ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು; 14,500 ಹೆಕ್ಟೇರ್‌ ಪ್ರದೇಶ ವ್ಯಾಪಿಸಿದ ಹಳದಿ ಎಲೆ ರೋಗ
x

ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು; 14,500 ಹೆಕ್ಟೇರ್‌ ಪ್ರದೇಶ ವ್ಯಾಪಿಸಿದ ಹಳದಿ ಎಲೆ ರೋಗ

ಸದ್ಯ ಶೃಂಗೇರಿಯಿಂದ ಮಲೆನಾಡು ಭಾಗದ ಸುಮಾರು 150ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಈ ರೋಗ ವ್ಯಾಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗಕ್ಕೆ ವ್ಯಾಪಿಸಲು ದೀರ್ಘ ಅವಧಿಯೇನೂ ಬೇಕಾಗಿಲ್ಲ. ಹೀಗಾದಾಗ ಪಶ್ಚಿಮ ಘಟ್ಟದ ತಪ್ಪಲು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಈ ಸಮಸ್ಯೆ ಹೆಚ್ಚಾಗಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುವ ಆತಂಕವಿದೆ.


ಅಡಿಕೆಗೆ ಹಳದಿ ಎಲೆ ರೋಗದಿಂದ ((Yellow Leaf Disease)) ನಷ್ಟವಾಗಿರುವ ಬೆಳೆ ಪ್ರದೇಶ ಎಷ್ಟು ಗೊತ್ತಾ? ಸಿಪಿಸಿಆರ್‌ಐ (Central Plantation Crops Research Institute) ವರದಿ ಪ್ರಕಾರ ಸುಮಾರು 14,500 ಹೆಕ್ಟೇರ್ ಪ್ರದೇಶ.

ಸದ್ಯ ಇದು ನಿರ್ದಿಷ್ಟವಾದ ಮದ್ದಿಲ್ಲದ ರೋಗ. ಅಡಿಕೆ ಮರಕ್ಕೆ ಪೂರೈಕೆಯಾಗುವ ಆಹಾರ ಮತ್ತು ಪೋಷಕಾಂಶ ಪೂರೈಕೆ ವ್ಯವಸ್ಥೆಯನ್ನೇ ಛಿದ್ರಗೊಳಿಸುವ ರೋಗವಿದು. ಸಹಜವಾಗಿ ಮರ ಸೊರಗುತ್ತದೆ. ನ್ಯೂನ ಪೋಷಣೆಯಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಫಸಲಿನ ಗುಣಮಟ್ಟ ತೀರಾ ಕುಸಿಯುತ್ತದೆ. ಎರಡರಿಂದ ಐದಾರು ಎಕರೆ ಇರುವ ರೈತರ ತೋಟಗಳಂತೂ ಶೇ 80ರಷ್ಟು ಇಳುವರಿ ಕುಸಿತ ಕಂಡಿವೆ.

ಎಲ್ಲೆಲ್ಲಿ ವ್ಯಾಪಿಸಿದೆ?

ಶೃಂಗೇರಿ, ಕೊಪ್ಪ ಭಾಗದಲ್ಲಿ ಸುಮಾರು 50 ವರ್ಷಗಳ ಹಿಂದೆ ಕಾಣಿಸಿಕೊಂಡ ಹಳದಿ ಎಲೆಚುಕ್ಕಿ ರೋಗ, ಮಡಿಕೇರಿ ಗಡಿಭಾಗವಾದ ಚೆಂಬು ಸಂಪಾಜೆ ಪ್ರದೇಶಗಳಲ್ಲಿ ಸುಮಾರು 25 ವರ್ಷಗಳ ಹಿಂದೆ ಕಾಣಿಸಿಕೊಂಡಿತ್ತು. ಈಗ ಸುಳ್ಯ, ಕಾಣಿಯೂರು ಪುತ್ತೂರು ಗಡಿ ಭಾಗಗಳವರೆಗೆ ವ್ಯಾಪಿಸಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಸುಮಾರು 100ರಷ್ಟು ರೈತರ ತೋಟಗಳು ಹಳದಿ ಎಲೆ ರೋಗದ ಬಾಧೆಗೊಳಗಾಗಿವೆ.

