
ಸಚಿವೆಗೆ ನಿಂದನೆ ಪ್ರಕರಣ | ಸಿಐಡಿ ಎದುರು ಹೇಳಿಕೆ ದಾಖಲಿಸಿದ ಯತೀಂದ್ರ
ಶಾಸಕ ಸಿ ಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಅಶ್ಲೀಲ ಪದ ಬಳಸಿದ್ದು ನಿಜ. ಅದನ್ನು ನಾವು ವಿರೋಧಿಸಿದ್ದೆವು ಎಂದು ಯತೀಂದ್ರ ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎದುರು ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್‌ನ ಕಾಂಗ್ರೆಸ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸೋಮವಾರವೇ ವಿಚಾರಣೆಗೆ ಹಾಜರಾಗಿದ್ದು, ಕಲಾಪದ ಸಂದರ್ಭದಲ್ಲಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಅಶ್ಲೀಲ ಪದ ಬಳಸಿದ್ದು ನಿಜ. ಅದನ್ನು ನಾವು ವಿರೋಧಿಸಿದ್ದೆವು ಎಂದು ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಿಖಿತ ರೂಪದಲ್ಲಿ ನೋಟಿಸ್ ನೀಡಿ, ಬುಧವಾರದ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಸೋಮವಾರ ಸಂಜೆ 5ರ ಸುಮಾರಿಗೆ ಯತೀಂದ್ರ ಸಿದ್ದರಾಮಯ್ಯ ಅವರು ಸಿಐಡಿ ಕಚೇರಿಗೆ ಬಂದಿದ್ದರು. ರಾತ್ರಿ 7 ಗಂಟೆವರೆಗೂ ತನಿಖಾಧಿಕಾರಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಯತೀಂದ್ರ ಅವರ ಮೌಖಿಕ ಮತ್ತು ಲಿಖಿತ ರೂಪದಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರು ನೀಡಿದ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಮಂಗಳವಾರ ಕಾರ್ಯಕ್ರಮವಿದ್ದ ಕಾರಣಕ್ಕೆ ಸೋಮವಾರವೇ ಅವರು ವಿಚಾರಣೆಗೆ ಬಂದಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.