
ಹಳದಿ ಮೆಟ್ರೋ | 20 ನಿಮಿಷಕ್ಕೊಂದು ರೈಲು ಸಂಚಾರ, ಎಷ್ಟಿದೆ ಗೊತ್ತಾ ಪ್ರಯಾಣ ಶುಲ್ಕ?
ಹಳದಿ ಮಾರ್ಗದಲ್ಲಿ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಿದಂತೆ ಟ್ರಿಪ್‌ಗಳ ಸಂಖ್ಯೆ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಬೆಂಗಳೂರಿನ ರಾಗಿಗುಡ್ಡದಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನಾಳೆಯಿಂದ ಸಾರ್ವಜನಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಳದಿ ಮಾರ್ಗದಲ್ಲಿ ಒಟ್ಟು ಮೂರು ರೈಲುಗಳು ಸಂಚರಿಸಲಿದ್ದು, ಪ್ರತಿ 20 ನಿಮಿಷಕ್ಕೊಮ್ಮೆ ಪ್ರಯಾಣಿಕರನ್ನು ಕರೆದೊಯ್ಯಲಿವೆ.
ಹಳದಿ ಮಾರ್ಗದ ಪೂರ್ಣ ಸಂಚಾರಕ್ಕೆ ಒಟ್ಟು 15 ರೈಲುಗಳ ಅಗತ್ಯವಿದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಿದಂತೆ ಟ್ರಿಪ್‌ಗಳ ಸಂಖ್ಯೆ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
18.82ಕಿ.ಮೀ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸದ್ಯಕ್ಕೆ ರೈಲುಗಳ ಸಂಚಾರದ ನಡುವೆ 25 ನಿಮಿಷದ ಅಂತರ ಇರಲಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುವುದು ಅನಿವಾರ್ಯ.
ಹಳದಿ ಮಾರ್ಗದ ಟಿಕೆಟ್ ದರ
ಹಳದಿ ಮೆಟ್ರೋದಲ್ಲಿ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ - 60 ರೂ. ಇರಲಿದೆ. ಟೋಕನ್ -60 ರೂ. ಮತ್ತು ಸ್ಮಾರ್ಟ್ ಕಾರ್ಡ್- 57 ರೂ., ಸ್ಮಾರ್ಟ್‌ಕಾರ್ಡ್ (ನಾನ್‌ಪೀಕವರ್)- 54 ರೂ. ಮತ್ತು ಗುಂಪು ಟಿಕೆಟ್ -51 ರೂ. ನಿಗದಿ ಮಾಡಲಾಗಿದೆ. ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
ಆರ್.ವಿ.ರಸ್ತೆಯಿಂದ ಜಯದೇವ ಆಸ್ಪತ್ರೆವರೆಗೆ 10 ರೂ., ಆರ್.ವಿ ರಸ್ತೆಯಿಂದ ಬಿಟಿಎಂ ಲೇಔಟ್ ವರೆಗೆ 20 ರೂ., ಆರ್.ವಿ.ರಸ್ತೆ -ಬೊಮ್ಮನಹಳ್ಳಿ 30 ರೂ., ಆರ್.ವಿ.ರಸ್ತೆ -ಕೂಡ್ಲು ಗೇಟ್ 40 ರೂ., ಆರ್.ವಿ.ರಸ್ತೆ -ಸಿಂಗಸಂದ್ರ 50 ರೂ., ಆರ್.ವಿ.ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ., ಆರ್.ವಿ.ರಸ್ತೆ -ಬೊಮ್ಮಸಂದ್ರ 60 ರೂ., ಸಿಲ್ಕ್ ಬೋರ್ಡ್- ಬೊಮ್ಮಸಂದ್ರದವರೆಗೆ 60 ರೂ. ಪ್ರಯಾಣ ಶುಲ್ಕ ನಿಗದಿ ಮಾಡಲಾಗಿದೆ.
ಇನ್ಫೋಸಿಸ್ ಹಾಗೂ ಬಯೋಕಾನ್ ಸಂಸ್ಥೆಗೆ ತೆರಳುವ ಸಾವಿರಾರು ಉದ್ಯೋಗಿಗಳಿಗೆ ಹಳದಿ ಮೆಸಂಚಾರ ಸುಲಭವಾಗಲಿದೆ. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ತೆರಳುವವರಿಗೂ ಅನುಕೂಲವಾಗಲಿದೆ.
ಸೆಪ್ಟೆಂಬರ್ ವೇಳೆಗೆ ನಾಲ್ಕು ರೈಲುಗಳ ಓಡಾಟ
ಹಳದಿ ಮಾರ್ಗದಲ್ಲಿ ಸದ್ಯಕ್ಕೆ ಮೂರು ರೈಲುಗಳು ಸಂಚಾರವಾಗಲಿದೆ. ಆ.15ರ ಬಳಿಕ ಮತ್ತೊಂದು ರೈಲು ಆಗಮಿಸಲಿದೆ. ಅದನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನಾಲ್ಕು ರೈಲುಗಳು ಓಡಾಟ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಷನ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬಿರಿಟೇನ ಅಗ್ರಹಾರ, ಹೊಸ ರೋಡ್, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ದೇವಸ್ಥಾನ, ಆರ್.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ.