ಪೈಟೋಪ್ಲಾಸ್ಮಾ ಎಂಬ ವೈರಾಣುವಿನಿಂದ ಹರಡುವ ಈ ರೋಗವು ಸಸ್ಯದ ಆಹಾರ ಸರಬರಾಜು ವ್ಯವಸ್ಥೆಯಾದ ಫ್ಲೋಯಂ ಮತ್ತು ಕ್ಸೈಲಂನ್ನು ಬಾಧಿಸುತ್ತದೆ. ಆಹಾರ ಸರಬರಾಜು ವ್ಯವಸ್ಥೆಗೆ ತಡೆಯೊಡ್ಡುತ್ತದೆ

ವಿಜ್ಞಾನಿಗಳು ಏನೆನ್ನುತ್ತಾರೆ?

ಈ ರೋಗಕ್ಕೆ ನಿರ್ದಿಷ್ಟ ಮದ್ದಿಲ್ಲ. ಬೆಳೆ ಬದಲಾವಣೆಯೊಂದೇ ಸೂಕ್ತ ಎಂಬುದು ವಿಜ್ಞಾನಿಗಳ ಹೇಳಿಕೆ. ಟೊಮೆಟೋ ಮತ್ತಿತರ ತರಕಾರಿ ಬೆಳೆಗಳಲ್ಲಿ ಈ ರೋಗ ಕಾಣಿಸಿಕೊಂಡಾಗ ಪರ್ಯಾಯ ಬೆಳೆಗಳಿಗೆ ಬದಲಾಗಬಹುದು. ಆದರೆ, ಅಡಿಕೆ ಬೆಳೆಗಾರರು ಅಷ್ಟು ಸುಲಭದಲ್ಲಿ ಬೆಳೆ ಬದಲಾವಣೆ ಮಾಡುವುದು ಅಸಾಧ್ಯ ಎನ್ನುತ್ತಾರೆ ದಕ್ಷಿಣ ಕನ್ನಡ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ.

ಈ ವೈರಾಣುವಿನ ಜೀನ್ ಬದಲಾವಣೆಗೆ ಸುಮಾರು 10 ವರ್ಷ ಕಾಲ ಬೇಕು. ಅಷ್ಟು ಕಾಲ ಬೆಳೆ ನಿರ್ವಹಣೆ ಹೇಗೆ? ಎಂಬುದು ರೈತರ ಪ್ರಶ್ನೆ.

ತಾತ್ಕಾಲಿಕ ಪರಿಹಾರವಾಗಿ ಗಿಡಗಳಿಗೆ ದುಪ್ಪಟ್ಟು ಪೋಷಕಾಂಶ ಒದಗಿಸಬಹುದು. ಆಗ ಶೇ. 50ರಷ್ಟಾದರೂ ಪೋಷಕಾಂಶ ಮರಗಳಿಗೆ ಪೂರೈಕೆಯಾಗುತ್ತದೆ. ಆಗ ಮರಗಳನ್ನು ಸ್ವಲ್ಪಮಟ್ಟಿಗೆ ನಿಭಾಯಿಸಬಹುದು. ಇದೀಗ ಹಳದಿ ರೋಗ ಪ್ರತಿರೋಧಕ ಶಕ್ತಿಯುಳ್ಳ ಸಸಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಸಾಗಿದೆ ಎಂದು ಸಿಪಿಸಿಆರ್‌ಐ ವಿಜ್ಞಾನಿಗಳು ಹೇಳುತ್ತಾರೆ.

ಪ್ರತಿಕಾಯ ಸಿಂಪಡಣೆ

ಇಂದೋರ್‌ನ ಕೃಷಿ ಸಂಶೋಧನಾ ಸಂಸ್ಥೆಯೊಂದು ಗಿಡಗಳಿಗೆ ಮೇಲ್ಮೈಯಲ್ಲಿ ಪ್ರತಿಕಾಯಗಳನ್ನು ಸಿಂಪಡಿಸುವ ಪರಿಹಾರವೊಂದನ್ನು ನೀಡಿತು. ಆದರೆ, ಅದರ ಪರಿಣಾಮಗಳ ಬಗ್ಗೆ ಖಚಿತತೆ ಇಲ್ಲದ ಕಾರಣ ಅದರ ಬಳಕೆಯೂ ಅಷ್ಟಕ್ಕಷ್ಟೇ ಇದೆ.

