ದಾವಣಗೆರೆಯಲ್ಲಿ ಯಡಿಯೂರಪ್ಪೋತ್ಸವ: ವಿರೋಧಿ ಬಣಕ್ಕೆ ವಿಜಯೇಂದ್ರ ಸೆಡ್ಡು?
ಬರುವ ಫೆಬ್ರುವರಿ 27 ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಸಮಾವೇಶ ನಡೆಯಲಿದೆ. ಜನ್ಮದಿನದ ನೆಪದಲ್ಲಿ ಬಲಪ್ರದರ್ಶನ ಮಾಡಲು ಯಡಿಯೂರಪ್ಪ ಬೆಂಬಲಿಗರು ಮುಂದಾಗಿದ್ದಾರೆ.
ಯಡಿಯೂರಪ್ಪ ಅವರ ಜನ್ಮದಿನೋತ್ಸವವನ್ನು ದಾವಣಗೆರೆಯಲ್ಲಿ ಆಯೋಜಿಸಿರುವುದು ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ಬಲ ಪ್ರದರ್ಶನವಲ್ಲ, ಬದಲಿಗೆ ಬಿಜೆಪಿಯೊಳಗಿನ ಯಡಿಯೂರಪ್ಪ ವಿರೋಧಿ ಬಣದ ವಿರುದ್ಧ ಬಲ ವಿಜಯೇಂದ್ರ ಯಡಿಯೂರಪ್ಪ ಬಲ ಪ್ರದರ್ಶನವೇ? ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿನಲ್ಲಿ ತಮ್ಮ ಬಲವರ್ಧನೆಗೆ ಬಿ.ವೈ. ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆಯೇ?
ಬಿಜೆಪಿಯೊಳಗಿನ ಘಟನಾವಳಿಗಳನ್ನು ನೋಡಿದರೆ, ಅದೇ ರೀತಿ ಭಾಸವಾಗುತ್ತದೆ. 2022 ರ ಆಗಸ್ಟ್‌ನಲ್ಲಿ ನಡೆದ ಸಿದ್ದರಾಮಯ್ಯ ಜನ್ಮದಿನೋತ್ಸವ - ಸಿದ್ದರಾಮೋತ್ಸವ ನಡೆಸುವ ಮೂಲಕ ಕಾಂಗ್ರೆಸ್‌ಪಕ್ಷದ ನಾಯಕರ ಎದುರೇ ಬಲಪ್ರದರ್ಶನ ಮಾಡಿದ ಸಿದ್ದರಾಮಯ್ಯ ಮುಂದೆ ವಿಧಾನಸಭೆ ಚುನಾವಣೆ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಸಿದ್ದರು. ಈಗ ಸಿದ್ದರಾಮೋತ್ಸವ ನಡೆದ ದಾವಣಗೆರೆ ಜಿಲ್ಲೆಯಲ್ಲೇ ʼಯಡಿಯೂರಪ್ಪೋತ್ಸವ" ನಡೆಸಿ ಯಡಿಯೂರಪ್ಪ ಅವರ 82 ನೇ ಜನ್ಮದಿನಾಚರಣೆ ನಡೆಸುವ ಮೂಲಕ ಬಿಜೆಪಿಯಲ್ಲೇ ಇರುವ ವಿರೋಧಿ ಬಣದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಯಡಿಯೂರಪ್ಪ ಬಣ ಮುಂದಾಗಿದೆ!
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಯಲಿದ್ದಾರೆ, ವಂಶ ರಾಜಕಾರಣಕ್ಕಿಂತ ಕಾರ್ಯಕರ್ತರಿಗೆ ಹೆಚ್ಚು ಮಹತ್ವ ನೀಡಿ ಬಸನಗೌಡ ಪಾಟೀಲ ಯತ್ನಾಳ ಗುಂಪಿಗೆ ಮಹತ್ವ ಸಿಗಲಿದೆ ಎಂಬ ಚರ್ಚೆಗಳು ಆಗಾಗ ಬಿಜೆಪಿ ವಲಯದಲ್ಲಿ ಏಳುತ್ತಲೇ ಇದ್ದವು. ಜತೆಗೆ, ವಿಜಯೇಂದ್ರ ಹಾಗೂ ಅವರ ಬಣದವರೇ ಆದ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಮತ್ತಿತರರು ವಿಧಾನಸಭೆ ಒಳಗೆ ಮತ್ತು ಪಕ್ಷದೊಳಗೆ ದುರ್ಬಲರಾಗಿದ್ದಾರೆ ಎಂಬ ಮಾತು ಆ ಪಕ್ಷದ ಕಾರ್ಯಕರ್ತರಲ್ಲಿ ಮನೆ ಮಾಡಿತ್ತು.
