ಕಾಫಿ ನಾಡಲ್ಲಿ ಬಂಗಾರದ ಬೇಟೆಗೆ ಸರ್ಕಾರ ಸಜ್ಜು, ಕಾವೇರುತ್ತಿದೆ ಹೋರಾಟದ ಕಿಚ್ಚು
x

ಕಾಫಿ ನಾಡಲ್ಲಿ 'ಬಂಗಾರದ ಬೇಟೆ'ಗೆ ಸರ್ಕಾರ ಸಜ್ಜು, ಕಾವೇರುತ್ತಿದೆ ಹೋರಾಟದ ಕಿಚ್ಚು

ತರೀಕೆರೆ ತಾಲೂಕಿನ ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಲ್ಲಿ ನಡೆದ ಮೌಲ್ಯಮಾಪನಗಳಲ್ಲಿ ಪ್ರತಿ ಟನ್‌ ಮಣ್ಣಿನಲ್ಲಿ 19 ಗ್ರಾಂ ನಿಂದ 80 ಗ್ರಾಂ ವರೆಗೆ ಗಮನಾರ್ಹ ಪ್ರಮಾಣದ ಚಿನ್ನ ಇರುವುದು ಪತ್ತೆಯಾಗಿತ್ತು.


ʼಕಾಫಿ ನಾಡುʼ ಚಿಕ್ಕಮಗಳೂರಿನಲ್ಲಿ ʼಬಂಗಾರ ಉತ್ಖನನʼ ದ ಚರ್ಚೆ ವ್ಯಾಪಕವಾಗಿದೆ. ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಚಿನ್ನದ ನಿಕ್ಷೇಪಗಳ ಶೋಧಕ್ಕೆ ಪಶ್ಚಿಮ ಬಂಗಾಳ ಮೂಲದ ಕಂಪನಿಯೊಂದು ಅನುಮತಿ ಪಡೆದಿರುವುದು ಕುತೂಹಲದ ಜತೆಗೆ ಆತಂಕ ಸೃಷ್ಟಿಸಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಸಂಭಾವ್ಯ ಚಿನ್ನದ ಗಣಿಗಾರಿಕೆಗೆ ಸ್ಥಳೀಯರ ವಿರೋಧ ನಿಧಾನವಾಗಿ ಬಲವಾಗುತ್ತಿದೆ.

ಚಿನ್ನದ ನಿಕ್ಷೇಪ ಮೌಲ್ಯಮಾಪನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಂಯೋಜಿತ ಅನುಮತಿ ನೀಡಿದೆ. ಅರಣ್ಯ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ನಿಕ್ಷೇಪ ಶೋಧಕ್ಕಾಗಿ ದಟ್ಟ ಕಾನನದಲ್ಲಿ 100 ಕ್ಕೂ ಹೆಚ್ಚು ಕೊಳವೆಬಾವಿ ಕೊರೆಯುವ ಪ್ರಸ್ತಾಪವು ಪರಿಸರವಾದಿಗಳಲ್ಲಿ ಆಕ್ರೋಶ ತರಿಸಿದೆ. ವನ್ಯ ಜೀವಿಗಳ ಆವಾಸದಲ್ಲಿ ರಂಧ್ರ ಕೊರೆಯುವ, ಕಂದಕ ನಿರ್ಮಿಸುವ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಚಿನ್ನದ ನಿಕ್ಷೇಪಗಳಿರುವುದು ಹಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ, ಅತಿಯಾದ ಮಾನವ ಚಟುವಟಿಕೆಗಳಿಂದಾಗಿ ಪರಿಸರ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಆದಾಗ್ಯೂ, ಪಶ್ಚಿಮ ಘಟ್ಟದ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆಗೆ ಮುಂದಾಗಿರುವುದು ಸಹಜವಾಗಿ ವಿರೋಧಕ್ಕೆ ಕಾರಣವಾಗಿದೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಈ ಹಿಂದೆ ಅಧ್ಯಯನ ನಡೆಸಿರುವ ಪ್ರೊ.ಮಾಧವ ಗಾಡ್ಗೀಳ್‌, ಡಾ.ಕಸ್ತೂರಿ ರಂಗನ್‌ ಸಮಿತಿಗಳು ʼಸೂಕ್ಷ್ಮ ಪರಿಸರ ವಲಯʼ ಘೋಷಣೆಗೆ ಶಿಫಾರಸು ಮಾಡಿದ್ದವು. ಅದರಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದಾಗ್ಯೂ ಕರ್ನಾಟಕ ಸೇರಿ ಕೆಲ ರಾಜ್ಯಗಳು ಕಸ್ತೂರಿ ರಂಗನ್‌ ವರದಿ ವಿರೋಧಿಸಿದ್ದವು. ಈಗ ಇದೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಖಾಸಗಿ ಕಂಪನಿಯ ಲಾಬಿಗೆ ಮಣಿದು ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಶ್ಚಿಮ ಘಟ್ಟದಲ್ಲಿ ಇದೆಯೇ ಚಿನ್ನ?

ಪಶ್ಚಿಮ ಘಟ್ಟ ಸಾಲಿನಲ್ಲಿ ಅಗ್ನಿಶಿಲೆಗಳಿಂದ ರೂಪುಗೊಂಡಿರುವ ದಖನ್‌ ಪ್ರಸ್ತಭೂಮಿಯಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು 1993 ರಲ್ಲಿ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ(ಜಿಎಸ್‌ಐ) ಪತ್ತೆ ಮಾಡಿತ್ತು. ಮಹಾರಾಷ್ಟ್ರದ ವಾಯ್‌ ಗಿರಿಧಾಮ, ಲೋನ್‌ವಾಲಾ ಹಾಗೂ ಕಲ್ಸುಬಾಯ್‌ ಶಿಖರದಲ್ಲಿ 69 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಸರಾಸರಿ 3.7 ಪಿಪಿಬಿ (1 ಸಾವಿರ ಮೆಟ್ರಿಕ್ ಟನ್ ವಸ್ತುವಿನಲ್ಲಿ ಕಂಡು ಬರುವ 1 ಗ್ರಾಂ ಚಿನ್ನಕ್ಕೆ 1ಪಿಪಿಬಿ ಎನ್ನಲಾಗುತ್ತದೆ) 62 ಮಾದರಿಗಳಲ್ಲಿ 3 ರಿಂದ 5.8 ಪಿಪಿಬಿವರೆಗಿನ ಚಿನ್ನವಿದ್ದರೆ, 7 ಮಾದರಿಗಳಲ್ಲಿ 1.4 ರಿಂದ 2.7 ಪಿಪಿಬಿವರೆಗೆ ಇತ್ತು.

ಪಿಪಿಬಿ ಎಂದರೇನು?

ಮಣ್ಣು ಮತ್ತು ಕಲ್ಲಿನ ಮಾದರಿಗಳಲ್ಲಿ ಚಿನ್ನದ ಪ್ರಮಾಣವನ್ನು ಭೂವಿಜ್ಞಾನಿಗಳು ಪಿಪಿಬಿ (ಪಾರ್ಟ್ಸ್‌ ಪರ್‌ ಬಿಲಿಯನ್‌) ಮಾದರಿಯಲ್ಲಿ ಅಳೆಯುತ್ತಾರೆ. ಇಲ್ಲಿ ಒಂದು ಪಿಪಿಬಿ ಎಂಬುದು 1 ಸಾವಿರ ಮೆಟ್ರಿಕ್ ಟನ್ ವಸ್ತುವಿನಲ್ಲಿ 1 ಗ್ರಾಂ ಚಿನ್ನಕ್ಕೆ ಸಮವಾದ ಪ್ರಮಾಣ. ಚಿನ್ನದ ನಿಕ್ಷೇಪ ಪತ್ತೆಹಚ್ಚಲು ಪಿಪಿಬಿಯನ್ನು ಅಳತೆಗೋಲಾಗಿ ಬಳಸಲಾಗುತ್ತದೆ.