ಹೊಸ ಸಸಿಗಳಿಗೂ ಬಾಧೆ

ಬೆಳೆಗಾರ ವಿಶ್ವಾಸ್ ಮಾಪಲತೋಟ ಅವರು ಹೇಳುವುದು ಹೀಗೆ, ʼಸುಳ್ಯ, ಮರ್ಕಂಜ ಪ್ರದೇಶಗಳಲ್ಲಿ ಈ ಬಾಧೆ ಸುಮಾರು 25 ವರ್ಷಗಳಿಂದ ಕಾಣಿಸಿಕೊಂಡಿದೆ. ತೋಟಗಳೆಲ್ಲವೂ ನಾಶವಾಗುವ ಹಂತ ತಲುಪಿದಾಗ ನಾವು ಹಳೆಯ ಮರಗಳನ್ನು ತೆಗೆದು ಹೊಸ ಸಸಿ ನೆಟ್ಟೆವು. ಸಸಿಗಳು ಬೆಳೆದು 5 ರಿಂದ 8 ವರ್ಷಗಳ ನಡುವೆ ಅವುಗಳಿಗೂ ಈ ಬಾಧೆ ವ್ಯಾಪಿಸಿದೆ. ಇಷ್ಟು ಸಾಲದ್ದಕ್ಕೆ ಎಲೆಚುಕ್ಕಿ ರೋಗವೂ ಸಾಂಕ್ರಾಮಿಕವೆಂಬಂತೆ ಕಾಣಿಸಿಕೊಂಡಿತು. ಎರಡೂ ಕಾಯಿಲೆಗಳು ಒಟ್ಟಾದರೆ ಮರಗಳು ಸರ್ವನಾಶವಾಗುತ್ತವೆ. ಎಲೆಚುಕ್ಕಿ ರೋಗಕ್ಕೂ ನಿರ್ದಿಷ್ಟ ಮದ್ದು ಇಲ್ಲ. ಆದರೂ ಕೆಲವು ದ್ರಾವಣಗಳನ್ನು ಸಿಂಪಡಿಸುವುದರಿಂದ ರೋಗ ಹರಡುವುದನ್ನು ಹತೋಟಿಯಲ್ಲಿ ಇಡಬಹುದು. ಆದರೆ, ವರ್ಷಪೂರ್ತಿ ಒಂದಲ್ಲ ಒಂದು ಔಷಧ ಸಿಂಪಡಣೆ ಮಾಡುತ್ತಲೇ ಇರಬೇಕಾಗುತ್ತದೆ. ಈ ರೀತಿಯ ನಿರ್ವಹಣೆ ರೈತರಿಗೆ ತೀರಾ ಕಷ್ಟ ಮತ್ತು ವೆಚ್ಚದಾಯಕ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರೈತರ ತೋಟಗಳಿಗೆ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಸಂಶೋಧನೆಗಳೇನೋ ಸಾಗಿವೆ. ಜನಪ್ರತಿನಿಧಿಗಳೂ ಬಂದಿದ್ದಾರೆ. ಒಂದಿಷ್ಟು ಭರವಸೆಗಳನ್ನಷ್ಟೇ ನೀಡಿ ಹೋಗಿದ್ದಾರೆ. ಈ ಸಮಸ್ಯೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿಲ್ಲ. ಬಹುತೇಕರು ಸಣ್ಣ ರೈತರೇ ಆಗಿರುವುದರಿಂದ ಅವರ ಕ್ಷೀಣ ಧ್ವನಿ ಆಡಳಿತದವರೆಗೆ ತಲುಪುವುದೂ ಕಷ್ಟ ಎಂದು ಕೊಡಿಯಾಲ ಗ್ರಾಮದ ರೈತರೊಬ್ಬರು ವಿಷಾದ ವ್ಯಕ್ತಪಡಿಸಿದರು.

ರೋಗನಿರೋಧಕ ತಳಿ ಹೇಗೆ?

