ಮುಡಾ, ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ
x

ಮುಡಾ, ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ


ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಸುಮಾರು 50 ಸಾವಿರ ಕೋಟಿ ಮೊತ್ತದ ಅವ್ಯವಹಾರ ಪ್ರಕರಣಗಳನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಮೈಸೂರಿನ ಕೆ.ಆರ್‌.ನಗರದ ವಕೀಲ ಸಿ.ಸಂತೋಷ್‌ ಈ ಅರ್ಜಿ ಸಲ್ಲಿಸಿದವರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿ ಮಾಡಿದ್ದಾರೆ. ವಿಚಾರಣೆ ಇನ್ನಷ್ಟೇ ನಿಗದಿಯಾಗಬೇಕಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣ ಅವ್ಯವಹಾರವಾಗಿದೆ. ಹಾಗೆಯೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂ, ಹಗರಣ ನಡೆದಿದೆ. ರಾಜ್ಯದ ವಿವಿಧ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಕುರಿತು ವಿದ್ಯುನ್ಮಾನ ಮಾಧ್ಯಮಗಳು, ಪತ್ರಿಕೆ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ.

ಸಿಎಂ ಸಿದ್ದರಾಮಯ್ಯ, ಹಲವು ಸಚಿವರು ಹಾಗೂ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರದಲ್ಲಿ ಭಾಗಿಯಾಗಿದ್ದಾರೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲೂ ಹಲವರು ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು, ವಿವಿಧ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಆ ಹಗರಣಗಳಲ್ಲಿ ಆಳ ತಿಳಿಯಲು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ 40 ಕೋಟಿ ರೂ. 2019 ರಿಂದ 23ರ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ 500 ಕೋಟಿ, ಕೋವಿಡ್‌-19 ಹೆಸರಿನಲ್ಲಿ 40 ಸಾವಿರ ಕೋಟಿ, ಪಿಎಸ್‌ಐ ನೇಮಕಾತಿಯಲ್ಲಿ 100 ಕೋಟಿ, ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ.40 ಕಮಿಷನ್​ನಿಂದ 2 ಸಾವಿರ ಕೋಟಿ, 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿ 200 ಕೋಟಿ. ಎಪಿಎಂಸಿಯಲ್ಲಿ 47.16, ಭೋವಿ ಅಭಿವೃದ್ಧಿ ನಿಗಮದಲ್ಲಿ 87, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ, ಬಿಟ್‌ಕಾಯಿನ್‌ ಹಗರಣದಲ್ಲಿ 1 ಸಾವಿರ ಕೋಟಿ, ಬಿ. ಎಸ್‌ ಯಡಿಯೂರಪ್ಪ ಅಕ್ರಮ ಸಂಪಾದನೆ 750 ಕೋಟಿ, ನಾಲ್ಕು ವೈದ್ಯಕೀಯ ಕಾಲೇಜು ಹಗರಣದಲ್ಲಿ 300 ಕೋಟಿ, 2022-23ನೇ ಸಾಲಿನಲ್ಲಿ ದೇವರಾಜು ಅರಸ್‌ ಟ್ರಕ್‌ ಟರ್ಮಿನಲ್​ನಲ್ಲಿ 50 ಕೋಟಿ ಹಣ ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನಲ್ಲಿ ಕೋಟ್ಯಂತರ ಹಣದ ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Read More
Next Story