ಎತ್ತಿನಹೊಳೆ ಯೋಜನೆ |ಬಗೆಹರಿದಿಲ್ಲ ಜಲಾಶಯ ನಿರ್ಮಾಣ ಗೊಂದಲ ; ರಾಜ್ಯಪಾಲರ ಅಂಗಳ ತಲುಪಿದ ದೂರು
x

ಎತ್ತಿನಹೊಳೆ ಯೋಜನೆ |ಬಗೆಹರಿದಿಲ್ಲ ಜಲಾಶಯ ನಿರ್ಮಾಣ ಗೊಂದಲ ; ರಾಜ್ಯಪಾಲರ ಅಂಗಳ ತಲುಪಿದ ದೂರು

ಸಾವಿರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಿ ಎತ್ತಿನಹೊಳೆ ನೀರು ತಂದರೂ ಅದನ್ನು ಸಂಗ್ರಹಿಸುವುದು ಎಲ್ಲಿ ಎಂಬ ಪ್ರಶ್ನೆ ರಾಜ್ಯ ಸರ್ಕಾರದ ಮುಂದಿದೆ.


ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 64 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಯೋಜನೆಗೆ ಆರಂಭದಿಂದಲೂ ವಿಘ್ನಗಳು‌ ಎದುರಾಗುತ್ತಲೇ ಇವೆ. ಒಂದೆಡೆ ಯೋಜನೆ ಆರಂಭವಾಗಿ ದಶಕವೇ ಕಳೆದರೂ ಒಂದು ಹನಿ ನೀರು ಬಯಲು ಸೀಮೆಗೆ ತಲುಪಿಲ್ಲ. ಮತ್ತೊಂದೆಡೆ ಬೆಟ್ಟದಂತೆ ಯೋಜನಾ ವೆಚ್ಚ ಬೆಳೆದು ನೀರಿನಂತೆ ವ್ಯಯವಾಗುತ್ತಿದೆ.

ಸಾವಿರಾರು ಕೋಟಿ ರೂ. ಖರ್ಚು ಮಾಡಿ ಎತ್ತಿನಹೊಳೆ ನೀರು ತಂದರೂ ಅದನ್ನು ಸಂಗ್ರಹಿಸುವುದು ಎಲ್ಲಿ ಎಂಬ ಪ್ರಶ್ನೆ ಎದುರಾಗಿದೆ. ಯೋಜನೆ ಆರಂಭವಾದಾಗ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸಿ ಐದು ಟಿಎಂಸಿ ನೀರು ಸಂಗ್ರಹಿಸುವ ಉದ್ದೇಶವಿತ್ತು. ಅಲ್ಲಿ ಸಂಗ್ರಹಿಸುವ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಪೂರೈಸಲು ಉದ್ದೇಶಿಸಲಾಗಿತ್ತು. ಆದರೆ, ಭೂಸ್ವಾಧೀನ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಬೈರಗೊಂಡ್ಲು ಜಲಾಶಯ ಯೋಜನೆ ಕೈ ಬಿಡಲಾಯಿತು. ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿ ಬಳಿ ಜಲಾಶಯ ನಿರ್ಮಾಣ ಮಾಡಲು ಹೊಸ ಡಿಪಿಆರ್‌ ಸಿದ್ದಪಡಿಸಲಾಯಿತು.

ಲಕ್ಕೇನಹಳ್ಳಿ ಜಲಾಶಯ ನಿರ್ಮಾಣಕ್ಕೆ ಸಮಸ್ಯೆ ಏನು?

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗಡಿ ಗ್ರಾಮವಾದ ಲಕ್ಕೇನಹಳ್ಳಿ ಬಳಿ 2.45 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಹಿಂದೆ ಬೈರಗೊಂಡ್ಲು ಜಲಾಶಯ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸ್ಥಳದಿಂದ ಕೆಲವೇ ಕಿ.ಮೀ. ದೂರದಲ್ಲಿ ಲಕ್ಕೇನಹಳ್ಳಿ ಜಲಾಶಯಕ್ಕೆ ಯೋಜನೆ ಸಿದ್ಧತೆ ನಡೆದಿದೆ.

ಜಲಾಶಯದಿಂದ ಏಳು ಗ್ರಾಮಗಳು ಸಂಪೂರ್ಣ ಮುಳುಗಡೆಯಾದರೆ, ಮೂರು ಗ್ರಾಮಗಳು ಭಾಗಶಃ ಮುಳುಗಡೆಯಾಗಲಿವೆ. ಇದರಿಂದ 2,673 ಎಕರೆ ಮುಳುಗಡೆಯಾಗಲಿದ್ದು 4,500 ಜನರನ್ನು ಸ್ಥಳಾಂತರ ಮಾಡಬೇಕಾದ ಸವಾಲು ಸರ್ಕಾರದ ಮುಂದಿದೆ. ಆದರೆ, ಜಲಾಶಯ ನಿರ್ಮಾಣಕ್ಕೆ ಸುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದು ರಾಜ್ಯಪಾಲರ ಅಂಗಳ ಪ್ರವೇಶಿಸಿದೆ.