ಹಳದಿ ರೋಗಕ್ಕೆ ಒಳಗಾದ ತೋಟದಲ್ಲಿ ಈ ಬಾಧೆಗೆ ಒಳಗಾಗದೇ ಇರುವ ಮರದ ಅಂಗಾಂಶಗಳನ್ನು (ಹಿಂಗಾರ ಅಥವಾ ಅಡಿಕೆ) ತೆಗೆದು ಹೊಸದಾಗಿ ಕಸಿ ಮಾಡಿ ಸಸಿಗಳನ್ನು ಬೆಳೆಸುವುದು. ಸದ್ಯ ಅದೀಗ ನಿಯಂತ್ರಿತ ವಾತಾವರಣದಲ್ಲಿ ಬೆಳೆಯುತ್ತಿದೆ. ಸ್ವಲ್ಪ ಸಮಯದಲ್ಲಿ ಅದನ್ನು ಸಹಜ ವಾತಾವರಣಕ್ಕೆ ತಂದು ಬೆಳೆಸಲಾಗುವುದು ಎಂದು ಸಿಪಿಸಿಆರ್‌ಐ ಮೂಲಗಳು ಹೇಳಿವೆ.

ಪರಿಹಾರ ಇಲ್ಲ

ರೋಗಕ್ಕೆ ತುತ್ತಾದ ತೋಟಗಳಿಗೆ ಸರ್ಕಾರದಿಂದ ಪರಿಹಾರ ನೀಡುವುದಾಗಲಿ ಅಥವಾ ವಿಮಾ ಪರಿಹಾರವಾಗಲಿ ಇಲ್ಲ. ತೋಟಗಾರಿಕಾ ಇಲಾಖೆ ಮಾತ್ರ ಪರ್ಯಾಯ ಬೆಳೆ ಬೆಳೆಯುವವರಿಗೆ ಸಬ್ಸಿಡಿ ನೀಡುವುದಾಗಿ ಹೇಳಿದೆ. ಅದರಂತೆ ಕೆಲವರು ತಾಳೆ ಬೆಳೆಯತ್ತ ವಾಲಿದ್ದಾರೆ. ತಾಳೆ ಅಡಿಕೆಯಷ್ಟು ವಾಣಿಜ್ಯ ಮೌಲ್ಯ ಹೊಂದಿಲ್ಲ. ಕೆಲವರು ಕರಿಮೆಣಸು ಬೆಳೆಸುತ್ತಿದ್ದಾರೆ. ಹೀಗೆ ಬೆಳೆ ಬದಲಾವಣೆ ಮಾಡಿದಾಗ ರೈತರಿಗೆ ಅಲ್ಪ ಪ್ರಮಾಣದ ಸಬ್ಸಿಡಿ ನೆರವು ಸಿಗುತ್ತದೆ. ನಷ್ಟದ ತೀವ್ರತೆ ಕಡಿಮೆ ಮಾಡಬಹುದುʼ ಎಂದು ಮಹೇಶ್ ಪುಚ್ಚಪ್ಪಾಡಿ ಮತ್ತು ವಿಶ್ವಾಸ್ ಹೇಳಿದರು.

ಮುಂದಿನ ಆತಂಕ

ಸದ್ಯ ಶೃಂಗೇರಿಯಿಂದ ಮಲೆನಾಡು ಭಾಗದ ಸುಮಾರು 150ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಈ ರೋಗ ವ್ಯಾಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗಕ್ಕೆ ವ್ಯಾಪಿಸಲು ದೀರ್ಘ ಅವಧಿಯೇನೂ ಬೇಕಾಗಿಲ್ಲ. ಹೀಗಾದಾಗ ಪಶ್ಚಿಮ ಘಟ್ಟದ ತಪ್ಪಲು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಈ ಸಮಸ್ಯೆ ಹೆಚ್ಚಾಗಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುವ ಆತಂಕವಿದೆ. ಅಷ್ಟರ ಒಳಗೆ ಒಂದೋ ಸರಿಯಾದ ಔಷಧ ಸಿಗಬೇಕು ಅಥವಾ ಸುಧಾರಿತ ತಳಿಗಳು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಾಗಬೇಕು ಎಂಬುದು ಬೆಳೆಗಾರರ ಒತ್ತಾಯ.

Read More
Next Story