Mysore MUDA Scam | ವಿಜಯೇಂದ್ರ, ಜಿ ಟಿ ದೇವೇಗೌಡ ಮುಡಾ ಅಕ್ರಮ ಪಾಲುದಾರರು: ಯತ್ನಾಳ್ ಆರೋಪ
ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ 600ಕ್ಕೂ ಹೆಚ್ಚು ನಿವೇಶಗಳ ಹಂಚಿಕೆ ವಿವರ ಕೇಳುವ ಮೂಲಕ ಒಂದು ಕಡೆ ಇಡಿ ತನ್ನ ಹಿಡಿತವನ್ನು ಬಲಪಡಿಸುತ್ತಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಮಾತ್ರವಲ್ಲದೆ, ಬಿಜೆಪಿ ಮತ್ತು ಜೆಡಿಎಸ್ ವಲಯದಲ್ಲೂ ಆತಂಕದ ಕಂಪನ ಆರಂಭವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಮಾಡಿದ್ದ 14 ನಿವೇಶನಗಳ ಜೊತೆಗೆ ಇತರೆ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ವಿಷಯವನ್ನು ಮಾಧ್ಯಮ ಹೇಳಿಕೆಯ ಮೂಲಕ ಬಹಿರಂಗಪಡಿಸಿದ್ದ ಇಡಿ, ಅದರ ಬೆನ್ನಲ್ಲೇ ಹೆಚ್ಚುವರಿಯಾಗಿ 631 ನಿವೇಶನಗಳ ಕುರಿತ ವಿವರ ನೀಡುವಂತೆ ಮುಡಾಗೆ ಸೂಚಿಸಿತ್ತು.
ಈ ವಿಷಯ ಬಹಿರಂಗವಾಗುತ್ತಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಂಚಿಕೆ ಭ್ರಷ್ಟಾಚಾರದ ಆರೋಪ ಮಾಡಿ ಪಾದಯಾತ್ರೆ ನಡೆಸಿದ್ದ, ಕಳೆದ ಕೆಲವು ತಿಂಗಳುಗಳಿಂದ ನಿರಂತರ ಆರೋಪಗಳ ಮೂಲಕ ಪ್ರಕರಣವನ್ನು ಜೀವಂತವಾಗಿ ಇಡುವ ಪ್ರಯತ್ನದಲ್ಲಿ ಮುಳುಗಿರುವ ಪ್ರತಿಪಕ್ಷಗಳ ಪಾಳೆಯದಲ್ಲೂ ಈಗ ಅಕ್ರಮದ ಸುಳಿಯಲ್ಲಿ ತಮ್ಮ ಮುಖಂಡರೂ ಸಿಲುಕಿರುವ ಆತಂಕದ ಕಂಪನ ಆರಂಭವಾಗಿದೆ.
ಈ ನಡುವೆ, ಬಿಜೆಪಿ ಭಿನ್ನಮತೀಯ ನಾಯಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮುಡಾ ಹಗರಣದಲ್ಲಿ ಬಿ ವೈ ವಿಜಯೇಂದ್ರ ಹಾಗೂ ಜಿ ಟಿ ದೇವೇಗೌಡರಿಗೂ ಪಾಲಿದೆ ಎಂದು ಹೇಳುವ ಮೂಲಕ ಯತ್ನಾಳ್, ಮುಡಾ ಹಗರಣಕ್ಕೆ ಹೊಸ ತಿರುವು ನೀಡಿದ್ದಾರೆ.
ಮೈಸೂರು ಮುಡಾ ಹಗರಣದಲ್ಲಿ ಯಾರೂ ಸಾಚಾ ಇಲ್ಲ. ಸಿದ್ದರಾಮಯ್ಯ ಅವರು ಆರೋಪಿ ಇದ್ದಾರೆ. ಆದರೆ, ಆ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡರ ಪಾಲೂ ಇದೆ ಎಂದು ಯತ್ನಾಳ್ ಹೇಳಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಯತ್ನಾಳ್ ನೀಡಿರುವ ಈ ಹೇಳಿಕೆ ಸಹಜವಾಗೇ ಬಿಜೆಪಿಯ ವಿಜಯೇಂದ್ರ ಬಣದ ಆಕ್ರೋಶಕ್ಕೆ ಕಾರಣವಾಗಿದ್ದರೆ, ಮೈಸೂರು ಮುಡಾ ನಿವೇಶನಗಳನ್ನು ಪಡೆದಿರುವ ಹಲವರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆ ಮುಡಾ ಹಗರಣದ ವಿಷಯದಲ್ಲಿ ಬಿ ವೈ ವಿಜಯೇಂದ್ರ ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಆ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಪಕ್ಷಗಳ ನೇತೃತ್ವದಲ್ಲಿ ನಡೆದ ಜಂಟೀ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದ ಭಿನ್ನರ ಬಣ, ಸಿದ್ದರಾಮಯ್ಯ ರಾಜೀನಾಮೆ ಮೂಲಕ ಕಾಂಗ್ರೆಸ್ ಮುಖಂಡ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಅಧಿಕಾರದ ಪಟ್ಟ ಕಟ್ಟುವ ತಂತ್ರಗಾರಿಕೆಯ ಭಾಗವಾಗಿ ವಿಜಯೇಂದ್ರ ಈ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.
ಅಲ್ಲದೆ, ಜಿ ಟಿ ದೇವೇಗೌಡ ಅವರು ಅದೇ ವೇಳೆ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ, ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮವೇನೂ ನಡೆದಿಲ್ಲ, ರಾಜಕೀಯ ಕಾರಣಕ್ಕಾಗಿ ಕೆಲವರು ಇದನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ, ತಮ್ಮದೇ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ನಿಲುವನ್ನೇ ಪರೋಕ್ಷವಾಗಿ ರಾಜಕೀಯಪ್ರೇರಿತ ಎಂದು ಟೀಕಿಸಿದ್ದರು.