ಮಂಗಳೂರಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ  ಯುವತಿ ಪತ್ತೆ: ಸಾಮೂಹಿಕ ಅತ್ಯಾಚಾರ ಶಂಕೆ
x

ಪ್ರಾತಿನಿಧಿಕ ಚಿತ್ರ

ಮಂಗಳೂರಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಯುವತಿ ಪತ್ತೆ: ಸಾಮೂಹಿಕ ಅತ್ಯಾಚಾರ ಶಂಕೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ನಶೆಯ ಸ್ಥಿತಿಯಿಂದಾಗಿ ಮಾತನಾಡುತ್ತಿಲ್ಲ. ಯುವತಿಯ ಆರೋಗ್ಯ ಸ್ಥಿತಿಯನ್ನು ವೈದ್ಯರು ಗಮನಿಸುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಆಕೆಯಿಂದ ಹೇಳಿಕೆ ಪಡೆಯುವ ಸಾಧ್ಯತೆಗಳಿವೆ.


ಮಂಗಳೂರಿನ ಹೊರವಲಯದ ಕಲ್ಲಾಪು ಸಮೀಪದ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬಳು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ದೇಹದಾದ್ಯಂತ ಗಾಯದ ಗುರುತುಗಳು ಕಂಡುಬಂದಿದ್ದು, ಪ್ರಕರಣದ ತನಿಖೆಯನ್ನು ಉಳ್ಳಾಲ ಠಾಣಾ ಪೊಲೀಸರು ಆರಂಭಿಸಿದ್ದಾರೆ.

ತಡರಾತ್ರಿ ವೇಳೆ ಯುವತಿಯೋರ್ವಳು ನಶೆಯ ರೀತಿಯಲ್ಲಿ ಸ್ಥಳೀಯ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿದ್ದಾಳೆ. ಆದರೆ, ನೀರು ಕೇಳಿದ ಕೆಲವೇ ಕ್ಷಣಗಳಲ್ಲಿ ಆಕೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ನಶೆಯ ಸ್ಥಿತಿಯಿಂದಾಗಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಯುವತಿಯ ಆರೋಗ್ಯ ಸ್ಥಿತಿಯನ್ನು ವೈದ್ಯರು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸ್ಥಳದ ಸಮೀಪದಲ್ಲಿ ಒಂದು ನಿರ್ಜನ ಮನೆ ಇದ್ದು, ಈ ಸ್ಥಳಕ್ಕೆ ಗಾಂಜಾ ಮತ್ತು ಇತರ ಮಾದಕ ವ ವ್ಯಸನಿಗಳು ತಡರಾತ್ರಿ ನಿಯಮಿತವಾಗಿ ಆಗಮಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ರಾತ್ರಿ ನಾಲ್ವರ ತಂಡವೊಂದು ಈ ಪ್ರದೇಶದಲ್ಲಿತ್ತು ಎಂದು ತಿಳಿದುಬಂದಿದೆ. ಆದರೆ, ಯುವತಿ ನೆರೆಯ ಮನೆಗೆ ತಲುಪಿದ ಕೂಡಲೇ ಈ ತಂಡ ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಳ್ಳಾಲ ಠಾಣಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಯುವತಿಯ ಆರೋಗ್ಯ ಸುಧಾರಿಸಿದ ಬಳಿಕ ಆಕೆಯಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಕಾಯುತ್ತಿದ್ದಾರೆ. ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶಂಕಿತ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ ಎನ್ನಲಾಗಿದೆ.

Read More
Next Story