ಗಣಿಗಾರಿಕೆಯಲ್ಲಿ ಕಂಡು ಬರುವ ಅತಿ ಕಡಿಮೆ ಪ್ರಮಾಣದ ಚಿನ್ನವನ್ನು ಪ್ರಯೋಗಾಲಯಗಳಲ್ಲಿ ಪಿಪಿಬಿ ಮಟ್ಟದಲ್ಲಿ ಪತ್ತೆಹಚ್ಚಲು ಅಟಾಮಿಕ್ ಅಬ್ಸಾರ್ಪ್ಷನ್‌ ಸ್ಪೆಕ್ಟ್ರೋ ಫೋಟೋಮೆಟ್ರಿಯಂತಹ ಸುಧಾರಿತ ತಂತ್ರಗಳನ್ನು ಬಳಸಲಾಗುತ್ತದೆ.

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್‌ ಎಂಬ ಬಂಗಾಳ ಮೂಲದ ಕಂಪನಿಗೆ 10,082 ಎಕರೆ ಭೂಮಿಯಲ್ಲಿ ಚಿನ್ನ ಶೋಧಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸಂಯೋಜಿತ ಪರವಾನಗಿ ನೀಡಿದೆ. ಆದರೆ, ಈ ಜಾಗದಲ್ಲಿ 5,600 ಎಕರೆ ಅರಣ್ಯ ಪ್ರದೇಶವಿದೆ. 4500 ಎಕರೆ ಕೃಷಿ, ಅಮೃತಮಹಲ್‌, ಗೋಮಾಳ ಭೂಮಿಯಿದೆ.

ದಟ್ಟ ಅರಣ್ಯದೊಳಗೆ ಅಗ್ನಿ ಶಿಲೆಗಳ ಮಧ್ಯೆ ಚಿನ್ನದ ನಿಕ್ಷೇಪವಿರುವ ಕುರುಹುಗಳು ಕಂಡು ಬಂದಿವೆ. ಈ ಹಿಂದೆ ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಲ್ಲಿ ನಡೆದ ಮೌಲ್ಯಮಾಪನಗಳಲ್ಲಿ ಪ್ರತಿ ಟನ್‌ ಮಣ್ಣಿನಲ್ಲಿ 19 ಗ್ರಾಂ ನಿಂದ 80 ಗ್ರಾಂ ವರೆಗೆ ಗಮನಾರ್ಹ ಪ್ರಮಾಣದ ಚಿನ್ನ ಇರುವುದು ಪತ್ತೆಯಾಗಿತ್ತು. ಚಿನ್ನದ ಮೌಲ್ಯ ಕಂಡುಕೊಳ್ಳುವ ಸಲುವಾಗಿ ಶೋಧ ಅಗತ್ಯವಾಗಿದೆ ಎಂದು ಔರಮ್‌ ಕಂಪನಿಯು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡಿದ ಪತ್ರದಲ್ಲಿ ತಿಳಿಸಿದೆ.

ದಟ್ಟ ಕಾನನದಲ್ಲಿ ಭೂಮಿಗೆ ರಂಧ್ರ

ಚಿನ್ನದ ನಿಕ್ಷೇಪ ಶೋಧಿಸಲು ಗುರುತಿಸಿರುವ ತರೀಕೆರೆ ತಾಲೂಕಿನ ಉದ್ದೇಶಿತ ಜಾಗದಲ್ಲಿ ದಟ್ಟ ಅರಣ್ಯವಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಈ ಅರಣ್ಯದಲ್ಲಿ ಈಗ 100 ಬೋರ್‌ಹೋಲ್‌ಗಳನ್ನು ಕೊರೆದು, ನಿಕ್ಷೇಪದ ಇರುವಿಕೆ ಖಾತ್ರಿಪಡಿಸಿಕೊಳ್ಳಲು ಕಾರ್ಯ ಯೋಜನೆಯ ಭಾಗವಾಗಿದೆ.

