
ಮೆಟ್ರೋ ಹಳದಿ ಮಾರ್ಗದಲ್ಲಿ 25 ನಿಮಿಷಕ್ಕೊಂದು ರೈಲು; ಮೊದಲ ದಿನವೇ ದಟ್ಟಣೆ, ಪ್ರಯಾಣಿಕರ ಅಳಲು
ಸಾವಿರಾರು ಪ್ರಯಾಣಿಕರು ಸೋಮವಾರ ಬೆಳಗ್ಗೆಯಿಂದಲೇ ಪ್ರಯಾಣ ಆರಂಭಿಸಿದ್ದರು. ಆದರೆ, ರೈಲುಗಳ ನಡುವಿನ ಅಂತರ ಹೆಚ್ಚಾಗಿದ್ದರಿಂದ ನಿಲ್ದಾಣಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.
ಸಾರ್ವಜನಿಕ ಸೇವೆಗೆ ಸೋಮವಾರವಷ್ಟೇ ಮುಕ್ತವಾದ 'ನಮ್ಮ ಮೆಟ್ರೋ' ಹಳದಿ ಮಾರ್ಗದಲ್ಲಿ ಮೊದಲ ದಿನವೇ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ರೈಲುಗಳ ಸಂಚಾರದಲ್ಲಿನ ವಿಳಂಬವು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿರುವುದರಿಂದ ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ವಿಪರೀತ ಜನಸಂದಣಿ ಉಂಟಾಗಿದ್ದು, ಅನೇಕರು ತಮ್ಮ ಸಂಕಷ್ಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ.
ಭಾನುವಾರವಷ್ಟೇ ಪ್ರಧಾನಿಗಳಿಂದ ಉದ್ಘಾಟನೆಗೊಂಡಿದ್ದ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಈ ಮಾರ್ಗಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರಯಾಣಿಕರು ಸೋಮವಾರ ಬೆಳಗ್ಗೆಯಿಂದಲೇ ಪ್ರಯಾಣ ಆರಂಭಿಸಿದ್ದರು. ಆದರೆ, ರೈಲುಗಳ ನಡುವಿನ ಅಂತರ ಹೆಚ್ಚಾಗಿದ್ದರಿಂದ ನಿಲ್ದಾಣಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.
"19 ಕಿಲೋಮೀಟರ್ ದೂರವನ್ನು ಕೇವಲ 33 ನಿಮಿಷಗಳಲ್ಲಿ ತಲುಪುತ್ತಿರುವುದು ಅದ್ಭುತ ವ್ಯವಸ್ಥೆ. ಆದರೆ, ಎರಡೂ ಕಡೆಗಳಲ್ಲಿ ಭಾರಿ ದಟ್ಟಣೆ ಉಂಟಾಗುತ್ತಿದೆ. ಮೊದಲ ದಿನದ ಪ್ರಯಾಣದ ಅನುಭವ ಕೆಟ್ಟದಾಗಿತ್ತು" ಎಂದು ಪ್ರಯಾಣಿಕರೊಬ್ಬರು ಎಕ್ಸ್ (X) ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ರೀತಿ ಹಲವರು, ಹಳದಿ ಮಾರ್ಗದ ದಟ್ಟಣೆಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು, ಆದಷ್ಟು ಬೇಗ ಬಿಎಂಆರ್ಸಿಎಲ್ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಯಾಣಿಕರ ದೂರಿಗೆ ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, "ಹೆಚ್ಚುವರಿ ರೈಲು ಬೋಗಿಗಳು ಪೂರೈಕೆಯಾದ ತಕ್ಷಣ, ರೈಲುಗಳ ಟ್ರಿಪ್ಗಳನ್ನು ಹೆಚ್ಚಿಸಲಾಗುವುದು" ಎಂದು ತಿಳಿಸಿದ್ದಾರೆ.
ಪ್ರಸ್ತುತ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಬೆಳಿಗ್ಗೆ 6:30ಕ್ಕೆ ಮತ್ತು ಆರ್.ವಿ. ರಸ್ತೆ ನಿಲ್ದಾಣದಿಂದ ಬೆಳಿಗ್ಗೆ 7:10ಕ್ಕೆ ಮೊದಲ ರೈಲು ಸಂಚಾರ ಆರಂಭವಾಗಲಿದೆ. ಎರಡೂ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣಕ್ಕೆ 60 ರೂ. ದರ ನಿಗದಿಪಡಿಸಲಾಗಿದೆ. ಭಾನುವಾರಗಳಂದು ರೈಲು ಸಂಚಾರವು ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ.