ಏರ್‌ ಪ್ರೆಶರ್ ಪೈಪ್‌ನಿಂದ ಗಾಳಿ: ಕರುಳು ಛಿದ್ರಗೊಂಡು ಯುವಕ ಸಾವು
x
ಮುರುಳಿ, ಬಂಧಿತ ಆರೋಪಿ

ಏರ್‌ ಪ್ರೆಶರ್ ಪೈಪ್‌ನಿಂದ ಗಾಳಿ: ಕರುಳು ಛಿದ್ರಗೊಂಡು ಯುವಕ ಸಾವು

ಸರ್ವೀಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್ ನ ಸ್ನೇಹಿತನಾಗಿದ್ದು, ಚಡ್ಡಿ ಧರಿಸಿ ಬಂದಿದ್ದ ಯೋಗೇಶನನ್ನು ನೋಡಿದ ಮುರುಳಿ, ತಮಾಷೆಗಾಗಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್ ಗಾಳಿ ಬಿಟ್ಟಿದ್ದಾನೆ.


ಬೆಂಗಳೂರು: ಗೆಳೆಯನ ತಮಾಷೆಗೆ ಯುವಕನೊಬ್ಬ ಕರುಳು ಸ್ಪೋಟಗೊಂಡು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರ್ ಸರ್ವೀಸ್ ಸೆಂಟರ್ ನಲ್ಲಿನ ಏರ್ ಪ್ರೆಶರ್ ಪೈಪ್ ಅನ್ನು ಯುವಕನೊಬ್ಬನ ಗುದದ್ವಾರಕ್ಕೆ ಇಟ್ಟು ಗಾಳಿ ಬಿಟ್ಟಿದ್ದು, ಗಾಳಿಯ ಒತ್ತಡಕ್ಕೆ ಕರುಳು ಸ್ಪೋಟಗೊಂಡು ಯುವಕ ಮೃತಪಟ್ಟಿದ್ದಾನೆ.

ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಮಾ. 25 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯೋಗೇಶ್ (24) ಮೃತ ಯುವಕ ಎಂದು ಗುರುತಿಸಲಾಗಿದ್ದು, ಆರೋಪಿ ಮುರುಳಿ ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ಮೂಲದ ಯೋಗೇಶ್, ಬೆಂಗಳೂರಿನ ಥಣಿಸಂದ್ರದಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಫಾರ್ಮಾ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮಾ.25ರ ಸಂಜೆ ಥಣಿಸಂದ್ರದ ಸಿಎನ್ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್ ಗೆ ಬೈಕ್ ಅನ್ನು ಸರ್ವೀಸ್ ಮಾಡಿಸಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ಸರ್ವೀಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್ ನ ಸ್ನೇಹಿತನಾಗಿದ್ದು, ಚಡ್ಡಿ ಧರಿಸಿ ಬಂದಿದ್ದ ಯೋಗೇಶನನ್ನು ನೋಡಿದ ಮುರುಳಿ, ತಮಾಷೆಗಾಗಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್ ಗಾಳಿ ಬಿಟ್ಟಿದ್ದಾನೆ. ತಕ್ಷಣ ಯೋಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ. ಗಾಳಿಯ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಸ್ಫೋಟಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿ ಮೋಜಿಗಾಗಿ ಯೋಗೇಶ್ ನ ಖಾಸಗಿ ಭಾಗಕ್ಕೆ ಕಂಪ್ರೆಸರ್ ಪೈಪ್ ಇಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಯೋಗೇಶ್ ಸಹೋದರಿಗೆ ಎಪ್ರಿಲ್ ತಿಂಗಳಲ್ಲಿ ಮದುವೆ ನಿಶ್ಚಯವಾಗಿದ್ದು, ಮದುವೆ ಮನೆಯಲ್ಲೀಗ ಸೂತಕ ಆವರಿಸಿದೆ.

ಕಳೆದ ಡಿಸೆಂಬರಿನಲ್ಲಿ ಇಂತಹದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿತ್ತು. ಮೋತಿಲಾಲ್ ಬಾಬುಲಾಲ್ ಸಾಹು ಎಂಬ ೧೬ ರ ಬಾಲಕನ ಗುದದ್ವಾರಕ್ಕೆ ಸಂಬಂಧಿ ಯುವಕನೊಬ್ಬ ಏರ್‌ ಕಂಪ್ರೆಸರ್‌ ಹಿಡಿದಿದ್ದರಿಂದ ಆಂತರಿಕ ಗಾಯಗಾಳಾಗಿ ಬಾಲಕ ಮೃತಪಟ್ಟಿದ್ದ.

Read More
Next Story