ಸೂಕ್ಷ್ಮ ಪರಿಸರ ವಲಯದಲ್ಲಿ ರಂಧ್ರ ಕೊರೆಯುವುದರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗಲಿದೆ. ಪರಿಸರಕ್ಕೂ ಧಕ್ಕೆಯಾಗಲಿದೆ ಎಂಬುದು ಪಶ್ಚಿಮ ಘಟ್ಟ ಉಳಿಸಿ ಹೋರಾಟಗಾರರ ಆತಂಕವಾಗಿದೆ. ಆದರೆ, ಇದಕ್ಕೆ ಔರಮ್‌ ಕಂಪನಿ ಸ್ಪಷ್ಟನೆ ನೀಡಿದ್ದು, ಕಂದಕ ಮತ್ತು ರಂಧ್ರ ಕೊರೆಯುವ ಕಾರ್ಯಾಚರಣೆ ವೇಳೆ ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮ ವಹಿಸಲಾಗುವುದು, ಹೊಂಡ ಮತ್ತು ಕಂದಕಗಳನ್ನು ಮುಚ್ಚಲಾಗುವುದು, ಕೊರೆದ ಬೋರ್‌ವೆಲ್‌ಗಳಿಗೆ ಕಾಂಕ್ರೀಟ್ ಭರ್ತಿ ಮಾಡಿ ಭೂಮಿಯನ್ನು ಮೂಲ ಸ್ಥಿತಿಗೆ ತರಲಾಗುವುದು ಎಂದು ಕಂಪನಿ ಭರವಸೆ ನೀಡಿದೆ.

ಕಾಡು ಪ್ರಾಣಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಆತಂಕ

ತರೀಕೆರೆ ತಾಲೂಕಿನ ಅರಣ್ಯ ಭಾಗದಲ್ಲಿ ಚಿರತೆಗಳು, ನಾಲ್ಕು ಕೊಂಬಿನ ಹುಲ್ಲೆ(ಜಿಂಕೆ), ಆನೆಗಳು, ಕರಡಿಗಳು ಓಡಾಡುತ್ತವೆ. ಕಾರ್ಯ ಯೋಜನೆಯ ವ್ಯಾಪ್ತಿಯಲ್ಲೇ ಭದ್ರಾ ಹುಲಿ ಮೀಸಲು ಪ್ರದೇಶದಿಂದ ಆನೆಗಳು ಬರುತ್ತದೆ. ಲಕ್ಕವಳ್ಳಿ ಮತ್ತು ತರೀಕೆರೆ ಶ್ರೇಣಿಗಳಲ್ಲಿನ ಕೃಷಿ ಬೆಳೆಗಳಿಗೂ ರಾತ್ರಿ ವೇಳೆ ಆನೆ, ಜಿಂಕೆಗಳು ಲಗ್ಗೆ ಇಡುತ್ತವೆ. ರಂಧ್ರ ಕೊರೆಯಲು ಉದ್ದೇಶಿಸಿರುವ ಹುಲಿತಿಮ್ಮಾಪುರವು ಲಕ್ಕವಳ್ಳಿ ಆನೆ ಕಾರಿಡಾರ್‌ ಭಾಗವಾಗಿದೆ. ತ್ಯಾಗದಬಾಗಿ, ತಣಿಗೆಬೈಲು ಕೂಡ ಕಾರಿಡಾರ್‌ ವ್ಯಾಪ್ತಿಯಲ್ಲಿದೆ.

ʼಭಾರೀ ಯಂತ್ರೋಪಕರಣಗಳ ಬಳಕೆ ಹಾಗೂ ಕೊರೆಯುವ ಶಬ್ದವು ವನ್ಯ ಜೀವಿಗಳ ಮೇಲೆ ಭಾರೀ ಪರಿಣಾಮ ಬೀರಲಿದೆ. 2007-08ರಲ್ಲಿ ಹೊಗರೆಕಂಗಿರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ವಿರೋಧಿಸಿ ಜನಹೋರಾಟ ನಡೆದಿತ್ತು. ಈಗ ಮತ್ತೊಮ್ಮೆ ಅದೇ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಲಿಂಗದಹಳ್ಳಿ ಅರಣ್ಯವು ಬೆಟ್ಟದಹಳ್ಳಿ ಮತ್ತು ನವಿಲುಗುಡ್ಡ ಒಳಗೊಂಡಿರುವ ಭೂದೃಶ್ಯದ ಭಾಗವಾಗಿದೆ. ಬಿದ್ದಕಲ್ಲಪ್ಪ ದೇವಸ್ಥಾನ ಮತ್ತು ಸಿದ್ದೇಶ್ವರಸ್ವಾಮಿ ದೇವಸ್ಥಾನ ಇಲ್ಲಿವೆ. ಇಂತಹ ಕಡೆಯಲ್ಲಿ ಚಿನ್ನದ ಗಣಿಗಾರಿಕೆ ನಡೆದರೆ ಸಂಸ್ಕೃತಿಯೇ ಹಾಳಾಗಲಿದೆ ಎಂಬ ಆತಂಕ ಹೊರಹಾಕಿದ್ದಾರೆ.

