ಪೆಟ್ರೋಲ್ ಇಂಡೆಂಟ್ ದುರ್ಬಳಕೆ | ಇಂಧನ ಮಿತಿ ಮಾರ್ಗಸೂಚಿ ಪ್ರಕಟಿಸಲು ಯತ್ನಾಳ್ ಆಗ್ರಹ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೀಡುವ ಪೆಟ್ರೋಲ್ ಇಂಡೆಂಟ್ ಬಳಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಇಂಧನ ಬಳಕೆಗೆ ಮಿತಿ ಹೇರುವಂತೆ ಒತ್ತಾಯಿಸಿದ್ದಾರೆ.
ವಕ್ಫ್ ಆಸ್ತಿ ವಿವಾದದ ವಿರುದ್ಧ ಹೋರಾಟ ಸಂಘಟಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ವಕ್ಫ್ ಇಲಾಖೆ ವಿರುದ್ಧ ತಿರುಗಿಬಿದ್ದಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ವಾಹನಗಳ ಚಾಲಕರು ಪೆಟ್ರೋಲ್ ಬಂಕ್ ಗಳೊಂದಿಗೆ ಶಾಮೀಲಾಗಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲಾಖೆ ನೀಡುವ ಪೆಟ್ರೋಲ್ ಇಂಡೆಂಟ್ ಬಳಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಯತ್ನಾಳ್ ಬರೆದ ಪತ್ರದಲ್ಲಿ ಏನಿದೆ?
ರಾಜ್ಯದ ತೆರಿಗೆ ಹಣವನ್ನು ಜವಾಬ್ದಾರಿಯುತವಾಗಿ ರಾಜ್ಯದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು. ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರು, ರೈತರ ಶ್ರೇಯೋಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಉಪಯೋಗಿಸಬೇಕು. ಆದರೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ವಾಹನಗಳ ಚಾಲಕರು ಮನಬಂದಂತೆ ಪೆಟ್ರೋಲ್ ಇಂಡೆಂಟ್ ಬಳಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.
ಕಾರುಗಳಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು. ಇಲಾಖೆಯ ಮುಖ್ಯಸ್ಥರ ಸಹಿ ಇರಬೇಕು. ಈಚೆಗೆ ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಅವರ ವಾಹನ ಸಂಖ್ಯೆ KA 01 GB 9990 ಗೆ ಇಂಡೆಂಟ್ ಇಲ್ಲದಿದ್ದರೂ ಪೆಟ್ರೋಲ್ ತುಂಬಿಸುತ್ತಿರುವುದನ್ನು ಮಾಧ್ಯಮಗಳು ಬಯಲು ಮಾಡಿವೆ. ಐದು ತಿಂಗಳಲ್ಲಿ ಇದೊಂದೇ ವಾಹನಕ್ಕೆ 390 ಲೀಟರ್ ಪೆಟ್ರೋಲ್ ತುಂಬಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರದ ವಿವಿಧ ಇಲಾಖೆಗಳಿಗೆ ಇಂಧನ ಮಿತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂಧನ ಮಿತಿ ಮಾರ್ಗಸೂಚಿಗೆ ಆಗ್ರಹ
ಸರ್ಕಾರಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರಿಗೆ ನೀಡಿರುವ ವಾಹನಗಳಿಗೆ ಇಂತಿಷ್ಟೇ ಪ್ರಮಾಣದ ಪೆಟ್ರೋಲ್ ಹಾಕಿಸಬೇಕೆಂಬ ನಿಯಮ ಅಥವಾ ಮಿತಿ ಇಲ್ಲ. ಹಾಗಾಗಿ ಕೂಡಲೇ ಎಲ್ಲ ವಾಹನಗಳಿಗೆ ಏಕರೂಪವಾಗಿ ಇಂಧನ ಬಳಕೆಯ ಬಗ್ಗೆ ಮಾರ್ಗಸೂಚಿ ಹೊರಡಿಸಬೇಕು. ವಾಹನ ಕ್ರಮಿಸುವ ದೂರ ಹಾಗೂ ಬಳಸುವ ಇಂಧನದ ಕುರಿತು ಪರಿಶೀಲನೆ ನಡೆಸಬೇಕು. ಸರ್ಕಾರ ಕೂಡಲೇ ‘ಇಂಧನ ನೀತಿ ಮಾರ್ಗಸೂಚಿʼ (Ruel Usage Policy) ಪರಿಚಯಿಸಿ ಸರ್ಕಾರದ ಹಣ ಪೋಲು ಮಾಡುವುದನ್ನು ತಡೆಯಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.