ಇವಕ್ಕೆಲ್ಲಾ ಉತ್ತರ ನೀಡಲು ವಿಜಯೇಂದ್ರ ಅವರು ತಂತ್ರ ಹೂಡಿದ್ದಾರೆ ಎನ್ನಲಾಗಿದೆ. ತಮ್ಮ ತಂದೆ ಹಾಗೂ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರನ್ನೇ ಮುಂದಿಟ್ಟುಕೊಂಡು ಯತ್ನಾಳ್ ಪಡೆಯ ವಿರುದ್ಧ ಸೆಡ್ಡು ತೀರಿಸಲು ಹಾಗೂ ಆ ಮೂಲಕ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಲು ವಿಜಯೇಂದ್ರ ಸಜ್ಜಾಗಿದ್ದಾರೆ ಎನ್ನಲಾಗಿದೆ. ಆ ಮೂಕ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳನ್ನು ತಣ್ಣಗಾಗಿಸಲು ಈ ತಂತ್ರ ಹೂಡಲಾಗಿದೆ ಎಂದು ಹೇಳಲಾಗಿದೆ.
ಪಕ್ಷದ ಹಿಡಿತ ವಾಪಸಾತಿಗೆ ಯತ್ನ?
ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಪಕ್ಷದ ಮೇಲಿನ ಹಿಡಿತವನ್ನು ಯಡಿಯೂರಪ್ಪ ಕಳೆದುಕೊಂಡಿದ್ದರು. ಹೀಗಾಗಿ ಕಳೆದ ಉಪ ಚುನಾವಣೆಯಲ್ಲಿಯೂ ಯಡಿಯೂರಪ್ಪ ಮಾತು ನಡೆದಿರಲಿಲ್ಲ ಎಂಬ ಮಾತಿದೆ. ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದುಕೊಂಡವರು ಮೂರಕ್ಕೆ ಮೂರು ಸ್ಥಾನಗಳನ್ನು ಸೋತ ಬಳಿಕ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮುಂದಾಗಿದೆ. ಹೀಗಾಗಿ ದಾವಣಗೆರೆಯಲ್ಲಿ ನಡೆಯಲಿರುವ ಯಡಿಯೂರಪ್ಪ ಜನ್ಮದಿನದ ಸಮಾವೇಶ ಮಹತ್ವ ಪಡೆದುಕೊಂಡಿದೆ.
ಬರುವ ಫೆಬ್ರುವರಿ 27 ರಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ. ಜನ್ಮದಿನದ ನೆಪದಲ್ಲಿ ಬಲಪ್ರದರ್ಶನ ಮಾಡಲು ಯಡಿಯೂರಪ್ಪ ಬೆಂಬಲಿಗ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿದಂತೆ ಬಿಜೆಪಿಯ ಬಹಳಷ್ಟು ನಾಯಕರು ಸಿದ್ಧತೆ ನಡೆಸಿದ್ದಾರೆ. ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆಯೇ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಹೈಕಮಾಂಡ್ ಬೆಂಬಲವೂ ಇದೆ ಸಮಾವೇಶಕ್ಕೆ
ದಾವಣಗೆರೆಯಲ್ಲಿ ಯಡಿಯೂರಪ್ಪ ಬೆಂಬಲಿಗರು ನಡೆಸಲು ಮುಂದಾಗಿರುವ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಬೆಂಬಲ ಕೊಟ್ಟಿದೆ ಎಂಬ ಮಾಹಿತಿಯಿದೆ. ಹೀಗಾಗಿಯೇ ರಾಜ್ಯದ ವಿವಿಧ ಭಾಗಗಳಲ್ಲಿನ ಯಡಿಯೂರಪ್ಪ ಬೆಂಬಲಿಗ ರಾಜಕೀಯ ನಾಯಕರು ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ , ಅರವಿಂದ ಬೆಲ್ಲದ್ ಸೇರದಿಂತೆ ಒಂದಿಬ್ಬರು ಬಿಜೆಪಿ ಲಿಂಗಾಯತ ನಾಯಕರು ಮಾತ್ರ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಉಳಿದಂತೆ ಬಿಜೆಪಿಯ ಬಹುತೇಕ ಲಿಂಗಾಯತ ನಾಯಕರೆಲ್ಲರೂ ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಆ ಮೂಲಕ ರಾಜ್ಯದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬ ಸಂದೇಶವನ್ನು ಕೊಡಲು ಮುಂದಾಗಿದ್ದಾರೆ. ಸಮಾವೇಶಕ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿರುವುದು ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ಹಿಡಿತ ಸಾಧಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ.