ಕಪ್ಪತ್ತಗುಡ್ಡ ಮಾದರಿ ಹೋರಾಟದ ಎಚ್ಚರಿಕೆ

5,600 ಎಕರೆ ಅರಣ್ಯ ಪ್ರದೇಶವು ಭದ್ರಾ ಅರಣ್ಯ ವ್ಯಾಪ್ತಿಗೆ ಬರಲಿದೆ. ಜೀವಶಾಸ್ತ್ರ, ಅರಣ್ಯ ಪರಸರದಲ್ಲಿ ಗಣಿಗಾರಿಕೆಯಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಂಗಾರವನ್ನು ಹಣ ಕೊಟ್ಟು ಖರೀದಿಸಬಹುದು, ಆದರೆ, ಪರಿಸರವನ್ನು ಯಾರೂ ಖರೀದಿಸಲಾಗದು, ಇರುವ ಪರಿಸರವನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಅಭಯಾರಣ್ಯ, ಮಿನಿ ಫಾರೆಸ್ಟ್‌, ಡೀಮ್ಡ್‌ ಅರಣ್ಯವಾದರೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಚಿಕ್ಕಮಗಳೂರಿನ ಜನಸಂಗ್ರಾಮ ಪರಿಷತ್‌ ಸಂಚಾಲಕ ವಾಸುದೇವ ಕೋಟ್ಯಾನ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ತರೀಕೆರೆಯಲ್ಲಿ ಚಿನ್ನದ ನಿಕ್ಷೇಪ ಶೋಧದ ಹಿಂದೆ ರಾಜಕೀಯ ಹಿತಾಸಕ್ತಿ, ಗಣಿ ಮಾಫಿಯಾ ಕೈವಾಡವಿದೆ. ಈ ಹಿಂದೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ದಿವಂಗತ ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ಸ್ಥಾಪನೆಗಾಗಿ 20 ಎಕರೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ, ಸ್ಟುಡಿಯೋ ಸ್ಥಾಪನೆ ಮಾಡಲಿಲ್ಲ. ಅವರ ಕುಟುಂಬಸ್ಥರೇ ಅನಧಿಕೃತವಾಗಿ 10ಎಕರೆ ಮಾರಿಕೊಂಡಿದ್ದರು. ಇದೇ ರೀತಿ ತರೀಕೆರೆಯ 10,100 ಎಕರೆ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಶೋಧನೆಗೆ ಅನುಮತಿ ನೀಡಿರುವುದು ಖಾಸಗಿಯವರಿಗೆ ಭೂಮಿ ನೀಡುವ ಹುನ್ನಾರ ಎಂದು ಆರೋಪಿಸಿದರು.

