BJP Infighting | ಲಿಂಗಾಯತ ಸಮಾವೇಶ: ಬಿಎಸ್‌ವೈ ಭದ್ರಕೋಟೆಗೆ ಲಗ್ಗೆ ಹಾಕಲು ಸಜ್ಜಾಯಿತೆ ಯತ್ನಾಳ್‌ ಬಣ?
x
ಯತ್ನಾಳ್‌

BJP Infighting | ಲಿಂಗಾಯತ ಸಮಾವೇಶ: ಬಿಎಸ್‌ವೈ ಭದ್ರಕೋಟೆಗೆ ಲಗ್ಗೆ ಹಾಕಲು ಸಜ್ಜಾಯಿತೆ ಯತ್ನಾಳ್‌ ಬಣ?

ಯತ್ನಾಳ್‌ ಬಣ ಮತ್ತೊಂದು ಮಹತ್ವದ ಕಾರ್ಯತಂತ್ರ ಹೆಣೆದಿದ್ದು, ನೇರ ಬಿ ಎಸ್‌ ಯಡಿಯೂರಪ್ಪ ಅವರ ಕೋಟೆಗೇ ಲಗ್ಗೆ ಹಾಕಲು ಸಜ್ಜಾಗಿದೆ. ಹೌದು, ಯಡಿಯೂರಪ್ಪ ಮತ್ತು ಅವರ ಪುತ್ರದ ಭದ್ರಕೋಟೆಯಾದ ಶಿವಮೊಗ್ಗದಲ್ಲೇ ಹೋಗಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಅವರ ಬೆನ್ನಿಗೆ ನಿಂತಿರುವ ತಂದೆ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ರಣಕಹಳೆ ಮೊಳಗಿಸಲು ಯತ್ನಾಳ್‌ ನೇತೃತ್ವದ ಬಿಜೆಪಿ ಬಂಡಾಯ ಬಣ ಸಜ್ಜಾಗಿದೆ.


Click the Play button to hear this message in audio format

ಬಿಜೆಪಿಯ ಬೇಗುದಿಗೆ ಹೈಕಮಾಂಡ್‌ ನಾಯಕರು ನಡೆಸಿದ ಶಮನದ ಪ್ರಯತ್ನಗಳು ಫಲ ಕೊಟ್ಟಂತಿಲ್ಲ. ದೆಹಲಿಗೆ ಹೋಗಿ ವರಿಷ್ಠರ ನೋಟಿಸ್‌ಗೆ ಉತ್ತರ ಕೊಟ್ಟು ಎರಡೇ ದಿನದಲ್ಲಿ ಭಿನ್ನಮತೀಯರ ನಾಯಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಮತ್ತೆ ತಮ್ಮ ಭಿನ್ನರಾಗವನ್ನು ತಾರಕಕ್ಕೇರಿಸಿದ್ದಾರೆ.

ದೆಹಲಿಗೆ ತಮ್ಮ ಬಣದ ಪ್ರಮುಖರ ತಂಡ ಕಟ್ಟಿಕೊಂಡೇ ಹೋಗಿಬಂದ ಯತ್ನಾಳ್‌, ಅಲ್ಲಿಂದ ಬಂದ ಬಳಿಕ ಎರಡು ದಿನ ತಮ್ಮ ಎದುರಾಳಿ ಬಣದ ವಿಷಯದಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದರು. ಆದರೆ, ಅವರ ಬದಲಾಗಿ ಮತ್ತೊಬ್ಬ ಭಿನ್ನಮತೀಯ ಪ್ರಮುಖ ರಮೇಶ್‌ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಕ್ಕೆ ವಿಜಯೇಂದ್ರ ಅವರ ಅರ್ಹತೆಯನ್ನೇ ಪ್ರಶ್ನಿಸಿ ವ್ಯಂಗ್ಯವಾಡಿದ್ದರು. ಆ ಮೂಲಕ ಯತ್ನಾಳ್‌ ಅವರ ವರಸೆಯನ್ನು ತಾವು ಮುಂದುವರಿಸುವ ಸೂಚನೆ ನೀಡಿದ್ದರು.