ಸಮಾವೇಶದಲ್ಲಿ ಭಾಗವಹಿಸುತ್ತಾರಾ? ಮೋದಿ & ಅಮಿತ್ ಶಾ..
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಯುತ್ತಾರೆ ಎಂಬ ಹೇಳಿಕೆಗಳನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಾಗ ನೀಡುತ್ತಿದ್ದರು. ಹೀಗಾಗಿ ವಿಜಯೇಂದ್ರ ಮುಂದುವರೆಯುವ ಕುರಿತು ಬಿಜೆಪಿ ಕಾರ್ಯಕರ್ತರಲ್ಲಿಯೂ ಗೊಂದಲ ಮನೆಮಾಡಿತ್ತು. ಗೊಂದಲಗಳು ಮುಂದುವರಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬುದನ್ನು ಅರಿತಿರುವ ಹೈಕಮಾಂಡ್, ಎಲ್ಲ ಗೊಂದಲಗಳಿಗೆ ದಾವಣಗೆರೆ ಸಮಾವೇಶ ತೆರೆ ಎಳೆಯಲಿದೆ. ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆತರುವ ಪ್ರಯತ್ನಗಳನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ. ಮೋದಿ ಆಗದಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸುವುದು ಪಕ್ಕಾ ಆಗಿದೆ ಎಂಬ ಮಾಹಿತಿಯಿದೆ. ಕೊನೆ ಘಳಿಗೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರೂ ಆಶ್ಚರ್ಯವಿಲ್ಲ ಎನ್ನುತ್ತಿದೆ ಯಡಿಯುರಪ್ಪ ಆಪ್ತರ ಮೂಲಗಳು. ಹೀಗಾಗಿ ಬಣ ರಾಜಕೀಯಕ್ಕೆ ತೆರೆ ಎಳೆಯಲು ಕೇಂದ್ರ ಬಿಜೆಪಿ ತೀರ್ಮಾನಿಸಿಸಿದಂತಾಗಿದೆ.
ಸೈಲೆಂಟ್ ಆದರು!
ಇದಕ್ಕೆ ಕಾರಣವೂ ಇದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿಯಲ್ಲಿನ ಬಣ ಬಿ.ವೈ. ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಇಳಿಸಲು ಪ್ರಯತ್ನಗಳನ್ನು ನಡೆಸಿದ್ದರು. ಹೀಗಾಗಿ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಆಗಾಗ ವಾಗ್ದಾಳಿಯನ್ನು ನಡೆಸುತ್ತಲೇ ಇದ್ದರು. ಆದರೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ದೆಹಲಿಗೆ ಕರೆಯಿಸಿಕೊಂಡು ಕಾರಣ ಕೇಳಿದ ಬಳಿಕ ಯತ್ನಾಳ್ ತಣ್ಣಗಾಗಿದ್ದಾರೆ. ಶಿಸ್ತು ಸಮಿತಿಯ ಶೋಕಾಸ್ ನೋಟಿಸ್ಗೆ ಉತ್ತರಿಸಿದ ಬಳಿಕ ಮಾತನಾಡಿದ್ದ ಯತ್ನಾಳ್, ಇನ್ಮುಂದೆ ನಾನು ಸೈಲೆಂಟ್ ಆಗುತ್ತೇನೆ, ರಮೇಶ್ ಜಾರಕಿಹೊಳಿ ವೈಲೆಂಟ್ ಆಗುತ್ತಾರೆ ಎಂದಿದ್ದರು.