ಪರಿಹಾರ ವಿತರಣೆ ತಾರತಮ್ಯದಿಂದ ಯೋಜನೆ ವಿಳಂಬ

ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರದ ಗಡಿ ಭಾಗದಲ್ಲಿ 5.87 ಟಿಎಂಸಿ ಸಾಮರ್ಥ್ಯದ ಬೈರಗೊಂಡ್ಲು ಜಲಾಶಯ ನಿರ್ಮಿಸುವ ಯೋಜನೆಗೆ ದೊಡ್ಡಬಳ್ಳಾಪುರ ತಾಲೂಕಿನ 11 ಗ್ರಾಮಗಳು ಹಾಗೂ ಕೊರಟಗೆರೆ ತಾಲೂಕಿನ 17 ಗ್ರಾಮಗಳ 5,078 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿತ್ತು.

ಭೂ ಪರಿಹಾರವಾಗಿ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ಪ್ರತಿ ಎಕರೆಗೆ 32 ಲಕ್ಷ ರೂ. ಹಾಗೂ ಕೊರಟಗೆರೆ ತಾಲೂಕಿನ ರೈತರಿಗೆ 20 ಲಕ್ಷ ನೀಡಲು ಉದ್ದೇಶಿಸಿತ್ತು. ಆದರೆ, ಕೊರಟಗೆರೆ ತಾಲೂಕಿನ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಎಲ್ಲರಿಗೂ ಒಂದೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಯೋಜನೆ ವೆಚ್ಚ ಹೆಚ್ಚಾಗುವ ಕಾರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಜಲಾಶಯದ ಸಾಮರ್ಥ್ಯವನ್ನು ತಗ್ಗಿಸುವ ಉದ್ದೇಶದಿಂದ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ 2.45 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಹೆಚ್‌.ಡಿ. ಕುಮಾರಸ್ವಾಮಿ ವಿರೋಧಿಸಿದ್ದರು.

ಲಕ್ಕೇನಹಳ್ಳಿ ಜಲಾಶಯದ ನಿರ್ಮಾಣ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಕೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ರೈತರಿಗೆ ಮಾಹಿತಿ ನೀಡದೇ ಜಲಾಶಯ ನಿರ್ಮಾಣಕ್ಕೆ ನಿರ್ಧಾರ

ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಎತ್ತಿಹೊಳೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಆದರೆ, ಲಕ್ಕೇನಹಳ್ಳಿ ಗ್ರಾಮದಲ್ಲಿ ಜಲಾಶಯ ನಿರ್ಮಾಣ ಮಾಡುವ ಬಗ್ಗೆ ರೈತರಿಗೆ ಮಾಹಿತಿ ನೀಡದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಗೆ ಮುಂದಾಗಿರುವುದು ಸರಿಯಲ್ಲ. ಮುಳುಗಡೆಯಾಗುವ ಶ್ರೀರಾಮನಹಳ್ಳಿ, ದಾಸರಪಾಳ್ಯ, ಶಿಂಗೇನಹಳ್ಳಿ, ಗಾಣದಾಳು, ನರಸಾಪುರ, ಹನುಮಂತಯ್ಯನಪಾಳ್ಯ ಹಾಗೂ ಲಕ್ಕೇನಹಳ್ಳಿ ಗ್ರಾಮಗಳು ಹಾಗೂ ಭಾಗಶಃ ಮುಳುಗಡೆಯಾಗುವ ಗ್ರಾಮಗಳಾದ ಗರಡಗಲ್ಲು ಹಾಗೂ ಮಚ್ಚೇನಹಳ್ಳಿ ಗ್ರಾಮಗಳ ಸುಮಾರು 2,673 ಎಕರೆ ಜಮೀನ ಫಲವತ್ತಾಗಿದ್ದು, ಇಲ್ಲಿನ ರೈತರು ಅಡಿಕೆ, ತೆಂಗು ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಸರ್ಕಾರ ಇದೀಗ ಇಲ್ಲಿ ಜಲಾಶಯ ನಿರ್ಮಾಣ ಮಾಡಬೇಕು ಎಂದರೆ ನಾವೇನು ಮಾಡಬೇಕು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೇಳಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು ʼದ ಪೆಢರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯಪಾಲರ ಅಂಗಳ ತಲುಪಿದ ದೂರು

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಬಳಿ ಸರ್ಕಾರ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದ್ದು, ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಆತಂಕ ಮೂಡಿಸಿದೆ.

