
ಹೋಟೆಲ್ ಉದ್ಯಮ ಇನ್ನೂ ಅಧಿಕೃತವಲ್ಲ!
ನಾವು ಮಾತನಾಡುವಾಗ "ಹೋಟೆಲ್ ಉದ್ಯಮ" ಎಂದು ಹೇಳುವುದು ರೂಢಿಯಲ್ಲಿದೆ. ಆದರೆ, ಹೋಟೆಲ್ ನಡೆಸುವ ಚಟುವಟಿಕೆಗೆ ಇನ್ನೂ ಆ ಸ್ಥಾನಮಾನ ಅಧಿಕೃತವಾಗಿ ಸಿಕ್ಕಿಲ್ಲ. ಈ ವಿಷಯದಲ್ಲಿ ಸರ್ಕಾರವು ಹೋಟೆಲ್ ಮಾಲೀಕರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲನೆ ನಡೆಸಲಿದೆ
ಹೋಟೆಲ್ ಕ್ಷೇತ್ರಕ್ಕೆ ಅಧಿಕೃತವಾಗಿ ಉದ್ಯಮದ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಅರಂಭವಾಗಿದೆ. ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹೋಟೆಲ್ ಉದ್ಯಮಿಗಳ ಸಂಘ ಶನಿವಾರ ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಾವು ಮಾತನಾಡುವಾಗ "ಹೋಟೆಲ್ ಉದ್ಯಮ" ಎಂದು ಹೇಳುವುದು ರೂಢಿಯಲ್ಲಿದೆ. ಆದರೆ, ಹೋಟೆಲ್ ನಡೆಸುವ ಚಟುವಟಿಕೆಗೆ ಇನ್ನೂ ಆ ಸ್ಥಾನಮಾನ ಅಧಿಕೃತವಾಗಿ ಸಿಕ್ಕಿಲ್ಲ. ಈ ವಿಷಯದಲ್ಲಿ ಸರ್ಕಾರವು ಹೋಟೆಲ್ ಮಾಲೀಕರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲನೆ ನಡೆಸಲಿದೆ ಎಂದರು.
ಹೋಟೆಲ್ ಚಟುವಟಿಕೆಯು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಾ ಬಂದಿದೆ. ಜೊತೆಗೆ, ಇದು ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹೋಟೆಲ್ ನಡೆಸುವವರು ಜನರ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಆಹಾರ ಒದಗಿಸುವುದರ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಎಣ್ಣೆ ಬಳಸಲು ಒತ್ತು ಕೊಡಬೇಕು. ಜೊತೆಗೆ, ಸ್ಪರ್ಧಾತ್ಮಕ ದರದಲ್ಲಿ ಆಹಾರ-ಪಾನೀಯಗಳು ಕೈಗೆಟುಕುವಂತೆ ಮಾಡಬೇಕು ಎಂದು ಗಮನ ಸೆಳೆದರು.
ನಮ್ಮ ರಾಜ್ಯದಲ್ಲಿ ಹೋಟೆಲ್ ಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ದಕ್ಷಿಣ ಕನ್ನಡ ಭಾಗದವರು ಪ್ರಪಂಚದಲ್ಲೆಡೆ "ಉಡುಪಿ ರೆಸ್ಟೋರೆಂಟ್" ನಡೆಸುತ್ತಿದ್ದಾರೆ. ಅದೇ ರೀತಿ, ಉತ್ತರ ಕರ್ನಾಟಕ ಭಾಗದವರು ಖಾನಾವಳಿ ಮೂಲಕ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಹೋಟೆಲ್ ಕ್ಷೇತ್ರದ ಸಾಧಕರಾದ ರಾಜೇಶ್, ಚಂದ್ರಶೇಖರ ಹೆಬ್ಬಾರ್, ಆರ್ ಆರ್ ರಮಣ ರೆಡ್ಡಿ ಮತ್ತು ಕೆ. ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿ, ಉದ್ಯಮದ ರೋಡ್ ಮ್ಯಾಪ್ ಬಿಡುಗಡೆ ಮಾಡಲಾಯಿತು.
ಸಚಿವರಾದ ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಹೋಟೆಲ್ ಉದ್ಯಮಿಗಳ ಸಂಘದ ಜಿ.ಕೆ.ಶೆಟ್ಟಿ, ಕಾಪು ಶಾಸಕ ಸುರೇಶ ಶೆಟ್ಟಿ, ದಕ್ಷಿಣ ಭಾರತ ಹೋಟೆಲ್ ಒಕ್ಕೂಟದ ಅಧ್ಯಕ್ಷ ಶ್ಯಾಮರಾಜು,
ಚಂದ್ರಶೇಖರ ಕ.ಹೆಬಾರ್, ಎಂ.ಬಿ. ರಾಘವೇಂದ್ರ ರಾವ್, ಮಧುಕರ ಎನ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.