ಅರಣ್ಯ ಪ್ರದೇಶದಲ್ಲಿ ಯಾವುದೇ ಪರವಾನಗಿ ಇಲ್ಲದೇ ಕೊಳವೆಬಾವಿ ಕೊರೆಸುವಂತಿಲ್ಲ. ಆಗೊಮ್ಮೆ ಒತ್ತಡಕ್ಕೆ ಮಣಿದು ಅನುಮತಿ ನೀಡಿದರೆ ಅರಣ್ಯ ಇಲಾಖೆ ಭಾರೀ ಬೆಲೆ ತೆರಬೇಕಾಗುತ್ತದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ 1 ಎಕರೆಗೆ 15 ಬೋರ್‌ ವೆಲ್‌ ಕೊರೆಯುವ ಉದ್ದೇಶ ಹೊಂದಲಾಗಿದೆ. ಎಷ್ಟು ಅಡಿ ಆಳದಲ್ಲಿ ಚಿನ್ನದ ನಿಕ್ಷೇಪವಿದೆ ಎಂದು ಹುಡುಕಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಪರಿಸರ ಹಾಳಾಗಿದೆ. ಶುದ್ಧಗಾಳಿಯಿಲ್ಲದೇ ಮಹಾನಗರಗಳಲ್ಲಿ ʼಆಕ್ಸಿಜನ್‌ ಪಬ್‌ʼ ಗಳನ್ನು ಮಾಡಲಾಗಿದೆ. ಚಿಕ್ಕಮಗಳೂರು ದಟ್ಟಾರಣದಲ್ಲಿ ಚಿನ್ನದ ನಿಕ್ಷೇಪ ಪತ್ತೆಗೆ ಬಂಗಾಳ ಮೂಲದ ಕಂಪನಿ ಟೆಂಡರ್‌ ಪಡೆದಿದೆ. ಬಂಗಾರದಿಂದ ಹೋದವರು ಯಾರೂ ಉದ್ಧಾರ ಆಗಿಲ್ಲ. ಕೋಲಾರದವರ ಈಗಿನ ಪರಿಸ್ಥಿತಿ ಏನಾಗಿದೆ, ಸೈನಡ್‌ ಗುಡ್ಡಗಳು ತಲೆಎತ್ತಿರುವುದು ಗೊತ್ತಿರುವ ವಿಚಾರ ಎಂದು ಎಚ್ಚರಿಸಿದರು.

ತರೀಕೆರೆಯಲ್ಲಿ ಚಿನ್ನದ ಗಣಿಗಾರಿಕೆ ವಿರೋಧಿಸಿ ಮುಂದಿನ ವಾರ ಬೆಂಗಳೂರಿನಲ್ಲಿ ಜನಸಂಗ್ರಾಮ ಪರಿಷತ್‌ ಸಭೆ ನಡೆಸಲಿದೆ. ಈಗಾಗಲೇ ಶೃಂಗೇರಿ, ಮೂಡಿಗೆರೆ, ಎನ್‌.ಆರ್‌.ಪುರ, ಕೊಪ್ಪ, ಆಲ್ದೂರಿನಲ್ಲಿ ಆನೆಗಳು ನಾಡಿಗೆ ಬರುತ್ತಿವೆ. ಪ್ರಾಣಿಗಳ ಆವಾಸಸ್ಥಾನಕ್ಕೆ ಮನುಷ್ಯರು ನುಗ್ಗಿದರೆ ಅವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಕಪ್ಪತ್ತಗುಡ್ಡ ಕರಡಿ ಆವಾಸ ಸ್ಥಾನದಲ್ಲಿ ಚಿನ್ನದ ಗಣಿಗಾರಿಕೆಗೆ ಪ್ರಯತ್ನ ನಡೆದಿತ್ತು. ಆಗ ಜನಸಂಗ್ರಾಮ ಪರಿಷತ್‌ನ ರಾಘವೇಂದ್ರ ಕುಷ್ಟಗಿ, ಎಸ್‌.ಆರ್‌. ಹಿರೇಮಠ್‌ ನೇತೃತ್ವದಲ್ಲಿ ಬೃಹತ್‌ ಹೋರಾಟ ನಡೆದ ಪರಿಣಾಮ ಕಪ್ಪತ್ತಗುಡ್ಡ ಉಳಿಯಲು ಸಾಧ್ಯವಾಯಿತು. ಈಗ ಅದೇ ಮಾದರಿಯ ಹೋರಾಟ ತರೀಕೆರೆಯಲ್ಲಿ ಅಗತ್ಯವಿದೆ, ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಚಿನ್ನದ ಗಣಿಗಾರಿಕೆ ಇತಿಹಾಸ

ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನದ ಗಣಿಗಾರಿಕೆ ನಡೆದಿರುವ ಕುರುಹುಗಳಿವೆ. ಮೌರ್ಯ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ, ಶಾತವಾಹನರ ಆಳ್ವಿಕೆ ಅವಧಿಯಲ್ಲಿಯೂ ಚಿನ್ನದ ಗಣಿಗಾರಿಕೆ ನಡೆದಿರುವುದು ಇತಿಹಾಸದಿಂದ ತಿಳಿದು ಬಂದಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಗಮನದ ನಂತರ ಚಿನ್ನದ ಶೋಧಕ್ಕೆ ಹೆಚ್ಚು ಹೊಳಪು ಸಿಕ್ಕಿದ್ದು ಕೆಜಿಎಫ್‌ ಚಿನ್ನದ ಗಣಿಗಾರಿಕೆ ಮೂಲಕ. 1880ರ ದಶಕದಿಂದ ಕೆಜಿಎಫ್‌ನಲ್ಲಿ ಬ್ರಿಟಿಷರು ಚಿನ್ನದ ಗಣಿಗಾರಿಕೆ ಆರಂಭಿಸಿದರು. ಏಷ್ಯಾದಲ್ಲೇ ಅತಿ ದೊಡ್ಡ ಚಿನ್ನದ ಗಣಿಗಾರಿಕೆ ಎಂಬ ಖ್ಯಾತಿ ಪಡೆದಿದ್ದ ಕೆಜಿಎಫ್‌ ಅನ್ನು ಲಿಟಲ್ ಇಂಗ್ಲೆಂಡ್ ಎಂತಲೇ ಕರೆಯಲಾಗಿತ್ತು. ಚಿನ್ನದ ಬೆಲೆ ಕುಸಿತ, ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಆಳವಾದ ಗಣಿ ಬಾವಿಗಳಿಂದಾಗಿ 2001ರಲ್ಲಿ ಕೆಜಿಎಫ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಇನ್ನು ಸ್ವಾತಂತ್ರ್ಯದ ನಂತರ ರಾಯಚೂರಿನ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಚಿತ್ರದುರ್ಗ ಜಿಲ್ಲೆಯ ಇಂಗಳದಾಳ್ ಗಣಿಯಲ್ಲಿ 2002ರಲ್ಲಿ ಚಿನ್ನದ ಗಣಿಗಾರಿಕೆ ಸಣ್ಣ ಪ್ರಮಾಣದಲ್ಲಿ ಆರಂಭವಾಯಿತು. ಈಗ ಗಣಿ ಮುಚ್ಚಿದ್ದರೂ ಪುನರಾರಂಭದ ಮಾತುಗಳು ಸರ್ಕಾರದ ಮಟ್ಟದಲ್ಲಿ ಕೇಳಿ ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾ ಗಡಿಭಾಗದಲ್ಲಿರುವ ಗಣಜೂರು ಗಣಿಗಾರಿಕೆಗೆ ಆರಂಭದಲ್ಲಿ ಪರವಾನಗಿ ನೀಡಿದ್ದರೂ ಪರಿಸರ ಹಾಗೂ ಕಾನೂನು ಇಲಾಖೆ ಆಕ್ಷೇಪದ ಬಳಿಕ ಅನುಮತಿ ತಿರಸ್ಕರಿಸಲಾಯಿತು.

ಚಿನ್ನ ಶೋಧಕ್ಕೆ ಬೆಲೆ ಏರಿಕೆಯೇ ಕಾರಣ

ದೇಶದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 80ರಷ್ಟಿದೆ. ಪ್ರಸ್ತುತ ಹಟ್ಟಿ ಚಿನ್ನದ ಗಣಿಯೊಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಂಗಳದಾಳ್ ಗಣಿಯು ಚಿನ್ನದ ನಿಕ್ಷೇಪ ಹೊಂದಿದ್ದು, ಚಿನ್ನದ ಭವಿಷ್ಯ ನಿರ್ಧರಿಸಲಿದೆ. ಪ್ರಸ್ತುತ, ತಂತ್ರಜ್ಞಾನದಲ್ಲಿ ಪ್ರಗತಿ, ಚಿನ್ನದ ಬೆಲೆ ಏರಿಕೆ ಹಾಗೂ ಸರ್ಕಾರದ ನೀತಿಗಳ ಕಾರಣದಿಂದ ಮತ್ತೆ ಚಿನ್ನದ ಗಣಿಗಾರಿಕೆಗೆ ಅವಕಾಶ ಹೆಚ್ಚುತ್ತಿದೆ.

Read More
Next Story