ಆದರೆ ಹಾಗಾಗಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಮೊದಲಿನಂತೆ ಬಿಡುಬೀಸು ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟಿದ್ದಾರೆ. ಜೊತೆಗೆ ಅವರು ಹೇಳಿದಂತೆ ರಮೇಶ್ ಜಾರಕಿಹೊಳಿ ಕೂಡ ರೆಬೆಲ್ ಹೇಳಿಕೆಗಳನ್ನು ಕೊಡುತ್ತಿಲ್ಲ. ಅದಕ್ಕೆ ಕಾರಣವಿದೆ. ಶಿಸ್ತು ಸಮಿತಿಯ ಎದುರು ಎಲ್ಲವನ್ನೂ ವಿವರಿಸಿದ್ದೇನೆ. ಸಮಸ್ಯೆಗಳನ್ನು ಹೈಕಮಾಂಡ್‌ಗೆ ಮುಟ್ಟಿಸಿದ್ದೇನೆ ಎಂದು ಯತ್ನಾಳ್ ಹೇಳಿದ್ದರು. ಯಾಕೆಂದರೆ ಮೊಬೈಲ್ ಬಿಟ್ಟು ಒಳಗೆ ಬನ್ನಿ ಎಂದು ಸೂಚಿಸಿತ್ತಂತೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ. ಜೊತೆಗೆ ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದ ಒಂದು ಫೋಟೋ ಕೂಡ ಬಿಡುಗಡೆ ಆಗಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೆಲ್ಲ ನೋಡಿದ ಯತ್ನಾಳ್ ಟೀಮ್ಗೆ ಹೈಕಮಾಂಡ್ ಯಡಿಯುರಪ್ಪ ಬೆಂಬಲಿಕ್ಕಿರುವುದು ಮನವರಿಕೆಯಾಗಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಶಾಸಕ ಯತ್ನಾಲ್ಗೆ ಹೈಕಮಾಂಡ್ ಬೆಂಬಲವಿದೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಹಾಗಿದೆಯಾ? ಇಲ್ಲ.
ಯತ್ನಾಳ್ ಹಿಂದಿರುವವರು ಯಾರು?
ಶಾಸಕ ಯತ್ನಾಳ್ಗೆ ಬಿಜೆಪಿ ಹೈಕಮಾಂಡ್ ಬೆಂಬಲವಿದೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ನಡೆಯುತ್ತಿದ್ದವು. ಆದರೆ ಯತ್ನಾಳ್ ಹಿಂದಿರುವವರು ರಾಜ್ಯದ ಇಬ್ಬರು ಕೇಂದ್ರ ಸಚಿವರು. ಈ ಇಬ್ಬರು ಕೇಂದ್ರ ಸಚಿವರು ಯಡಿಯೂರಪ್ಪ ವಿರೋಧಿಗಳು ಎನ್ನಲಾಗುತ್ತಿದೆ. ಅವರಿಬ್ಬರ ಬೆಂಬಲದಿಂದಲೇ ಯತ್ನಾಳ್ ಯಡಿಯೂರಪ್ಪ ಕುರಿತು ಹೇಳಿಕೆಗಳನ್ನು ಕೊಡುತ್ತಿದ್ದರಂತೆ. ಉಪ ಚುನಾವಣೆ ಫಲಿತಾಂಶದ ಬಳಿಕ ಆ ಇಬ್ಬರೂ ಕೇಂದ್ರ ಸಚಿವರು ಕೂಡ ಸುಮ್ಮನಾಗಿದ್ದಾರೆ. ಹೀಗಾಗಿ ಹೀಗೆ ಹೇಳಿಕೆ ಕೊಡುವುದನ್ನು ಯತ್ನಾಳ್ ಮುಂದುವರೆಸಿದರೆ ಪಕ್ಷದಿಂದ ಉಚ್ಛಾಟನೆ ಮಾಡಲೂ ಹೈಕಮಾಂಡ್ ತೀರ್ಮಾನಿಸಿತ್ತು ಎಂಬ ಮಾಹಿತಿಯಿದೆ. ಹೀಗಾಗಿಯೇ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೈಲೆಂಟ್ ಆಗಿದ್ದಾರೆ. ಜೊತೆಗೆ ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂಬುದು ದೃಢವಾಗಿದೆ.
