ಮೋದಿ ಪ್ರಧಾನಿಯಾಗಲು ನಾಲಾಯಕ್ ಎಂದು ಯುವ ಸಮೂಹ ತೀರ್ಮಾನಿಸಿದೆ: ಸಿದ್ದರಾಮಯ್ಯ
ಕೋಲಾರ: ʻʻಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್ ಅಂತ ದೇಶದ ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂತಹ ನಾಲಾಯಕ್ ಗೆ ಮತ ಹಾಕುತ್ತೀರಾ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೋಲಾರದ ಶಿಡ್ಳಘಟ್ಟದಲ್ಲಿ ನಡೆದ ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿನ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ʻʻನಿರುದ್ಯೋಗಿ ಯುವಕ/ ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿ ಪ್ರಧಾನಿಯೇ ಆಗಬೇಕಿತ್ತಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.
ʻʻವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಎಂದು ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ಮೋದಿ ಮಾತನ್ನು ನಂಬಿ ಯುವ ಸಮೂಹ ಮೋದಿಯವರಿಗೆ ಮತ ಹಾಕಿದ್ದರು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿದ ಮೇಲೆ ಕೆಲಸ ಕೊಡಿ ಎಂದು ಕೇಳಿದರೆ, "ಹೋಗಿ ಪಕೋಡ ಮಾರಾಟ ಮಾಡಿ" ಎಂದು ಹೇಳಿದ್ದಾರೆ. ಇದು ದೇಶದ ಯುವ ಸಮೂಹಕ್ಕೆ ಮಾಡಿದ ಮಹಾದ್ರೋಹ ಅಲ್ಲವೇ? ಮಹಾನ್ ನಂಬಿಕೆ ದ್ರೋಹ ಅಲ್ಲವೇ? ಪಕೋಡ ಮಾರೋದನ್ನು ಹೇಳಿಕೊಡೋಕೆ ಇವರು ಪ್ರಧಾನಿ ಆಗಬೇಕಿತ್ತಾ?ʼʼ ಎಂದು ಪ್ರಶ್ನಿಸಿದರು.
ʻʻಮೋದಿಯವರು ಪ್ರಧಾನಿಯಾಗಿ ನಾಲಾಯಕ್ ಎಂದು ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂತಹ ನಾಲಾಯಕ್ ಗೆ ಮತ ಹಾಕುತ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ರಲ್ಲಾ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ ಬಿಜೆಪಿಯವರಿಗೆ ಇದೆಯೇ?ʼʼ ಎಂದು ಪ್ರಶ್ನಿಸಿದರು.
ʻʻನಾಲಾಯಕ್ ಮೋದಿಯವರು ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?ʼʼ ಎಂದು ಸಾರ್ವಜನಿಕರಿಗೆ ಕೇಳಿದರು.
ʻʻನಾವು ನುಡಿದಂತೆ ನಡೆದಿದ್ದೇವೆ. ಪ್ರತಿ ಕುಟುಂಬಗಳ ಜೇಬಿಗೆ ಪ್ರತಿ ತಿಂಗಳು 4 ರಿಂದ 6 ಸಾವಿರ ರೂಪಾಯಿ ಹಾಕುತ್ತಿದ್ದೇವೆ. ನಾವು ನುಡಿದಂತೆ ನಡೆದು ಬಂದು ಓಟು ಕೇಳುತ್ತಿದ್ದೇವೆ. ನಮಗೆ ಮತ ನೀಡಿ. ನಿಮ್ಮ ಮತಕ್ಕೆ ಗೌರವ ಕೊಟ್ಟು ಅಭಿವೃದ್ಧಿಯ ಲಾಭ ನಿಮ್ಮ ಜೇಬಿಗೆ, ನಿಮ್ಮ ಖಾತೆಗೆ ಹಾಕುವ ಕೆಲಸವನ್ಮು ನಾವು ಮಾಡುತ್ತೇವೆʼʼ ಎಂದು ಘೋಷಿಸಿದರು.
ʻʻಹತ್ತು ವರ್ಷ ನಿಮಗೆ ಮೋದಿಯವರಿಂದ ಸಿಕ್ಕಿದ್ದು ರಾಶಿ ರಾಶಿ ಸುಳ್ಳುಗಳು ಮತ್ತು ನಂಬಿಕೆ ದ್ರೋಹ ಮಾತ್ರ. ಆದರೆ ಈ ಬಾರಿ ನಮಗೆ ಮತ ಕೊಟ್ಟು ನೋಡಿ. ವರ್ಷಕ್ಕೆ ಒಂದೂಕಾಲು ಲಕ್ಷ ರೂಪಾಯಿ ಮನೆ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತದೆ. ನಿರುದ್ಯೋಗಿ ಯುವಕ/ ಯುವತಿಯರಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ರೈತರು ಬೆಳೆದ ಬೆಳೆಗಳಿಗೆ ಖಚಿತವಾದ ಬೆಂಬಲ ಬೆಲೆ ಕೊಡುತ್ತೇವೆ. ಇಂತಹ 25 ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಘೋಷಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಪತ್ರಗಳು ನಿಮಗೆ ಬರುತ್ತವೆʼʼ ಎಂದು ಭರವಸೆ ನೀಡಿದರು.
ʻʻಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕುತ್ತೀರಾ ಅಥವಾ ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ ಎನ್ನುವುದನ್ನು ಯೋಚಿಸಿ ತೀರ್ಮಾನಿಸಿʼʼ ಎಂದು ಕರೆ ನೀಡಿದರು.