ಏಳು ಗ್ರಾಮಗಳಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದ್ದು, ಎಲ್ಲಿಗೆ ಹೋಗಬೇಕೆಂದು ತಿಳಿಯದಾಗಿದೆ. ಆದರೂ, ಬಲವಂತವಾಗಿ ಜಲಾಶಯ ನಿರ್ಮಾಣ ಮಾಡಲು ಮುಂದಾದರೆ ಇಲ್ಲಿನ ರೈತರಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಈ ಬಗ್ಗೆ ಜಲಾಶಯ ನಿರ್ಮಾಣ ಮಾಡದಂತೆ ರೈತರೆಲ್ಲರೂ ಸೇರಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರಕ್ಕೆ ಈ ಕುರಿತು ಸೂಚನೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಾಸರಪಾಳ್ಯ ರಾಮಣ್ಣ ʼದ ಫೆಡರಲ್‌ ಕರ್ನಾಟಕʼಕ್ಕೆ ಮಾಹಿತಿ ನೀಡಿದರು.

ಸರ್ಕಾರ ಮೊದಲು ನೀರು ತರಲಿ

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ನೀರಾವರಿ ತಜ್ಞ ಆಂಜನೇಯ ರೆಡ್ಡಿ ಅವರು ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, ಬಯಲುಸೀಮೆ ಜಿಲ್ಲೆಗಳಿಗೆ ಎಷ್ಟು ನೀರು ದೊರಕಬಹುದು ಎಂಬ ವಾಸ್ತವ ಅಂಶ ತಿಳಿಯದೆ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಸರ್ಕಾರ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ. ಸರ್ಕಾರ ನೇಮಿಸಿದ್ದ ಖಾಸಗಿ ಸಂಸ್ಥೆಯ ಸಂಶೋಧನೆ ಪ್ರಕಾರ 24 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಹೇಳಿದೆ. ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು 2015ರಲ್ಲೇ ವರದಿ ಅಧ್ಯಯನ ನಡೆಸಿ ಯೋಜನೆಗೆ ಕೇವಲ ಎಂಟು ಟಿಎಂಸಿ ನೀರು ಲಭ್ಯವಾಗಲಿದೆ ಎಂದು ವರದಿ ನೀಡಿದ್ದವು. ಆದರೆ, ಯೋಜನೆಗೆ ಖರ್ಚು ಮಾಡುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.

2012 ರಲ್ಲಿ ಯೋಜನೆಗೆ 8,300 ಕೋಟಿ ರೂ. ನಿಗದಿಪಡಿಸಲಾಗಿತ್ತು. 2013ರಲ್ಲಿ 13,000 ಕೋಟಿಗೆ ಹೆಚ್ಚಳ ಮಾಡಲಾಯಿತು. ಪ್ರಸ್ತುತ ಯೋಜನೆಗೆ 24,000 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ ಎಂದರು.

ಸರ್ಕಾರ ಬಯಲು ಸೀಮೆಗಳಿಗೆ ಹಂಚಿಕೆ ಮಾಡಿರುವ ನೀರನ್ನು ಇದೀಗ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೂ ಕೊಂಡೊಯ್ಯುವ ಯೋಜನೆಯಲ್ಲಿದೆ. ಇದರಿಂದ ಬಯಲು ಸೀಮೆಗಳಿಗೆ ಅನ್ಯಾಯವಾಗಲಿದೆ. ಸರ್ಕಾರದ ಯೋಜನೆಯಂತೆ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಅದರ ಬದಲಾಗಿ ಕೊರಟಗೆರೆ ತಾಲೂಕಿನಲ್ಲಿ ಸುಮಾರು 2,200 ಎಕರೆ ಹಾಗೂ 1.5 ಟಿಎಂಸಿ ನೀರು ನಿಲ್ಲುವಷ್ಟು ವಿಸ್ತಿರ್ಣದ ಮಾವತ್ತೂರು ಕೆರೆ ಇದ್ದು ಅದಕ್ಕೆ ಎತ್ತಿಹೊಳೆ ನೀರನ್ನು ಪೂರೈಸಿ ಅಲ್ಲಿಂದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕೆರೆಗಳಿಗೆ ನೀರನ್ನು ಪಂಪ್‌ ಮಾಡಬಹುದು. ಇದರಿಂದ ರೈತರಿಗೆ ಅನುಕೂಲವಾಗಲಿದ್ದು ಸರ್ಕಾರಕ್ಕೂ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಬರಪೀಡಿತ ಪ್ರದೇಶಗಳಿಗೆ ನೀರು ಹರಿಸುವ ಸರ್ಕಾರದ ಉದ್ದೇಶ ಸೂಕ್ತವಾದದ್ದು. ಆದರೆ ಅಣೆಕಟ್ಟು ನಿರ್ಮಿಸುವ ನೆಪದಲ್ಲಿ ಫಲವತ್ತಾದ ಭೂಮಿಯನ್ನು ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಮಂದಿಯನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಸರ್ಕಾರ ಕೂಡಲೇ ಜಲಾಶಯ ನಿರ್ಮಾಣ ಯೋಜನೆ ಕೈಬಿಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Read More
Next Story