3 ಮೆಟ್ರೋ ಮಾರ್ಗಕ್ಕೆ ಸಂಪರ್ಕ
ನಮ್ಮ ಮೆಟ್ರೋ ಹಳದಿ ಮಾರ್ಗವು ಸದ್ಯ 3 ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆ ಹಳದಿ ಮಾರ್ಗವು ಸಂಪರ್ಕಿಸುತ್ತದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್‌ವಿ ರೋಡ್) ನಿಲ್ದಾಣದಲ್ಲಿ ಇಂಟರ್‌ಚೇಂಜ್ ಆಗಲಿದ್ದು, ಹಸಿರು ಮಾರ್ಗ ರೇಷ್ಮೆ ಸಂಸ್ಥೆ - ಮಾದಾವರ ಮಾರ್ಗ ಸಂಚರಿಸಲಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ಆಗಲಿದ್ದು, ಗುಲಾಬಿ ಮಾರ್ಗ ನಾಗಾವರ - ಕಾಳೇನ ಅಗ್ರಹಾರ ಮಾರ್ಗ ಸಂಚಾರವಾಗಲಿದೆ. ಸಿಲ್ಕ್ ಬೋರ್ಡ್‌ನಲ್ಲಿ ಮತ್ತೊಂದು ಇಂಟರ್‌ಚೇಂಜ್ ಆಗಲಿದೆ. ಇದು ನೀಲಿ ಮಾರ್ಗ ಸಿಲ್ಕ್‌ಬೋರ್ಡ್ - ಕೆಆರ್ ಪುರಂಗೆ ಸಂಚಾರವಾಗಲಿದೆ.
ಹಳದಿ ಮಾರ್ಗದ ಅನುಕೂಲಗಳು ಏನು?
ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗಕ್ಕೆ ತ್ವರಿತ ಸಂಪರ್ಕ ಕಲ್ಪಿಸಲಿದೆ. ಜನ ಮೆಟ್ರೋ ಬಳಸುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಾಗಿ ಟ್ರಾಫಿಕ್ ದಟ್ಟಣೆ ತಗ್ಗಲಿದೆ. ಅಲ್ಲದೇ, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ, ಸಿಂಗಸಂದ್ರ, ಬೊಮ್ಮನಹಳ್ಳಿ, ಜಯನಗರ, ತಿಲಕ್‌ನಗರ ಸೇರಿದಂತೆ ಹಲವು ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್‌ಗೆ ತೆರಳುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಬೆಂಗಳೂರಿನಿಂದ ತಮಿಳುನಾಡು (ಹೊಸೂರು) ಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಇದು ಮೊದಲ ಚಾಲಕ ರಹಿತ ರೈಲು
'ನಮ್ಮ ಮೆಟ್ರೋ' ಚಾಲಕ ರಹಿತ ರೈಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಚಾಲಕ ರಹಿತ ರೈಲು ನಿಯಂತ್ರಣ ಕೇಂದ್ರದಿಂದ ವರ್ಧಿತ ಮೇಲ್ವಿಚಾರಣೆ ಸಾಮರ್ಥ್ಯ, ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್, ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ, ಅಡಚಣೆ ಮತ್ತು ಡಿರೈಲೆಂಟ್ ಡಿಟೆಕ್ಷನ್ ವ್ಯವಸ್ಥೆ ಇತ್ಯಾದಿಗಳಿವೆ. ರೈಲಿನ ಬೋಗಿಗಳು, ಮಾರ್ಗ ವಿವರ, ಜಾಹೀರಾತುಗಳು, ಸೂಚನೆಗಳು, ಮಾಹಿತಿ ಇತ್ಯಾದಿಗಳನ್ನು ಪ್ರದರ್ಶಿಸಲು ಬಾಗಿಲುಗಳ ಮೇಲೆ ವಿದ್ಯುತ್ ಸಂಕೇತಗಳನ್ನು ಹೊಂದಿವೆ.
ಆರಂಭದಲ್ಲಿ ಲೊಕೋ ಪೈಲಟ್ ನಿಯೋಜನೆ
ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಸಂವಹನ-ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯ ಭಾಗವಾಗಿ ಪರಿಚಯಿಸಲಾಗುತ್ತಿದೆ. ಇದನ್ನು ಸಾಮಾನ್ಯವಾಗಿ 'ಚಾಲಕರಹಿತ ತಂತ್ರಜ್ಞಾನ' ಎಂದು ಕರೆಯಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಎರಡೂವರೆ ನಿಮಿಷಗಳಿಗಿಂತ 90 ಸೆಕೆಂಡುಗಳ ಮಟ್ಟಿಗೆ ಹೆಡ್‌ವೇ ಅನ್ನು ಕಡಿಮೆ ಮಾಡುತ್ತದೆ. ಆದರೂ ಆರಂಭದಲ್ಲಿ ಕೆಲ ಸಮಯ ಲೊಕೋ ಪೈಲಟ್ ನಿಯಂತ್ರಣದೊಂದಿಗೆ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಡಬ್ಬಲ್ ಡೆಕ್ಕರ್ ಪ್ಲೈ ಓವರ್
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಹಳದಿ ಮಾರ್ಗದಲ್ಲಿ ನಿರ್ಮಾಣ ಆಗಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್ ಡೆಕ್ಕರ್ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್‌ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ.
ಅತೀ ಎತ್ತರದ ಜಯದೇವ ಇಂಟರ್‌ಚೇಂಜ್
ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀ. ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎನಿಸಿಕೊಳ್ಳಲಿದೆ. ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅಂಡರ್‌ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಿದೆ. ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದ್ದು, 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗುವ ಸಾಧ್ಯತೆ ಇದೆ.