
ಸಾಂದರ್ಭಿಕ ಚಿತ್ರ
ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆ; ವಿಜಯಪುರ ಮೂಲದ ವ್ಯಕ್ತಿ ಸಾವು, ಸಂಚಾರದಲ್ಲಿ ವ್ಯತ್ಯಯ
ಈ ಘಟನೆಯಿಂದಾಗಿ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಕೆಲಕಾಲ ತೀವ್ರ ವ್ಯತ್ಯಯ ಉಂಟಾಗಿತ್ತು. ಸುರಕ್ಷತಾ ಕ್ರಮವಾಗಿ ರೈಲುಗಳ ಸಂಚಾರವನ್ನು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಸೀಮಿತಗೊಳಿಸಲಾಗಿತ್ತು.
ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಯುವಕನೊಬ್ಬ ದಿಢೀರ್ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕನನ್ನು ವಿಜಯಪುರ ಮೂಲದ ಶಾಂತನಗೌಡ ಪಾಟೀಲ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕೆಂಗೇರಿ ನಿಲ್ದಾಣದಲ್ಲಿ ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಂತೆ ಈತ ಹಳಿಗೆ ಹಾರಿದ್ದಾನೆ. ಪರಿಣಾಮವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಈ ಘಟನೆಯಿಂದಾಗಿ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಕೆಲಕಾಲ ತೀವ್ರ ವ್ಯತ್ಯಯ ಉಂಟಾಗಿತ್ತು. ಸುರಕ್ಷತಾ ಕ್ರಮವಾಗಿ ರೈಲುಗಳ ಸಂಚಾರವನ್ನು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಸೀಮಿತಗೊಳಿಸಲಾಗಿತ್ತು. ಇದರಿಂದ ಚಲ್ಲಘಟ್ಟ ಕಡೆಗೆ ತೆರಳುವ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು.
ಸಂಚಾರ ಪುನರಾರಂಭ
ಘಟನಾ ಸ್ಥಳ ಪರಿಶೀಲನೆ ಮತ್ತು ಮೃತದೇಹದ ತೆರವು ಕಾರ್ಯಾಚರಣೆಯ ಬಳಿಕ, ಬಿಎಂಆರ್‌ಸಿಎಲ್ (BMRCL) ಸಂಚಾರವನ್ನು ಪುನಃಸ್ಥಾಪಿಸಿದೆ. "ಜ್ಞಾನಭಾರತಿ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ಸೇವೆಯನ್ನು ಬೆಳಿಗ್ಗೆ 09:40 ರಿಂದ ಸಂಪೂರ್ಣವಾಗಿ ಪುನರಾರಂಭಿಸಲಾಗಿದೆ. ಪ್ರಸ್ತುತ ನೇರಳೆ ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚರಿಸುತ್ತಿವೆ," ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