ಇದೀಗ ಯತ್ನಾಳ್‌ ಅವರೇ ಆ ವಿಷಯವನ್ನು ಖಚಿತಪಡಿಸಿದ್ದು, ಇನ್ನು ಮುಂದೆ ನಾನು ಸೈಲೆಂಟ್‌, ಜಾರಕಿಹೊಳಿ ವೈಲೆಂಟ್‌ ಎನ್ನುವ ಮೂಲಕ ತಮ್ಮ ಮೌನಕ್ಕೂ, ಮತ್ತು ಜಾರಕಿಹೊಳಿ ಅವರ ವಾಗ್ದಾಳಿಗೂ ನಂಟು ಕಲ್ಪಿಸಿದ್ದಾರೆ. ಇನ್ನು ಮುಂದೆ ರಮೇಶ್‌ ಜಾರಕಿಹೊಳಿ ಅವರು ವಿಜಯೇಂದ್ರ ವಿರುದ್ಧದ ವಾಕ್ಸಮರದ ಹೊಣೆ ಹೊರಲಿದ್ದಾರೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಯತ್ನಾಳ್‌ ಬಣ ಮತ್ತೊಂದು ಮಹತ್ವದ ಕಾರ್ಯತಂತ್ರ ಹೆಣೆದಿದ್ದು, ನೇರ ಬಿ ಎಸ್‌ ಯಡಿಯೂರಪ್ಪ ಅವರ ಕೋಟೆಗೇ ಲಗ್ಗೆ ಹಾಕಲು ಸಜ್ಜಾಗಿದೆ. ಹೌದು, ಯಡಿಯೂರಪ್ಪ ಮತ್ತು ಅವರ ಪುತ್ರದ ಭದ್ರಕೋಟೆಯಾದ ಶಿವಮೊಗ್ಗದಲ್ಲೇ ಹೋಗಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಅವರ ಬೆನ್ನಿಗೆ ನಿಂತಿರುವ ತಂದೆ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ರಣಕಹಳೆ ಮೊಳಗಿಸಲು ಯತ್ನಾಳ್‌ ನೇತೃತ್ವದ ಬಿಜೆಪಿ ಬಂಡಾಯ ಬಣ ಸಜ್ಜಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೇ ಲಿಂಗಾಯತ ಸಮಾವೇಶ ನಡೆಸಲು ಮೂಲಕ ಯಡಿಯೂರಪ್ಪ ಅವರ ಮುಡಿಗೇರಿರುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂಬ ಹೆಗ್ಗಳಿಕೆಯನ್ನೇ ಬುಡಸಹಿತ ಅಲುಗಾಡಿಸುವ ಪ್ರಯತ್ನಕ್ಕೆ ಯತ್ನಾಳ್‌ ಬಣ ಮುಂದಾಗಿದೆ. ಆ ಪ್ರಯತ್ನಕ್ಕೆ ಮಧ್ಯ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಲ್ಲಿ ಒಬ್ಬರಾದ ಬಿಜೆಪಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ ಆಸರೆಯಾಗಿ ನಿಂತಿದ್ದಾರೆ.

ಎರಡನೇ ಹಂತದ ವಕ್ಫ್‌ ಆಸ್ತಿ ನೋಂದಣಿ ವಿರೋಧಿ ಹೋರಾಟದ ಜೊತೆಗೇ ಶಿವಮೊಗ್ಗದ ಶಿಕಾರಿಪುರ ಅಥವಾ ಸೊರಬದಲ್ಲಿ ಸಾದರ ಮತ್ತು ಪಂಚಮಸಾಲಿ ಸಮುದಾಯದ ಪ್ರಾಬಲ್ಯವನ್ನೇ ಬಳಸಿಕೊಂಡು ಲಿಂಗಾಯತ ಸಮಾವೇಶ ನಡೆಸುವ ಮೂಲಕ ವಿಜಯೇಂದ್ರ ಸೇರಿದಂತೆ ಯಡಿಯೂರಪ್ಪ ಕುಟುಂಬದ ರಾಜಕೀಯ ಹಿಡಿತಕ್ಕೆ ಮರ್ಮಾಘಾತ ನೀಡುವುದು ಯತ್ನಾಳ್‌ ಬಣದ ಗುರಿ. ಆ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ಎರಡು ದಿನಗಳಿಂದ ಸರಣಿ ಸಭೆಗಳನ್ನು ನಡೆಸಿ ಕಾರ್ಯತಂತ್ರಗಳನ್ನು ಹೆಣೆದಿರುವ ಯತ್ನಾಳ್‌ ಬಣ, ಅಡಿಕೆ ಧಣಿ ಸಿದ್ದೇಶ್ವರ್‌ ಅವರ ಹಣಬಲದೊಂದಿಗೆ ಭರ್ಜರಿ ಸಮಾವೇಶ ನಡೆಸಲು ನಿರ್ಧರಿಸಿದೆ.

