ಕಾಂಗ್ರೆಸ್‌ ಕಚೇರಿಯಲ್ಲಿ ಸಾಹಿತಿಗಳ ಸಭೆ| ಸಾಹಿತಿಗಳೂ ರಾಜಕಾರಣಿಗಳೇ ಎಂದ ಡಿ.ಕೆ. ಶಿವಕುಮಾರ್‌!
x
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಅವರು ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗಿರುವುದು.

ಕಾಂಗ್ರೆಸ್‌ ಕಚೇರಿಯಲ್ಲಿ ಸಾಹಿತಿಗಳ ಸಭೆ| ಸಾಹಿತಿಗಳೂ ರಾಜಕಾರಣಿಗಳೇ ಎಂದ ಡಿ.ಕೆ. ಶಿವಕುಮಾರ್‌!


ಕೆಪಿಸಿಸಿ ಕಚೇರಿಯಲ್ಲಿ ಸಾಹಿತಿಗಳ ಸಭೆ ನಡೆಸಿರುವುದು ಸಾರ್ವಜನಿಕ ವಲಯದಿಂದ ಟೀಕೆಗೊಳಗಾಗಿರುವ ಬೆನ್ನಿಗೇ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮತ್ತೆ ಬೆಂಕಿಗೆ ತುಪ್ಪ ಸುರಿದಿದ್ದು, "ಆಲ್‌. ಆರ್‌ ಪೊಲಿಟೀಷಿಯನ್ಸ್‌, ಅವರದ್ದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ಅವರೂ ರಾಜಕೀಯ ಮಾಡುತ್ತಾರೆ," ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು "ಸಾಹಿತಿಗಳು ರಾಜಕಾರಣಿಗಳು ಆಗಬಾರದು ಅಂತೇನಿಲ್ಲವಲ್ಲ. ಅಕಾಡೆಮಿ ಅಧ್ಯಕ್ಷರ ಸಭೆ ನಾನೇ ಕರೆದಿದ್ದು, ಅದರಲ್ಲೇನಿದೆ. ಇದು ಸರ್ಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು" ಎಂದು ಹೇಳಿದರು.

"ಪ್ರಾಧಿಕಾರಗಳು ಇಂಡಿಪೆಂಡೆಂಡ್‌ ಬಾಡಿಗಳಲ್ಲ, ಆಲ್‌ ಆರ್‌ ಪೊಲಿಟೀಷಿಯನ್ಸ್‌, ಅವರದ್ದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ಅವರೂ ರಾಜಕೀಯ ಮಾಡುತ್ತಾರೆ. ಅದನ್ನು ಕೆಲವೊಬ್ಬರು ಹೇಳಿಕೊಳ್ಳದೇ ಇರಬಹುದು. ನಾನು ಕರೆದಾಗ, ಇಷ್ಟ ಇದ್ದೋರು ಬಂದಿದ್ದಾರೆ. ಕೆಲವರು ಬಂದಿಲ್ಲ" ಎಂದರು.


"ಇದು ನಿಮಗೆ (ಮಾಧ್ಯಮದವರಿಗೆ) ತಪ್ಪು ಎನಿಸಬಹುದು. ಸಾಹಿತಿಗಳೂ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು. ನಿಮ್ಮನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುವುದಿಲ್ಲವೇ, ನೀವು ಬೆಳಗಿಂದ ಸಾಯಂಕಾಲದ ತನಕ ನಮ್ಮ ಹಿಂದೆ ಓಡಾಡುವುದಿಲ್ಲವೇ? ನಮಗೋಸ್ಕರ ಬಡಿದಾಡೋದಿಲ್ಲವೇ?" ಎಂದು ಹೇಳಿದರು.

ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜು ಮತ್ತಿತರರು ಭಾಗವವಹಿಸಿದ್ದರು.


Read More
Next Story