜಮೀರ್, ಹಿಂದೆ ಹಿಜಾಬ್ ವಿವಾದ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ ಹಿಜಾಬ್ ಬೇಡ ಬೇಡ ಅಂದಿದ್ದೆ, ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ," ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಜೆಡಿಎಸ್ ಕೆಂಡಾಮಂಡಲ
ಜಮೀರ್ ಹೇಳಿಕೆ ಬಗ್ಗೆ ಜೆಡಿಎಸ್ ಕೆಂಡಾಮಂಡಲವಾಗಿದ್ದು, ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಖಾತೆ ಸಚಿವ ಜಮೀರ್ ಜನಾಂಗೀಯ ನಿಂದನೆ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಹೇಳಿದೆ.
ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು," ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ "ಕಾಲಾ ಕುಮಾರಸ್ವಾಮಿ" (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ. ಅಪರಾಧ," ಎಂದು ಖಂಡಿಸಿದೆ.
ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಕ್ಷ ಆಗ್ರಹಿಸಿದೆ. ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕೆ ನೈತಿಕತೆ ಉಳಿಸಿಕೊಂಡಿದ್ದರೆ ಮೊದಲು ಈ ಜನಾಂಗೀಯ ದ್ವೇಷಿ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.