ಕುಮಾರ್‌ ಬಂಗಾರಪ್ಪ ತಯಾರಿ

ಲಿಂಗಾಯತ ಸಮಾವೇಶದ ಕಾರ್ಯತಂತ್ರದ ಚರ್ಚೆಯ ಬೆನ್ನಲ್ಲೇ ಯತ್ನಾಳ್‌ ಬಣದ ಪ್ರಮುಖರಲ್ಲಿ ಒಬ್ಬರಾಗಿರುವ ಮತ್ತು ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಿಂದ ಯತ್ನಾಳ್‌ ಜೊತೆ ಗುರುತಿಸಿಕೊಂಡಿರುವ ಏಕೈಕ ಪ್ರಮುಖರಾಗಿರುವ ಕುಮಾರ್‌ ಬಂಗಾರಪ್ಪ ತಮ್ಮ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸರಣಿ ಸಭೆಗಳನ್ನು ಘೋಷಿಸಿದ್ದಾರೆ.

ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರದ ಪ್ರವಾಸ ಹಮ್ಮಿಕೊಂಡಿರುವ ಅವರು, ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸರಣಿ ಬೂತ್‌ ಸಭೆಗಳನ್ನು ಘೋಷಿಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ನಡುವೆ, ಸೊರಬ ಅಥವಾ ಶಿಕಾರಿಪುರದಲ್ಲಿಯೇ ಲಿಂಗಾಯತ ಸಮಾವೇಶ ನಡೆಸುವ ಚರ್ಚೆಯ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯತ್ನಾಳ್‌ ಬಣದ ಶಾಸಕರೊಬ್ಬರು, ಶಿಕಾರಿಪುರದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಸಾದರ ಲಿಂಗಾಯತ ಸಮುದಾಯದವರಿದ್ದಾರೆ. ಹಾಗಾಗಿ ಅಲ್ಲಿಯೇ ಸಮಾವೇಶ ನಡೆಸುವ ಮೂಲಕ ವಿಜಯೇಂದ್ರ ಅವರ ತವರು ಕ್ಷೇತ್ರದಲ್ಲೇ ಅವರ ವಿರುದ್ಧ ರಹಕಹಳೆ ಮೊಳಗಿಸಲಾಗುವುದು ಎಂದೂ ಹೇಳಿದ್ದಾರೆ.

ಒಟ್ಟಾರೆ, ಬಿಜೆಪಿಯ ರಾಜ್ಯಾಧ್ಯಕ್ಷರ ಭದ್ರಕೋಟೆಗೇ ಮುತ್ತಿಗೆ ಹಾಕಲು ಇದೀಗ ಯತ್ನಾಳ್‌ ಬಣ ಸಜ್ಜಾಗಿರುವ ಈ ಬೆಳವಣಿಗೆ, ದೆಹಲಿ ಹೈಕಮಾಂಡ್‌ ಪರೋಕ್ಷವಾಗಿ ಅವರ ಬೆನ್ನಿಗೆ ನಿಂತಿದೆ ಎಂಬುದನ್ನು ಸಾರಿ ಹೇಳುತ್ತಿರುವಂತಿದೆ. ವರಿಷ್ಠರ ಬೆಂಬಲವಿಲ್ಲದೆ ಯತ್ನಾಳ್‌ ಮತ್ತು ಅವರ ಬಣದ ಪ್ರಮುಖರು, ದೆಹಲಿಯಿಂದ ಬಂದ ಎರಡೇ ದಿನದಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೇ ಅಂತಹ ಅನುಮಾನಗಳನ್ನು ಗಟ್ಟಿಗೊಳಿಸುತ್ತಿದೆ.

Read More
Next Story