ಸೋಲಿಗೆ ವಿಜಯೇಂದ್ರ ಒಬ್ಬರೇ ಕಾರಣರಲ್ಲ?
ಉಪ ಚುನಾವಣೆಯಲ್ಲಿ ಬಿಜೆಪಿ ಮೂರಕ್ಕೆ ಮೂರು ಸ್ಥಾನಗಳಲ್ಲಿ ಸೋಲನ್ನು ಅನುಭವಿಸಿತ್ತು. ಸೋಲಿನ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದ ಯಡಿಯೂರಪ್ಪ, ಸೋಲಿಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬರೆ ಕಾರಣ ಅಲ್ಲ. ಅವರೊಬ್ಬರೆ ಸೋಲಿನ ಹೊಣೆ ಹೊತ್ತುಕೊಳ್ಳುವುದಿಲ್ಲ ಎಂದಿದ್ದರು. ಅದಕ್ಕೆ ಕಾರಣವೂ ಇತ್ತು. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಯಡಿಯೂರಪ್ಪ ಅಭಿಪ್ರಾಯ ಬೇರೆಯದ್ದೆ ಇತ್ತು. ಆದರೆ ಯಡಿಯೂರಪ್ಪ ಕಡೆಗಣಿಸಿ ಶಿಗ್ಗಾವಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಚನ್ನಪಟ್ಟಣ ಕ್ಷೇತ್ರಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಡೂರು ಕ್ಷೆತ್ರಕ್ಕೆ ಬಂಗಾರ ಹನುಮಂತು ಅವರನ್ನು ಆಯ್ಕೆ ಮಾಡಲಾಗಿತ್ತು. ಸಂಡೂರು ಅಭ್ಯರ್ಥಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೆಂಬಲಿಗ. ಹೀಗಾಗಿ ಉಪ ಚುನಾವಣೆ ಸೋಲಿನ ಬಳಿಕ ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ಬದಲಾಯಿತು ಎಂಬ ಮಾಹಿತಿಯಿದೆ.
ಹೈಕಮಾಂಡ್ ಅನುಮತಿ ಪಡೆದೇ ಸಮಾವೇಶ ಮಾಡುತ್ತಿದ್ದೇವೆ: ಹರತಾಳು ಹಾಲಪ್ಪ
ಸಮಾವೇಶದ ವಿಚಾರಕ್ಕೆ ಸಂಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಪಕ್ಷದ ವರಿಷ್ಠರನ್ನು ಸಮಾವೇಶಕ್ಕೆ ಆಹ್ವಾನಿಸುತ್ತೇವೆ ಎಂದರು. ಸಮಾವೇಶವನ್ನು ಎಲ್ಲರೂ ಜೊತೆಯಾಗಿ ಆಯೋಜನೆ ಮಾಡುತ್ತೇವೆ. ಯಾವುದೇ ಗೊಂದಲಗಳು ಇರುವುದಿಲ್ಲ. ಜೊತೆಗೆ ಫೆ. 27ರ ನಂತರ ರಾಜ್ಯ ಬಿಜೆಪಿಯಲ್ಲಿನ ಸಣ್ಣಪುಟ್ಟ ಗೊಂದಲಗಳಿಗೂ ತೆರೆ ಬೀಳಲಿದೆ. ಪಕ್ಷದ ವರಿಷ್ಠರೆಲ್ಲರೂ ಸಮಾವೇಶದಲ್ಲಿ ಭಾಗವಹಿಸುವಂತೆ ನಾವು ಮಾಡುತ್ತೇವೆ. ಸಮಾವೇಶ ಮಾಡಲು ಇನ್ನೂ 2 ತಿಂಗಳುಗಳ ಕಾಲಾವಕಾಶವಿದೆ. ಈಗ ಪೂರ್ವಬಾವಿ ಸಬೆಯನ್ನು ಮಾಡಿದ್ದೆವೆ. ಇದೊಂದು ರಾಜಕೀಯ ಸಮಾವೇಶವಾಗಲಿದೆ ಎಂದು ಸಮಾವೇಶದ ಕುರಿತು ವಿವರ ನೀಡಿದರು.